ಜಿಲ್ಲೆಯಾದ್ಯಂತ ಸಂಭ್ರಮ, ಸಡಗರದಿಂದ ಕ್ರಿಸ್ಮಸ್ ಆಚರಣೆ

ಉಡುಪಿ: ಉಡುಪಿ ಜಿಲ್ಲೆಯಾದ್ಯಂತ ಕ್ರಿಸ್ಮಸ್ ಹಬ್ಬವನ್ನು ಮಂಗಳವಾರ ಸಂಭ್ರಮ ಸಡಗರದಿಂದ ಆಚರಿಸಲಾಯಿತು.
ಉಡುಪಿ ಶೋಕಾಮಾತ ಇಗರ್ಜಿ, ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್, ಸಂತೆಕಟ್ಟೆ ಮೌಂಟ್ ರೋಸರಿ ಚರ್ಚ್, ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚ್, ಕೊಳಲಗಿರಿ ಸೆಕ್ರೇಡ್ ಹಾರ್ಟ್ ಚರ್ಚ್ ಮತ್ತು ಮೂಡುಬೆಳ್ಳೆ ಚರ್ಚ್ ಗಳಲ್ಲಿ  ಬೆಳಿಗ್ಗೆ ನೂರಾರು ಕ್ರೈಸ್ತ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿ, ಪರಸ್ಪರ ಹಬ್ಬದ ಶುಭಾಶಯವನ್ನು ವಿನಿಮಯ ಮಾಡಿಕೊಂಡರು.
ಯೇಸುವಿನ ಜನ್ಮದಿನದ ಪ್ರಯುಕ್ತ ಮಾಡಿದ್ದ ಗೋದಲಿ ಹಾಗೂ ಪುಟ್ಟ ಗೊಂಬೆಗಳ ಪ್ರದರ್ಶನ ಜನರನ್ನು ಆಕರ್ಷಿಸುತ್ತಿತ್ತು. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ಚರ್ಚ್ ನಲ್ಲಿ ಸೋಮವಾರ ಮಧ್ಯರಾತ್ರಿಯಿಂದಲೇ ಕ್ರಿಸ್ಮಸ್ ಹಬ್ಬವನ್ನು ಆಚರಿಸಲಾಯಿತು. 
ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಡಾ. ಜೆರಾಲ್ಡ್ ಐಸಾಕ್ ಲೋಬೊ ಅವರು ಉಡುಪಿ ನಗರದ ಶೋಕಮಾತಾ ಇಗರ್ಜಿಯಲ್ಲಿ ಬಲಿಪೂಜೆ ನೆರವೇರಿಸಿದರು. ಹಬ್ಬದ ಸಂದೇಶ ನೀಡಿದ ಅವರು, ಕ್ರಿಸ್ಮಸ್ ಹಬ್ಬ ಶಾಂತಿಯನ್ನು ಸಾರುತ್ತಿದೆ. ಶಾಂತಿಯ ಸಾಧನಗಳಾಗಲು, ಶಾಂತಿಯ ದೂತರಾಗಲು ನಮ್ಮನ್ನು ಆಹ್ವಾನಿಸುತ್ತಿದೆ. ಕ್ರಿಸ್ತ ಜಯಂತಿಯ ಪ್ರೀತಿಯ ಜ್ಯೋತಿ ನಮ್ಮ ತನು-ಮನಗಳಲ್ಲಿ, ಮನೆ-ಮಂದಿರಗಳಲ್ಲಿ ಪ್ರಜ್ವಲಿಸಲಿ. ಸ್ವಾರ್ಥ, ಹಗೆತನವನ್ನು ಬಿಟ್ಟು ಕ್ರಿಸ್ತರಂತೆ ತ್ಯಾಗ ತನ್ಮಯರಾಗಿ ಸೇವಾಮನೋಭಾವದಿಂದ ಮುನ್ನೆಡೆಯಿರಿ ಎಂದರು.