ಕುಂದಾಪುರ: ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಲ್ಲದ ಸರ್ಕಾರ ಇಂದು ಅಧಿಕಾರವನ್ನು ನಡೆಸುತ್ತಿದೆ. ಕಾರ್ಮಿಕರ ಬೇಡಿಕೆಗಳಿಗೆ ಸ್ಪಂದಿಸಿ ಮುಖಂಡರನ್ನು ಕರೆದು ಮಾತುಕತೆ ನಡೆಸಬೇಕಿದ್ದ ಸರ್ಕಾರ ಇಂದು ಅಂಬಾನಿ, ಅದಾನಿಯಂತಹ ಉದ್ಯಮಿಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಬಂಡವಾಳಗರರ ಗುಲಾಮಿ ಸರ್ಕಾರ. ಈ ಲಜ್ಜೆಗೆಟ್ಟ ಸರ್ಕಾರ ಎಷ್ಟು ಬೇಗ ತೊಲಗುತ್ತೊ ಅಷ್ಟು ಬೇಗ ಕಾರ್ಮಿಕರಿಗೆ ಮುಕ್ತಿ ಸಿಗುತ್ತದೆ ಎಂದು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಗುಡುಗಿದರು.
ಅವರು ಕಾರ್ಮಿಕ ಕಾನೂನುಗಳ ರಕ್ಷಣೆಗಾಗಿ, ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ದ ಜಂಟಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ದೇಶಾದ್ಯಂತ ನಡೆಯುತ್ತಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರದ ಅಂಗವಾಗಿ ಬುಧವಾರ ಕುಂದಾಪುರದ ಶಾಸ್ತ್ರೀ ಸರ್ಕಲ್ ರಿಕ್ಷಾ ನಿಲ್ದಾಣದಲ್ಲಿ ನಡೆದ ಪ್ರತಿಭಟನಾಸಭೆಯಲ್ಲಿ ಮಾತನಾಡಿದರು.
ಪ್ರತೀ ಮುಷ್ಕರದಲ್ಲೂ ಸಾರಿಗೆ ನೌಕರರಿಗೆ, ಚಾಲಕರಿಗೆ ಕಲ್ಯಾಣ ಮಂಡಳಿ ಮಾಡಬೇಕು ಎಂದು ಒತ್ತಾಯವನ್ನು ಮಾಡುತ್ತಾ ಬಂದಿದ್ದೇವೆ. ಹಿಂದಿನ ಸರ್ಕಾರ ನಮ್ಮ ಒತ್ತಾಯದ ಬಳಿಕ ಮಾತುಕತೆ ನಡೆಸಿ ಚಾಲಕರಿಗೆ, ಸಾರಿಗೆ ನೌಕರರಿಗೆ ಕಲ್ಯಾಣ ಮಂಡಳಿಯನ್ನು ತಂದು ಇಪ್ಪತ್ತು ಕೋಟಿ ರೂ. ಹಣ ಮಾತ್ರ ಕಲ್ಯಾಣ ಮಂಡಳಿಗೆ ನೀಡಿತ್ತು. ಚಾಲಕರ ಕಲ್ಯಾಣ ಮಂಡಳಿಗೆ ಕೊಟ್ಟಿರುವ ಹಣದಲ್ಲಿ ಗುರುತು ಪತ್ರ ಕೊಡಲಿಕ್ಕೆ ಮಾತ್ರ ಸಾಧ್ಯವಾಗುತ್ತಿದೆ. ಕುಟುಂಬಕ್ಕೆ ಯಾವುದೇ ಭದ್ರತೆ ಇಲ್ಲದ ಚಾಲಕರ ಕಲ್ಯಾಣ ಮಂಡಳಿಗೆ ಸರ್ಕಾರ ಕೂಡಲೇ ನಿಧಿಯನ್ನು ಬಿಡುಗಡೆಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಬಿಜೆಪಿ ಹೊರತುಪಡಿಸಿ ಈ ಹಿಂದೆ ಕೇಂದ್ರದಲ್ಲಿ ಅಧಿಕಾರ ನಡೆಸಿದ ಎಲ್ಲಾ ರಾಜಕೀಯ ಪಕ್ಷಗಳು ಸೌಜನ್ಯಕ್ಕಾದರೂ ಕಾರ್ಮಿಕ ಮುಖಂಡರನ್ನು ಕರೆದು ಬೇಡಿಕೆಗಳನ್ನು ಆಲಿಸುವ ಕೆಲಸ ಮಾಡಿತ್ತು. ಆದರೆ ಕಾರ್ಮಿಕ ಸಂಘಟನೆಗಳು ನೀಡಿದ ಮನವಿಯನ್ನು ಕಸದಬುಟ್ಟಿಗೆ ಎಸೆಯುವ ಮೂಲಕ ಈ ಸರ್ವಾಧಿಕಾರಿ ಬಿಜೆಪಿ ಸರ್ಕಾರ ಕಾರ್ಮಿಕ ವಿರೋಧಿಯಾಗಿ ವರ್ತಿಸುತ್ತಿದೆ. ಹಲವು ಕೇಂದ್ರ ಕಾರ್ಮಿಕ ಸಂಘಟನೆಗಳು ಕಾರ್ಮಿಕರ ಬದುಕಿನ ಹಕ್ಕಿಗಾಗಿ ಹೋರಾಟ ನಡೆಸುತ್ತಿದೆ. ಆದರೆ ಕೆಲ ಕೇಂದ್ರ ಕಾರ್ಮಿಕ ಸಂಘಟನೆಗಳಿಗೆ ಕಾರ್ಮಿಕರ ಹಿತ ಬೇಕಾಗಿಲ್ಲ. ಬದಲಾಗಿ ಅವರಿಗೆ ರಾಜಕೀಯ ಹಿತಾಸಕ್ತಿಗಳು ಮುಖ್ಯವಾಗಿವೆ ಎಂದು ಜರಿದರು.
ಸಂಸದೆ ಹೇಳಿಕೆಗೆ ಕಲ್ಲಾಗರ್ ತಿರುಗೇಟು:
ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆಯವರು ಪತ್ರಿಕಾಗೋಷ್ಠಿ ನಡೆಸಿ ಕಾರ್ಮಿಕ ಸಂಘಟನೆಗಳಿಂದ ಕೈಗಾರಿಕೆಗಳು, ಉದ್ಯೋಗಗಳು ನಷ್ಟವಾಗುತ್ತಿದೆ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಕಾರ್ಮಿಕರ ಬಗ್ಗೆ ನಿಜವಾಗಿಯೂ ಕಾಳಜಿ ಇದ್ದಿದ್ದರೆ, ಇಷ್ಟು ವರ್ಷಗಳ ಕಾಲ ಕಾರ್ಮಿಕರು ಅನುಭವಿಸುತ್ತಿದ್ದ ಮರಳು ಸಮಸ್ಯೆಯನ್ನು ಕೂಡಲೇ ಬಗೆಹರಿಸುತ್ತಿದ್ದರು. ಆದರೆ ಆ ಕೆಲಸ ಮಾಡುವ ಯೋಗ್ಯತೆ ಇಲ್ಲದ ಸಂಸದೆ ಶೋಭಾ ಕರಂದ್ಲಾಜೆಯವರಿಗೆ ಕಾರ್ಮಿಕರ ಸಂಘಟನೆಗಳ ಬಗ್ಗೆ ಮಾತನಾಡಲಿಕ್ಕೆ ಯಾವ ನೈತಿಕತೆ ಇದೆ ಎಂದು ಕಲ್ಲಾಗರ್ ತಿರುಗೇಟು ನೀಡಿದರು.
ಕಾರ್ಮಿಕ ಮುಖಂಡ ಎಚ್. ನರಸಿಂಹ ಮಾತನಾಡಿ, ಕಾರ್ಮಿಕರ ಪರವಾದ ಕಾಯ್ದೆ, ಕಾನೂನುಗಳನ್ನು ರೂಪಿಸಬೇಕಿದ್ದ ಸರ್ಕಾರ ಕಾರ್ಪೋರೇಟ್ ಕಂಪೆನಿಗಳ ಪರ ಕಾನೂನುಗಳನ್ನು ರೂಪಿಸಿ ಇಡೀ ದೇಶವನ್ನು ಕಾರ್ಪೋರೇಟ್ ಕಂಪೆನಿಗಳಿಗೆ ಲೂಟಿ ಮಾಡಲು ಅವಕಾಶ ಮಾಡಿಕೊಟ್ಟಿದೆ. ಈ ಸರ್ಕಾರ ಕಾರ್ಮಿಕ ಕಾನೂನುಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲ, ಈ ದೇಶದದ ಅಭಿವೃದ್ದಿಗೆ ಕುಠಿತವಾಗುವಂತಹ ಆರ್ಥಿಕ ನೀತಿಗಳನ್ನು ಜಾರಿಗೆ ತಂದು ಆರ್ಥಿಕ ಹಿಂಜರಿತಕ್ಕೂ ಕಾರಣವಾಗಿದೆ. ಕೇಂದ್ರ ಸರ್ಕಾರ ತನ್ನ ನೀತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದ ಅವರು, ನೋಟು ನಿಷೇಧ, ಜಿಎಸ್ಟಿಯಿಂದ ದೇಶದ ಕೈಗಾರಿಕೆಗಳು ಬಿಕ್ಕಟ್ಟಿನ ಸ್ಥಿತಿಯಲ್ಲಿದೆ. ನೂರಾರು ಕಾರ್ಖಾನೆಗಳು ಮುಚ್ಚಲ್ಪಟ್ಟು, ಲಕ್ಷಾಂತರ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಬೀದಿಪಾಲಾಗುತ್ತಿದ್ದಾರೆ. ಕಾರ್ಯನಿರ್ವಹಿಸುತ್ತಿರುವ ಕೆಲ ಕಾರ್ಖಾನೆಗಳು ಮುಚ್ಚುವ ಹಂತದಲ್ಲಿದೆ ಎಂದು ಎಚ್. ನರಸಿಂಹ ಆತಂಕ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಇಂಟಕ್ ಕುಂದಾಪುರ ತಾಲೂಕು ಅಧ್ಯಕ್ಷ ಲಕ್ಷ್ಮಣ ಶೆಟ್ಟಿ ಮಾತನಾಡಿದರು.
ಪ್ರತಿಭಟನಾ ಸಭೆಗೂ ಮುನ್ನ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ಕಾರ್ಮಿಕರು ಶಾಸ್ತ್ರೀ ವೃತ್ತದಿಂದ ಹೊಸ ಬಸ್ ನಿಲ್ದಾಣದ ಮಾರ್ಗವಾಗಿ ಪಾದಯಾತ್ರೆ ನಡೆಸಿ ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶಗಳನ್ನು ಹೊರಹಾಕಿದರು.
ಇಂಟಕ್ನ ಮಾಣಿ ಉದಯ್ ಕುಮಾರ್, ಸಿಐಟಿಯುನ ಮಹಾಬಲ ವಡೇರಹೋಬಳಿ, ರಾಜು ದೇವಾಡಿಗ, ರವಿ. ಎಂ ಮೊದಲಾದವರು ಇದ್ದರು.