ಗುವಾಹಟಿ: ಅರುಣಾಚಲ ಪ್ರದೇಶದ ಮೇಲಿನ ತನ್ನ ಹಕ್ಕನ್ನು ಮತ್ತೊಮ್ಮೆ ಒತ್ತಿಹೇಳುವ ಪ್ರಯತ್ನದ ಭಾಗವಾಗಿ ಚೀನಾವು ಅರುಣಾಚಲ ಪ್ರದೇಶದ 11 ಸ್ಥಳಗಳಿಗೆ ಹೊಸ ಹೆಸರುಗಳನ್ನು ಬಿಡುಗಡೆ ಮಾಡಿದೆ. ಇದೀಗ ಮೂರನೇ ಬಾರಿಗೆ ಚೀನಾವು ಅರುಣಾಚಲ ಪ್ರದೇಶದ ಸ್ಥಳಗಳಿಗೆ ‘ಮರುನಾಮಕರಣ’ ಮಾಡಿದ್ದು, ಅದನ್ನು “ಜಂಗ್ನಾನ್, ಟಿಬೆಟ್‌ನ ದಕ್ಷಿಣ ಭಾಗ” ಎಂದು ಕರೆದಿದೆ.
ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ನಿನ್ನೆ ಚೀನಾದ ಕ್ಯಾಬಿನೆಟ್, ಸ್ಟೇಟ್ ಕೌನ್ಸಿಲ್ ನೀಡಿದ ಭೌಗೋಳಿಕ ಹೆಸರುಗಳ ಮೇಲಿನ ನಿಯಮಗಳಿಗೆ ಅನುಸಾರವಾಗಿ ಚೀನಾ, ಟಿಬೆಟ್ ಮತ್ತು ಪಿನ್ಯಿನ್ ಅಕ್ಷರಗಳಲ್ಲಿ ಹೆಸರುಗಳನ್ನು ಬಿಡುಗಡೆ ಮಾಡಿದೆ. ಚೀನಾ ಬಿಡುಗಡೆ ಮಾಡಿರುವ ಹೆಸರುಗಳ ಪಟ್ಟಿಯಲ್ಲಿ ಐದು ಪರ್ವತ ಶಿಖರಗಳು, ಎರಡು ಭೂ ಪ್ರದೇಶಗಳು, ಎರಡು ವಸತಿ ಪ್ರದೇಶಗಳು ಮತ್ತು ಎರಡು ನದಿಗಳು ಸೇರಿವೆ.
ಇಂತಹ ಮೊದಲ ಎರಡು ಪಟ್ಟಿಗಳನ್ನು 2018 ಮತ್ತು 2021 ರಲ್ಲಿ ಬಿಡುಗಡೆ ಮಾಡಲಾಯಿತು. ಚೀನಾ 2017 ರಲ್ಲಿ ಆರು ಹೆಸರುಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. 2021 ರಲ್ಲಿ ಅದು ಅರುಣಾಚಲ ಪ್ರದೇಶದ 15 ಸ್ಥಳಗಳನು ‘ಮರುನಾಮಕರಣ’ ಮಾಡಿತ್ತು.
ಅರುಣಾಚಲ ಪ್ರದೇಶದ ಸ್ಥಳಗಳ ಮರುನಾಮಕರಣಕ್ಕೆ ಚೀನಾ ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದರು. ಅರುಣಾಚಲವು ಭಾರತದ ಅವಿಭಾಜ್ಯ ಅಂಗವಾಗಿ “ಯಾವಾಗಲೂ ಇತ್ತು” ಮತ್ತು “ಯಾವಾಗಲೂ ಇರುತ್ತದೆ” ಎಂದು ಪ್ರತಿಪಾದಿಸಿದ್ದ ನವದೆಹಲಿ ಚೀನಾದ ಉದ್ಧಟತನವನ್ನು ಬಲವಾಗಿ ತಿರಸ್ಕರಿಸಿತ್ತು.
ಚೀನಾವು ಲೈನ್ ಆಫ್ ಆಕ್ಚುವಲ್ ಕಂಟೋಲ್ ನಲ್ಲಿ ತನ್ನ ಉದ್ಧಟತನವನ್ನು ಪ್ರದರ್ಶಿಸುತ್ತಲೇ ಬಂದಿದ್ದು, ಭಾರತವು ಇದನ್ನು ಖಂಡಿಸಿದೆ ಮತ್ತು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಿಸಿದ ಚೀನಾ ಸೈನಿಕರನ್ನು ಭಾರತೀಯ ಸೈನಿಕರು ಹಿಗ್ಗಾಮುಗ್ಗಾ ಥಳಿಸಿ ಹಿಮ್ಮೆಟ್ಟಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.