ಸಿಐಟಿಯು ಕುಂದಾಪುರ ಘಟಕ: ಕಾರ್ಮಿಕ ದಿನಾಚರಣೆ ಪ್ರಯುಕ್ತ ನಡೆದ ಬಹಿರಂಗ ಸಭೆ

ಕುಂದಾಪುರ: ಆಳುವವರ್ಗ ಸರ್ವಾಧಿಕಾರಿ ಆಡಳಿತವನ್ನು ನಡೆಸುತ್ತಿದ್ದು, ದೇಶದಲ್ಲಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಪರಿಸಸ್ಥಿತಿ ಘೋಷಣೆ ಮಾಡಿಲ್ಲವಾದರೂ ತುರ್ತು ಪರಿಸ್ಥಿತಿಯ ವಾತಾವರಣ ದೇಶದಲ್ಲಿದೆ. ದೇಶದ ಐಕ್ಯತೆ, ಸಮಾನತೆಗಾಗಿ ನಾವೆಲ್ಲ ಮತ್ತೊಮ್ಮೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದು ಸಿಐಟಿಯು ರಾಜ್ಯ ಉಪಾಧ್ಯಕ್ಷ ಕೆ.ಶಂಕರ್ ಹೇಳಿದರು.

ಅವರು ಬುಧವಾರ ಇಲ್ಲಿನ ಶಾಸ್ತ್ರಿ ವೃತ್ತದ ಬಳಿ ಸಿಐಟಿಯು ಕುಂದಾಪುರ ಘಟಕದ ವತಿಯಿಂದ ಕಾರ್ಮಿಕ ದಿನಾಚರಣೆ ಪ್ರಯುಕ್ತ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿದರು.

133 ವರ್ಷಗಳ ಹಿಂದೆ ಕಾರ್ಮಿಕ ವರ್ಗ ಸಂಘಟಿತವಾಗಿರಲಿಲ್ಲ. ಐಕ್ಯ ಹೋರಾಟಗಳು ಬೆಳೆದು ಬಂದಿರಲಿಲ್ಲ. ಸಮಸ್ಯೆ, ಅತೃಪ್ತಿ, ಅಸಮಾಧಾನವಿತ್ತು. 133 ವರ್ಷಗಳಿಂದೀಚೆಗೆ ಕಾರ್ಮಿಕ ವರ್ಗ, ಜನಸಾಮಾನ್ಯರು, ರೈತಾಪಿ ವರ್ಗದವರು ಎದುರಿಸುವ ಸಮಸ್ಯೆಗಳಿಗೆ ಮೂಲಭೂತವಾದ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿದೆ. ಬಂಡವಳಾಹಿ ವ್ಯವಸ್ಥೆಯಿಂದ ಉಲ್ಬಣಗೊಳ್ಳುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಕಾರ್ಮಿಕ ವರ್ಗ ಐಕ್ಯ ಹೋರಾಟ ನಡೆಸುತ್ತಾ ಬಂದಿದೆ ಎಂದರು.

ದೇಶದಲ್ಲಿ ಪ್ರಜಾಪ್ರಭುತ್ವ ಮತ್ತು ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮತೀಯ, ಧಾರ್ಮಿಕ ಆಡಳಿತ ವ್ಯವಸ್ಥೆಯನ್ನು ತರಬೇಕೆಂದು ಕೋಮುವಾದಿ ರಾಜಕೀಯ ಪಕ್ಷಗಳು ಪ್ರಯತ್ನ ನಡೆಸುತ್ತಿದೆ. ಎಲ್ಲರಿಗೂ ವಸತಿ, ವಿದ್ಯಾಭ್ಯಾಸ, ಆರೋಗ್ಯ ಕೊಡುವುದು ಮುಖ್ಯವಾಗಬೇಕು. ಸುಳ್ಳನ್ನು ಹೇಳಿ ಮತ್ತೆ ಮತ್ತೆ ಸರಿಪಡಿಸುತ್ತೇವೆ ಎಂದು ಜನರನ್ನು ನಂಬಿಸುವ, ಬಂಡವಾಳಶಾಹಿಗಳ ಹಿಂದೆ ನಿಂತಿರುವ ರಾಜಕೀಯ ಪಕ್ಷಗಳ ನಡೆಯನ್ನು ಕಾರ್ಮಿಕ ವರ್ಗ, ವಿದ್ಯಾರ್ಥಿ, ಯುವಜನರು ಚೆನ್ನಾಗಿ ಅರಿತುಕೊಂಡಿದ್ದಾರೆ ಎಂದರು.

ಬಂಡವಾಳ ಶಾಹಿ, ಆಳುವ ವರ್ಗದ ಸರ್ವಾಧಿಕಾರಿ ಧೋರಣೆಯಿಂದಾಗಿ ದುಡಿಯುವ ವರ್ಗ, ರೈತರು, ಕೂಲಿ ಕಾರ್ಮಿಕಕರು ಈಗಲೂ ಮೂಲಭೂತ ಸಮಸ್ಯೆಗಳನ್ನು ಎದುರಿಸುತ್ತಿದ್ದು, ಮೂಲಭೂತ ಪರಿಹಾರಕ್ಕಾಗಿ ಎಲ್ಲ ಸಂಘಟನೆಗಳು ಸಂಘಟಿತರಾಗಿ ಹೋರಾಡಬೇಕಾದ ಅಗತ್ಯವಿದೆ. ಕಳೆದ ಜನವರಿಯಲ್ಲಿ ರಾಷ್ಟ್ರದಾದ್ಯಂತ ನಡೆದ ಕಾರ್ಮಿಕ ವರ್ಗದ ಬೃಹತ್ ರ್ಯಾಲಿಯಲ್ಲಿ 20 ಕೋಟಿಗೂ ಅಧಿಕ ಮಂದಿ ಪಾಲ್ಗೊಳ್ಳುವ ಮೂಲಕ ಆಳುವ ವರ್ಗದ, ಬಂಡವಾಳ ಶಾಹಿ, ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧ ಬದಲಾವಣೆ ಬಯಸಿದ್ದು ಸ್ಪಷ್ಟವಾಗಿದೆ. ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸದಿದ್ದರೂ, ಅದೇ ರೀತಿಯ ವಾತವಾರಣವಿದೆ. ದೇಶದ ಐಕ್ಯತೆ, ಸಮಾನತೆಗಾಗಿ ನಾವೆಲ್ಲ ಮತ್ತೊಮ್ಮೆ ಒಗ್ಗಟ್ಟಾಗಿ ಶ್ರಮಿಸಬೇಕಾಗಿದೆ ಎಂದವರು ಹೇಳಿದರು.

ಸಿಐಟಿಯುನ ಕುಂದಾಪುರ ಘಟಕದ ಅಧ್ಯಕ್ಷ ಎಚ್. ನರಸಿಂಹ ಅಧ್ಯಕ್ಷತೆ ವಹಿಸಿದ್ದರು.

ಸಿಡಬ್ಲ್ಯೂಎಫ್‍ಐನ ಅಧ್ಯಕ್ಷ ಯು. ದಾಸ್ ಭಂಡಾರಿ, ಹಂಚು ಕಾರ್ಮಿಕ ಸಂಘದ ಅಧ್ಯಕ್ಷ ವಿ. ನರಸಿಂಹ, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷ ಮಹಾಬಲ ವಡೇರಹೋಬಳಿ, ಪ್ರ. ಕಾರ್ಯದರ್ಶಿ ಬಲ್ಕೀಸ್ ಬಾನು, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ರತಿ ಶೆಟ್ಟಿ, ರಿಕ್ಷಾ ಚಾಲಕ – ಮಾಲಕರ ಸಂಘದ ಅಧ್ಯಕ್ಷ ಲಕ್ಷ್ಮಣ್ ಬರೆಕಟ್ಟು, ಡಿವೈಎಫ್‍ಐನ ರಾಜೇಶ ವಡೇರಹೋಬಳಿ, ಅಕ್ಷರದಾಸೋಹ ಸಂಘಟನೆ ಕಾರ್ಯದರ್ಶಿ ನಾಗರತ್ನ, ರಮೇಶ್ ಗುಲ್ವಾಡಿ ಮತ್ತಿತರರು ಉಪಸ್ಥಿತರಿದ್ದರು.

ಬಹಿರಂಗ ಸಭೆಗೂ ಮುನ್ನ ಕಾರ್ಮಿಕ ದಿನಾಚರಣೆ ಅಂಗವಾಗಿ ಕುಂದಾಪುರ ಶಾಸ್ತ್ರಿ ವೃತ್ತದಿಂದ ಬೃಹತ್ ಕಾಲ್ನಡಿಗೆ ಜಾಥಾ ನಡೆಯಿತು. ಜಾಥಾವು ಹೊಸ ಬಸ್ ನಿಲ್ದಾಣದ ಮೂಲಕ ಶಾಸ್ತ್ರಿ ವೃತ್ತದ ಬಳಿ ಸಮಾಪನಗೊಂಡಿತು.
ಸಿಡಬ್ಲ್ಯೂಎಫ್‍ಐನ ಪ್ರ. ಕಾರ್ಯದರ್ಶಿ ಸುರೇಶ್ ಕಲ್ಲಾಗರ ಸ್ವಾಗತಿಸಿದರು. ಸಂತೋಷ್ ಹೆಮ್ಮಾಡಿ ವಂದಿಸಿದರು.