ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬ ಆಚರಣೆಗೆ ನಗರಸಭೆ ಮನವಿ

ಉಡುಪಿ: ರಾಸಾಯನಿಕಯುಕ್ತ ಗಣೇಶನ ಮೂರ್ತಿಯನ್ನು ನದಿಗಳಲ್ಲಿ ಮತ್ತು ಇತರೆ ನೀರಿನ ಮೂಲದಲ್ಲಿ ವಿಸರ್ಜನೆ ಮಾಡುವುದರಿಂದ ನೀರಿನಲ್ಲಿರುವ ಜಲಚರಗಳಿಗೆ ಹಾನಿಯಾಗುವುದರ ಜೊತೆಗೆ ಜಲ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಆದ್ದರಿಂದ ಜಲ ಸಂಪನ್ಮೂಲವನ್ನು ರಕ್ಷಿಸಲು ರಾಸಾಯನಿಕಯುಕ್ತ ಗಣೇಶನ ಮೂರ್ತಿಯನ್ನು ಬಳಸದೇ ಮಣ್ಣಿನ ಮೂರ್ತಿಯನ್ನು ಬಳಸಿ ಹಾಗೂ ನಿರ್ಧಿಷ್ಟ ಸ್ಥಳಗಳಲ್ಲಿಯೇ ಮೂರ್ತಿಯನ್ನು ವಿಸರ್ಜನೆ ಮಾಡುವುದರೊಂದಿಗೆ ಪರಿಸರ ಸ್ನೇಹಿ ಗೌರಿ – ಗಣೇಶ ಹಬ್ಬವನ್ನು ಆಚರಿಸುವಂತೆ ನಗರಸಭೆ ಮನವಿ ಮಾಡಿದೆ.

ರಾಸಾಯನಿಕಯುಕ್ತ ಗಣೇಶನ ಮೂರ್ತಿಯನ್ನು ಬಳಸದೇ ಮಣ್ಣಿನಿಂದ ತಯಾರಿಸಿದ ಗಣೇಶನ ಮೂರ್ತಿಯನ್ನೇ ಬಳಕೆ ಮಾಡಬೇಕು. ನಗರಸಭಾ ವ್ಯಾಪ್ತಿಯಲ್ಲಿ ಸಾರ್ವಜನಿಕವಾಗಿ ಗಣೇಶ ಮೂರ್ತಿ ಸ್ಥಾಪಿಸಲು ನಗರಸಭೆಯಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿರುತ್ತದೆ.

ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ ಸಂಬoಧಪಟ್ಟ ಇಲಾಖೆಯಿಂದ ಅನುಮತಿ ಪಡೆದ ನಂತರವಷ್ಟೇ ಡಿಜೆ/ ಸೌಂಡ್ ಸಿಸ್ಟಮ್ ಬಳಸಬೇಕು. ಗಣೇಶನ ಮೂತಿಯನ್ನು ವಿಸರ್ಜಿಸುವಾಗ ಮೂರ್ತಿಗೆ ಹಾಕಲಾದ ಹೂವಿನ ಹಾರ, ಇತರೆ ಅಪಾಯಕಾರಿ ಸಾಮಾಗ್ರಿಗಳನ್ನು ತೆಗೆದು ನಂತರ ಮೂರ್ತಿಯನ್ನು ಮಾತ್ರ ವಿಸರ್ಜನೆ ಮಾಡಬೇಕು. ಗಣೇಶನ ಆರಾಧನೆ ವೇಳೆ ಬಳಸುವ ಹೂವು ಅಥವಾ ಇತರೆ ಯಾವುದೇ ವಸ್ತುವನ್ನು ನೀರಿನ ಮೂಲಗಳಲ್ಲಿ ವಿಸರ್ಜಿಸುವಂತಿಲ್ಲ.

ಗಣೇಶ ಪ್ರತಿಷ್ಠಾಪನೆ ಮಾಡಿ ಆರಾಧಿಸುವ ಸ್ಥಳಗಳಲ್ಲಿ ಸೂಕ್ತ ತ್ಯಾಜ್ಯ ವಿಲೇವಾರಿಗೆ ವ್ಯವಸ್ಥೆ ಬೇಕಾದಲ್ಲಿ ನಗರಸಭೆಯ ಆರೋಗ್ಯ ವಿಭಾಗವನ್ನು ಸಂಪರ್ಕಿಸಬಹುದಾಗಿದೆ.

ಧಾನ್ಯ, ಹೂವಿನ ಬೀಜ, ತರಕಾರಿ ಬೀಜಗಳನ್ನು ಒಳಗೊಂಡ ಗಣೇಶ ಮೂರ್ತಿಗಳ ನಿರ್ಮಾಣಕ್ಕೆ ಆದ್ಯತೆ ನೀಡಿ ಪರಿಸರ ಸ್ನೇಹಿ ಗೌರಿ ಗಣೇಶ ಹಬ್ಬವನ್ನು ಆಚರಿಸಿ ನಗರಸಭೆಯೊಂದಿಗೆ ಸಹಕರಿಸುವಂತೆ ನಗರಸಭೆ ಪೌರಾಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ.