ಆರೋಗ್ಯವೇ ಭಾಗ್ಯ: ನಿಮ್ಮ ಕುಟುಂಬಕ್ಕಾಗಿ ಸರಿಯಾದ ಆರೋಗ್ಯ ವಿಮೆಯನ್ನೇ ಆಯ್ಕೆ ಮಾಡಿಕೊಳ್ಳಿ

ಆರೋಗ್ಯವೇ ಭಾಗ್ಯ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಆರೋಗ್ಯವನ್ನು ಎಷ್ಟು ಸಾಧ್ಯವೋ ಅಷ್ಟು ಪ್ರಾಕೃತಿಕವಾಗಿ ಕಾಪಾಡಿಕೊಂಡರೆ ಒಳಿತು. ಆದಾಗ್ಯೂ, ಕೆಲವೊಮ್ಮೆ ಕೈಮೀರಿದ ಸಂದರ್ಭಗಳಲ್ಲಿ ಆರೋಗ್ಯ ಹದಗೆಟ್ಟು ಆಸ್ಪತ್ರೆ ಸೇರಬೇಕಾಗಿ ಚಿಕಿತ್ಸೆ ಪಡೆದುಕೊಂಡಾಗ ಕೈಗೆ ನೀಡಲಾಗುವ ಆಸ್ಪತ್ರೆ ಬಿಲ್ ಗಳನ್ನು ಕಂಡು ಮತ್ತೊಮ್ಮೆ ಆಸ್ಪತ್ರೆ ಸೇರುವ ಪರಿಸ್ಥಿತಿ ಎದುರಾದರೂ ಅಚ್ಚರಿಯಿಲ್ಲ. ಇಂತಹ ಪರಿಸ್ಥಿತಿಗಳನ್ನು ತಪ್ಪಿಸಿಕೊಳ್ಳಲು ಹೆಲ್ತ್ ಇನ್ಶೂರೆನ್ಸ್(ಆರೋಗ್ಯ ವಿಮೆ)ಗಳನ್ನು ಮಾಡಿಸಿಕೊಳ್ಳಬಹುದು.

ಮಾರುಕಟ್ಟೆಯಲ್ಲಿ ತರಹೇವಾರಿ ಆರೋಗ್ಯ ವಿಮೆಗಳಿದ್ದು ಯಾವುದನ್ನು ಆಯ್ಕೆ ಮಾಡಲಿ ಎನ್ನುವ ಗೊಂದಲ ಎಲ್ಲರನ್ನೂ ಕಾಡುತ್ತವೆ. ಕಂಪನಿಗಳು ಕೂಡಾ ವಿಮೆ ಮಾಡಿಸಿಕೊಳ್ಳಲು ಹೇಳುವಾಗ ತೋರುವ ಉತ್ಸಾಹವನ್ನು ನಾವು ವಿಮಾ ಮೊತ್ತವನ್ನು ಕ್ಲೈಮ್ ಮಾಡುವಾಗ ತೋರುವುದಿಲ್ಲ. ಕೆಲವೊಂದು ವಿಮೆಗಳಲ್ಲಿ ಗುಪ್ತವಾಗಿರುವ ಷರತ್ತುಗಳಿದ್ದು, ಕ್ಲೈಮ್ ಮಾಡುವ ಸಮಯದಲ್ಲಿಯೇ ಇವುಗಳ ಅಸಲಿಯತ್ತು ಬಯಲಾಗುತ್ತವೆ. ಇಂತಹ ಸಂದರ್ಭದಲ್ಲಿ ಆರೋಗ್ಯ ವಿಮೆಗಳನ್ನು ಸರಿಯಾಗಿ ಪರಿಶೀಲಿಸಿಕೊಂಡು ಆಯ್ಕೆ ಮಾಡಬೇಕು.

1) ಸರಿಯಾದ ವಿಮಾ ವ್ಯಾಪ್ತಿಯನ್ನು ಪರಿಶೀಲಿಸಿ

ವ್ಯಾಪಕ ಶ್ರೇಣಿಯ ವೈದ್ಯಕೀಯ ಸಮಸ್ಯೆಗಳು, ಆಸ್ಪತ್ರೆಯ ಪೂರ್ವ ಮತ್ತು ನಂತರದ ಕವರ್, ಆಂಬ್ಯುಲೆನ್ಸ್ ಶುಲ್ಕಗಳು, ಗಂಭೀರ ಅನಾರೋಗ್ಯದ ಕವರ್, ಹೆರಿಗೆ ಪ್ರಯೋಜನಗಳು, ನಗದು ರಹಿತ ಚಿಕಿತ್ಸೆ, ದೈನಂದಿನ ಆಸ್ಪತ್ರೆಯ ನಗದು ಪ್ರಯೋಜನ, ಒಳರೋಗಿ ಚಿಕಿತ್ಸೆ, ಇತ್ಯಾದಿಗಳ ವಿರುದ್ಧ ನಿಮಗೆ ಕವರೇಜ್ ನೀಡುವ ಆರೋಗ್ಯ ಯೋಜನೆಯನ್ನು ಆಯ್ಕೆಮಾಡಿ. ನಿಮ್ಮ ಕುಟುಂಬಕ್ಕೆ ವೈದ್ಯಕೀಯ ವಿಮೆಯನ್ನು ಖರೀದಿಸುತ್ತಿರುವಿರಿ ಎಂದಾದರೆ, ವಿಮೆ ಮಾಡಬೇಕಾದ ಪ್ರತಿಯೊಬ್ಬ ಸದಸ್ಯರ ಅಗತ್ಯತೆಗಳನ್ನು ಪಾಲಿಸಿ ಪೂರೈಸುತ್ತದೆ ಎಂದು ಖಚಿತಪಡಿಸಿಕೊಳ್ಳಿ.

ನಿಮ್ಮ ಅವಶ್ಯಕತೆಗಳನ್ನು ಪರಿಗಣಿಸಿ, ವಿಭಿನ್ನ ಯೋಜನೆಗಳನ್ನು ಹೋಲಿಕೆ ಮಾಡಿ, ವಿಮಾ ವೈಶಿಷ್ಟ್ಯಗಳು ಮತ್ತು ಮಿತಿಗಳನ್ನು ಪರಿಶೀಲಿಸಿ. ನಮಗೆ ಗೊತ್ತೇ ಆಗದ ಉಪ-ಮಿತಿಗಳು, ಕಾಯುವ ಅವಧಿ, ಇತ್ಯಾದಿಗಳಂತಹ ಗುಪ್ತ ಅಂಶಗಳು ವಿಮೆಯಲ್ಲಿರಬಹುದು. ಆದ್ದರಿಂದ, ಎಲ್ಲಾ ನಿಯಮಗಳು ಮತ್ತು ಷರತ್ತುಳನ್ನು ಸರಿಯಾಗಿ ಓದಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ. ವಿಮೆಯನ್ನು ಕ್ಲೈಮ್ ಮಾಡುವ ಸಮಯದಲ್ಲಿ ನೀವು ಮತ್ತು ನಿಮ್ಮ ಕುಟುಂಬ ಯಾವುದೇ ತೊಂದರೆಯನ್ನು ಎದುರಿಸಬೇಕಾಗಿಲ್ಲ ಎನ್ನುವುದನ್ನು ಖಾತ್ರಿ ಪಡಿಸಿ.

2) ಹೊಸ ಕುಟುಂಬ ಸದಸ್ಯರನ್ನು ಸೇರಿಸಲು ಹೊಂದಾಣಿಕೆ ಇದೆಯೆ ಪರೀಕ್ಷಿಸಿ

ಕುಟುಂಬ ಆರೋಗ್ಯ ಯೋಜನೆಯನ್ನು ಖರೀದಿಸುವಾಗ, ನೀವು ಹೊಸ ಕುಟುಂಬದ ಸದಸ್ಯರನ್ನು ಸುಲಭವಾಗಿ ಸೇರಿಸಬಹುದು ಎಂದು ಖಚಿತಪಡಿಸಿಕೊಳ್ಳಿ. ಕುಟುಂಬದ ಹಿರಿಯ ಸದಸ್ಯರು ತೀರಿಕೊಂಡರೆ ಅಥವಾ ಕವರೇಜ್‌ಗೆ ಹೆಚ್ಚು ಅರ್ಹತೆ ಹೊಂದಿಲ್ಲದಿದ್ದರೆ, ಇತರ ಕುಟುಂಬದ ಸದಸ್ಯರು ಯೋಜನೆಯ ಪ್ರಯೋಜನಗಳನ್ನು ಕಳೆದುಕೊಳ್ಳದೆ ಅದೇ ಯೋಜನೆಯನ್ನು ಮುಂದುವರಿಸಬಹುದೇ ನೋಡಿ. ಕುಟುಂಬದಲ್ಲಿ , ಸಂಗಾತಿಯ ಆಗಮನ ಅಥವಾ ಮಗುವೊಂದರ ಜನನವಾದಾಗಲೂ ಅದೇ ಪಾಲಿಸಿಯಲ್ಲಿ ಮುಂದುವರಿಯಬಹುದೆ ಅಥವಾ ಪ್ರತ್ಯೇಕ ಪಾಲಿಸಿ ಬೇಕಾಗುತ್ತದೆಯೆ ಪರಿಶೀಲಿಸಿ.

3) ಕಾಯುವ ಅವಧಿಯ ಷರತ್ತು ಪರಿಶೀಲಿಸಿ

ಸಾಮಾನ್ಯವಾಗಿ, ಆರೋಗ್ಯ ವಿಮಾ ಯೋಜನೆಗಳು ಪೂರ್ವ ಅಸ್ತಿತ್ವದಲ್ಲಿರುವ ರೋಗಗಳು, ಹೆರಿಗೆ ವೆಚ್ಚಗಳು ಹರ್ನಿಯಾ, ಉಬ್ಬಿರುವ ರಕ್ತನಾಳಗಳು ಮುಂತಾದ ಕೆಲವು ನಿರ್ದಿಷ್ಟ ಚಿಕಿತ್ಸೆಗಳನ್ನು ಒಂದು ನಿರ್ದಿಷ್ಟವಾದ ಕಾಯುವ ಅವಧಿಯ ನಂತರ, ಅಂದರೆ 2 ರಿಂದ 4 ವರ್ಷಗಳ ನಂತರ ಕವರ್ ಮಾಡುತ್ತವೆ ಮತ್ತು ಇದು ಒಂದು ಯೋಜನೆಯಿಂದ ಇನ್ನೊಂದು ಯೋಜನೆಗೆ ಬದಲಾಗುತ್ತಿರುತ್ತದೆ. ಉದಾಹರಣೆಗೆ, ಪಾಲಿಸಿ ಖರೀದಿಯ ದಿನಾಂಕದಿಂದ 2 ರಿಂದ 4 ವರ್ಷಗಳ ಅವಧಿಯ ನಂತರದ ಮಾತೃತ್ವ ವೆಚ್ಚಗಳನ್ನು ಸಾಮಾನ್ಯವಾಗಿ ಕವರ್ ಮಾಡಲಾಗುತ್ತದೆ.

ನಿಮ್ಮ ಕುಟುಂಬ ಆರೋಗ್ಯ ಯೋಜನೆಯಲ್ಲಿ ಮೊದಲೇ ಅಸ್ತಿತ್ವದಲ್ಲಿರುವ ಕಾಯಿಲೆಗಳನ್ನು ಕವರ್ ಮಾಡುವ ಅವಧಿಯನ್ನು ಪರಿಶೀಲಿಸಿ ಮತ್ತು ಕನಿಷ್ಠ ಕಾಯುವ ಅವಧಿಯೊಂದಿಗೆ ಬರುವ ಯೋಜನೆಯನ್ನು ಆರಿಸಿಕೊಳ್ಳಿ.

4) ಸಹ-ಪಾವತಿಯ ಷರತ್ತು ಪರಿಶೀಲಿಸಿ

ಇದು ನಿಮ್ಮ ಜೇಬಿನಿಂದ ನೀವು ಪಾವತಿಸಬೇಕಾದ ಶೇಕಡಾವಾರು ಮೊತ್ತವಾಗಿರುತ್ತದೆ. ವಿಮಾ ಕಂಪನಿಯು ಉಳಿದ ಆಸ್ಪತ್ರೆ ವೆಚ್ಚವನ್ನು ಭರಿಸುತ್ತದೆ. ಉದಾಹರಣೆಗೆ, ನೀವು 10% ಕೋ-ಪೇ ಷರತ್ತು ಹೊಂದಿರುವ ಪಾಲಿಸಿಯನ್ನು ಹೊಂದಿದ್ದರೆ, ರೂ. 1 ಲಕ್ಷ ಕ್ಕೆ ನೀವು ರೂ. 10,000 ನಿಮ್ಮ ಸ್ವಂತ ಕಿಸೆಯಿಂದ ಪಾವತಿಸಬೇಕಾಗುತ್ತದೆ ಮತ್ತು ವಿಮಾ ಕಂಪನಿಯು ಕ್ಲೈಮ್‌ನ ಭಾಗವಾಗಿ ರೂ. 90,000 ಪಾವತಿಸುತ್ತದೆ. ಸಹ-ಪಾವತಿ ಷರತ್ತು ಇಲ್ಲದಿರುವ ವಿಮಾ ಪಾಲಿಸಿಗಳು ಕೂಡಾ ಲಭ್ಯವಿದೆ.

5) ಜೀವಮಾನದ ನವೀಕರಣವಿರುವ ಯೋಜನೆಯನ್ನು ಆಯ್ಕೆಮಾಡಿ

ವಿಮಾ ಕಹ್ರೀದಿಸುವಾಗ ಜೀವಮಾನದ ನವೀಕರಣವು ಸಹ ಪರಿಗಣಿಸಬೇಕಾದ ಅತ್ಯಗತ್ಯ ಅಂಶವಾಗಿದೆ. ನಮ್ಮಲ್ಲಿ ಅನೇಕರು ಅದನ್ನು ಮರೆತುಬಿಡುತ್ತಾರೆ. ನಿಮ್ಮ ಪಾಲಿಸಿಯು ಎಷ್ಟು ವರ್ಷಗಳವರೆಗೆ ಮೌಲ್ಯೀಕರಿಸಲ್ಪಟ್ಟಿದೆ ಎಂಬುದನ್ನು ನೀವು ಪರಿಶೀಲಿಸಿ. ಇದು ಸೀಮಿತ ಜೀವಿತಾವಧಿಯ ನವೀಕರಣವನ್ನು ನೀಡುತ್ತದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಏಕೆಂದರೆ ಆರೋಗ್ಯ ವಿಮೆಯ ಹೆಚ್ಚಿನ ಅಗತ್ಯ ಕಂಡುಬರುವುದು ಮಧ್ಯವಯಸ್ಸಾದ ಮೇಲೆ. ಆದ್ದರಿಂದ, ಜೀವಿತಾವಧಿಯ ನವೀಕರಣವನ್ನು ಒದಗಿಸುವ ಕುಟುಂಬ ಆರೋಗ್ಯ ಯೋಜನೆಯನ್ನು ಆಯ್ಕೆಮಾಡಿ. ನಿರ್ದಿಷ್ಟ ವಯೋಮಿತಿಯನ್ನು ದಾಟಿದ ನಂತರ ಮತ್ತೊಂದು ಪಾಲಿಸಿಯನ್ನು ಖರೀದಿಸುವ ತೊಂದರೆಯಿಲ್ಲದೆ ಮುಂದಿನ ವರ್ಷಗಳಲ್ಲಿ ಅದೇ ಯೋಜನೆಯನ್ನು ಮುಂದುವರಿಸಲು ಇದು ನಿಮಗೆ ಅನುವು ಮಾಡಿಕೊಡುವ ವಿಮೆಯನ್ನು ಆಯ್ಕೆ ಮಾಡಿ.

ಉದಾಹರಣೆಗೆ, ನಿಮ್ಮ ಆರೋಗ್ಯ ವಿಮಾ ಯೋಜನೆಯು 45 ವರ್ಷಗಳವರೆಗೆ ನವೀಕರಣವನ್ನು ನೀಡುತ್ತದೆ ಎಂದಾದರೆ, ನೀವು ಆ ವಯಸ್ಸನ್ನು ದಾಟಿದ ನಂತರ ಈ ವಿಮೆ ತನ್ನ ಮೌಲ್ಯ ಕಳೆದುಕೊಳ್ಳುತ್ತದೆ ಮತ್ತು ನೀವು ಹೆಚ್ಚು ಪ್ರೀಮಿಯಂ ಭರಿಸುವ ಇನ್ನೊಂದು ವಿಮೆ ತೆಗೆದುಕೊಳ್ಳಬೇಕಾಗುತ್ತದೆ. ಇದರ ಬದಲಿಗೆ ಜೀವಮಾನದ ನವೀಕರಣದೊಂದಿಗೆ ಯೋಜನೆಯನ್ನು ಖರೀದಿಸಿದರೆ, ಅದರ ವ್ಯಾಪ್ತಿ ಹೆಚ್ಚಾಗಿದ್ದು ಹೆಚ್ಚು ಕಾಲದವರೆಗೆ ಅದರ ಪ್ರಯೋಜನವನ್ನು ಪಡೆದುಕೊಳ್ಳಬಹುದು.

6) ಆಸ್ಪತ್ರೆ ಕೊಠಡಿ ಬಾಡಿಗೆ ಮಿತಿ

ನೀವು ಖಾಸಗಿ ಆಸ್ಪತ್ರೆಯ ಕೊಠಡಿ, ಅರೆ-ಖಾಸಗಿ ಕೊಠಡಿ ಅಥವಾ ಜನರಲ್ ಕೊಠಡಿಯನ್ನು ಪಡೆಯುತ್ತೀರಾ, ಅದು ನೀವು ಆಯ್ಕೆ ಮಾಡುವ ಯೋಜನೆಯ ಪ್ರಕಾರವನ್ನು ಅವಲಂಬಿಸಿರುತ್ತದೆ. ನಿಮ್ಮ ಸ್ವಂತ ಜೇಬಿನಿಂದ ಹೆಚ್ಚುವರಿ ಪಾವತಿಸುವುದನ್ನು ತಪ್ಪಿಸಿಕೊಳ್ಳಲು ಹೆಚ್ಚಿನ ಕೊಠಡಿ-ಬಾಡಿಗೆ ಮಿತಿಯನ್ನು ಒದಗಿಸುವ ಪಾಲಿಸಿಯನ್ನು ಆಯ್ದುಕೊಳ್ಳುವುದು ಉತ್ತಮ.

ಕುಟುಂಬದ ಆರೋಗ್ಯಕ್ಕಾಗಿ ಆರೋಗ್ಯ ವಿಮೆಗಳನ್ನು ಖರೀದಿಸುವುದು ಒಳ್ಳೆಯ ವಿಚಾರ. ಆದರೆ, ಈ ವಿಮೆಗಳನ್ನು ಖರೀದಿಸುವ ಮುನ್ನ ಅವುಗಳ ಬಗ್ಗೆ ಸರಿಯಾಗಿ ತಿಳಿದುಕೊಂಡು ಮುಂದುವರಿಯುವುದು ಉತ್ತಮ. ಹಿಂದೆ ಮುಂದೆ ವಿಚಾರ ಮಾಡದೆ ವಿಮೆಗಳನ್ನು ಖರೀದಿಸಿದಲ್ಲಿ ಕ್ಲೈಮ್ ಸಂದರ್ಭದಲ್ಲಿ ಅಲೆದಾಟ ನಿಶ್ಚಿತ.