ಕ್ಲೀನ್ ಉಡುಪಿ ಪ್ರಾಜೆಕ್ಟ್ ವತಿಯಿಂದ 8ನೇ  ಪರಿಸರ ಸ್ನೇಹಿ ಅಭಿಯಾನ

ಉಡುಪಿ: ಕ್ಲೀನ್ ಉಡುಪಿ ಪ್ರಾಜೆಕ್ಟ್ ವತಿಯಿಂದ 8ನೇ ವಾರದ ಪರಿಸರ ಸ್ನೇಹಿ ಅಭಿಯಾನವು ಶನಿವಾರ ಸಂಜೆ ಅಜ್ಜರಕಾಡು ಉದ್ಯಾನವನದಲ್ಲಿ ನಡೆಯಿತು.
ವೆಸ್ಟ್‌ ಇಂಡೀಸ್‌ನಲ್ಲಿ ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕರಾಗಿರುವ ಡಾ. ಶಿವಾನಂದ ನಾಯಕ್ ಅವರು ಚಾಲನೆ ನೀಡಿ ಮಾತನಾಡಿ, ಪರಿಸರವನ್ನು ಸಂರಕ್ಷಿಸಲು ಪ್ರತಿಯೊಬ್ಬರೂ ಕ್ರಿಯಾಶೀಲ ಪ್ರಯತ್ನವನ್ನು ಮಾಡಿದರೆ ಜಾಗತಿಕ ತಾಪಮಾನ ಏರಿಕೆ ಪ್ರಕ್ರಿಯೆಗೆ ಕಡಿವಾಣ ಹಾಕಬಹುದು. ಗಿಡಗಳನ್ನು ನೆಡುವ ಬಗ್ಗೆ ಮಾತ್ರ ಗಮನಹರಿಸದೇ, ಅದನ್ನು ಪೋಷಿಸಿ ಹೆಮ್ಮರವಾಗಿ ಬೆಳೆಯಲು ಪೂರಕ ವಾತಾವರಣ ಸೃಷ್ಟಿಸಬೇಕು ಎಂದರು.
ನಗರಸಭಾ ಸದಸ್ಯೆ ರಶ್ಮಿ ಚಿತ್ತರಂಜನ್ ಭಟ್ ಮಾತನಾಡಿ, ಮೂಲದಲ್ಲಿ ಕಸದ ವಿಂಗಡನೆ ಮಾಡಿದರೆ ತ್ಯಾಜ್ಯದ ಉತ್ಪತ್ತಿ ಕಡಿಮೆಯಾಗುತ್ತದೆ. ಸಾಧ್ಯವಾದಷ್ಟು ಮಟ್ಟಿಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಮರುಬಳಕೆ ವಸ್ತುಗಳಿಗೆ ಆದ್ಯತೆ ನೀಡಬೇಕು. ಮಳೆ ನೀರು ಕೊಯ್ಲು ಮತ್ತು ಪೈಪ್ ಕಾಂಪೋಸ್ಟ್  ಇಂದಿನ ಅಗತ್ಯತೆಯಾಗಿದೆ ಎಂದರು.
ಉದ್ಯಾನವನದ ಸುತ್ತಮುತ್ತ ಸಸಿಗಳನ್ನು ಇದೇ ಸಂದರ್ಭದಲ್ಲಿ ನೆಡಲಾಯಿತು. ಬಳಿಕ ಸ್ವಚ್ಚತಾ ಅಭಿಯಾನ‌ ನಡೆಯಿತು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ & ಡೈಮಂಡ್ಸ್ ಉಡುಪಿ ಇದರ ಸಾರ್ವಜನಿಕ ಸಂಪರ್ಕಾಧಿಕಾರಿ ರಾಘವೇಂದ್ರ ನಾಯಕ್, ಹಿರಿಯ ನಾಗರಿಕ ವೇದಿಕೆ ಕಾರ್ಯದರ್ಶಿ ಸದಾನಂದ ಹೆಗ್ಡೆ, ಜೆಸಿಐ ಉಡುಪಿ ಸಿಟಿ ಅಧ್ಯಕ್ಷ ಜಗದೀಶ್ ಶೆಟ್ಟಿ, ಶಿಕ್ಷಣ ಸಂಪನ್ಮೂಲ ಕೇಂದ್ರ ಜಿಲ್ಲಾ ಸಂಯೋಜಕ ವಿವೇಕ್, ಉದಯ ನಾಯ್ಕ್, ಪರ್ಕಳ ಪ್ರೌಢ ಶಾಲಾ ಶಿಕ್ಷಕಿ ನಯನಾ ನಾಯ್ಕ್, ಸುನಿತಾ ಭಂಡಾರಿ, ಶ್ರೀನಿವಾಸ ಶೆಟ್ಟಿ, ಅಣ್ಣಪ್ಪ ಶೆಟ್ಟಿ, ನಿತೇಶ್ ಹಾಗೂ ಜಾವಾ ಬೈಕರ್ಸ್ ಸದಸ್ಯರು ಉಪಸ್ಥಿತರಿದ್ದರು. ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ಗಣೇಶ್ ಪ್ರಸಾದ್ ನಿರೂಪಿಸಿದರು.