ಚುನಾವಣಾ ಕಣದಿಂದ ಹಿಂದೆ ಸರಿಯಲ್ಲ, ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುತ್ತೇನೆ: ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಅಮೃತ್ ಶೆಣೈ

ಉಡುಪಿ: ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸೈದ್ಧಾಂತಿಕ ಹೋರಾಟ ನಡೆಸುವ ಉದ್ದೇಶದಿಂದ ನಾನು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದೇನೆ ಎಂದು ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಅಮೃತ್‌ ಶೆಣೈ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ–ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದು ನಿಶ್ಚಲ. ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಜೆಡಿಎಸ್ ದುರ್ಬಲ:
ಜಿಲ್ಲೆಯಲ್ಲಿ ಜೆಡಿಎಸ್ ಸಂಪೂರ್ಣ ದುರ್ವಲವಾಗಿದೆ. ಅದಕ್ಕೆ ಯಾವುದೇ ಜನಬೆಂಬಲ ಇಲ್ಲ. ಪ್ರಬಲವಾದ ಅಭ್ಯರ್ಥಿ ಕೂಡ ಇಲ್ಲ. ಹಾಗಾಗಿ ನಮ್ಮ ಕಾರ್ಯಕರ್ತರ ಶ್ರಮ ವ್ಯರ್ಥ ಮಾಡಬೇಡಿ. ನಾವು ಈಗಾಗಲೇ ಜಿಲ್ಲೆಯಾದ್ಯಂತ ಶೋಭಾ ಕರಂದ್ಲಾಜೆ ವಿರುದ್ಧದ ವಾತಾವಾರಣ ಸೃಷ್ಠಿ ಮಾಡಿದ್ದೇವೆ ಎಂಬುವುದನ್ನೂ ಮನವರಿಕೆ ಮಾಡಿದ್ದೇವೆ. ಆದರೂ ಪಕ್ಷದಲ್ಲಿ ಸಕ್ರೀಯರಾಗಿರುವ ನನ್ನಂತಹ ಕಾರ್ಯಕರ್ತರ ಗಮನಕ್ಕೆ ತರದೆ, ನಮ್ಮಲ್ಲಿ ಒಂದು ಮಾತು ಕೇಳದೆ ಏಕಾಏಕಿಯಾಗಿ ಈ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಟ್ಟದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾಂಗ್ರೆಸ್‌ ಹೈಕಮಾಂಡ್‌ ನಿರ್ಧಾರದ ವಿರುದ್ಧ ಜಿಲ್ಲೆಯ ಎಲ್ಲ ನಾಯಕರು ಹೈಕಮಾಂಡ್‌ ತೀರ್ಮಾನವನ್ನು ಒಕ್ಕೊರಳಿನಿಂದ ಖಂಡಿಸಿದ್ದಾರೆ. ಆದರೆ ಈ ಬಗ್ಗೆ ಹೈಕಮಾಂಡ್‌ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಈಗ ಜೆಡಿಎಸ್‌ ಕಾಂಗ್ರೆಸ್‌ನ ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ರನ್ನು ಕಣಕ್ಕಿಳಿಸಿದೆ. ಇದು ದುರದೃಷ್ಟಕರ. ಹಾಗಾಗಿ ನಾನು ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ ಹೈಕಮಾಂಡ್‌ಗೆ ಸೂಕ್ತ ಸಂದೇಶವನ್ನು ರವಾನಿಸಲು ನಿರ್ಧರಿಸಿದ್ದೇನೆ ಎಂದರು.
ನನ್ನದು ಸೈದ್ಧಾಂತಿಕ ಹೋರಾಟ:
ಇದು ನನ್ನ ಸ್ವಾರ್ಥಕ್ಕಾಗಿ ಸ್ಪರ್ಧೆಯಲ್ಲ. ಇದು ಸಾರ್ವಜನಿಕರ ಆಗ್ರಹ ಹಾಗೂ ನನ್ನ ಸೈದ್ಧಾಂತಿಕ ಹೋರಾಟ. ನಾನು ಎಲ್ಲಿಯೂ ಕೂಡ ಆಕಾಂಕ್ಷಿ ಎಂದು ಹೇಳಿಲ್ಲ. ಕಾಂಗ್ರೆಸ್‌ ವೀಕ್ಷಕರು ಸ್ಪರ್ಧೆ ಮಾಡುತ್ತೀರಾ ಎಂದು ಕೇಳಿದಾಗ ಅವಕಾಶ ಕೊಟ್ಟರೆ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದೆ ಅಷ್ಟೇ. ಆದರೆ ಟಿಕೆಟ್‌ಗಾಗಿ ಯಾವ ನಾಯಕರ ಬಳಿಯೂ ನಾನು ಲಾಬಿ ಮಾಡಿಲ್ಲ. ಪಕ್ಷದಲ್ಲಿ ಯಾರಿಗೂ ಟಿಕೆಟ್‌ ಕೊಟ್ಟಿದ್ದರೆ ನಾನು ಅವರ ಪರವಾಗಿ ಕೆಲಸ ಮಾಡುತ್ತಿದ್ದೆ. ಆದರೆ ಈಗ ಪ್ರಮೋದ್‌ ಮಧ್ವರಾಜ್‌ ಜೆಡಿಎಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವುದನ್ನು ಒಪ್ಪಲು ಸಾಧ್ಯವಿಲ್ಲ ಎಂದು ಹೇಳಿದರು.
ಯಾವ ಮುಖವನ್ನಿಟ್ಟುಕೊಂಡು ಜೆಡಿಎಸ್ ಗೆ ಮತ ಕೇಳಲಿ:
ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ಪ್ರಮೋದ್ ಮಧ್ವರಾಜ್ ನನ್ನ ಬಳಿ ಬಂದಿದ್ದರು. ಸರಿಯಾಗಿ ಆಲೋಚನೆ ಮಾಡಿ, ದುಡುಕಿನ ನಿರ್ಧಾರ ಕೈಗೊಳ್ಳಬೇಡಿ ಎಂದಿದ್ದರು. ಆದರೆ ಈಗ ನಾನೊಬ್ಬ ಕಾಂಗ್ರೆಸ್‌ ಕಾರ್ಯಕರ್ತನಾಗಿ ಯಾವ ಮುಖವನ್ನು ಇಟ್ಟುಕೊಂಡು ಮತದಾರರಲ್ಲಿ ಜೆಡಿಎಸ್‌ಗೆ ಮತ ಹಾಕಿಯೆಂದು ಕೇಳಲಿ. ಅದು ಸುಲಭದ ಮಾತಲ್ಲ ಎಂದು ಅಸಮಾಧಾನ ಹೊರಹಾಕಿದರು.
ಸಾರ್ವಜನಿಕರಿಂದ ನಿಧಿ ಸಂಗ್ರಹ ಮಾಡಿಕೊಂಡು ಚುನಾವಣೆಯನ್ನು ಎದುರಿಸುತ್ತೇವೆ. ನಾಳೆ  ಉಡುಪಿಯ ನಗರದಲ್ಲಿ ಪಾದೆಯಾತ್ರೆಯ ಮೂಲಕ ನಿಧಿ ಸಂಗ್ರಹ ಮಾಡುತ್ತೇವೆ. ಸಾರ್ವಜನಿಕರ ಹಣದಿಂದ ಚುನಾವಣೆ ಎದುರಿಸುತ್ತೇನೆ ಎಂದರು. ಮನೋವೈದ್ಯ ಡಾ. ಪಿ.ವಿ. ಭಂಡಾರಿ, ಸಾಮಾಜಿಕ ಕಾರ್ಯಕರ್ತೆ ಜಯಶ್ರೀ ಭಟ್‌, ಯಜ್ಞೇಶ್‌
ಆಚಾರ್ಯ ಇದ್ದರು.