ಮಕ್ಕಳ ಸುಪ್ತ ಪ್ರತಿಭೆ ಅನಾವರಣಕ್ಕೆ ಮಕ್ಕಳ ಹಬ್ಬ ಸಹಕಾರಿ: ಡಾ. ಕೆ ವಿದ್ಯಾಕುಮಾರಿ

ಉಡುಪಿ: ಮಕ್ಕಳು ಚಟುವಟಿಕೆಗಳ ಆಗರ. ಮಕ್ಕಳ ಬೆಳವಣಿಗೆ ಹಾಗೂ ಅವರುಗಳ ಸರ್ವತೋಮುಖ
ಅಭಿವೃದ್ಧಿಗೆ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಗಳನ್ನು ಅನಾವರಣಗೊಳಿಸುವ ಸಲುವಾಗಿ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮಕ್ಕಳು ಉತ್ಸಾಹದಿಂದ ಪಾಲ್ಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಕೆ ವಿದ್ಯಾಕುಮಾರಿ ತಿಳಿಸಿದರು.

ಅವರು ನಗರದ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ಧಾರವಾಡ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಮಕ್ಕಳ ಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಮಕ್ಕಳು ಓದಿನ ಒತ್ತಡವನ್ನು ಮರೆತು ಕಾರ್ಯಕ್ರಮದಲ್ಲಿ ಮುಕ್ತವಾಗಿ ಪಾಲ್ಗೊಳ್ಳಬೇಕು. ಇದರಿಂದ ಮಕ್ಕಳ ಭೌತಿಕ ಹಾಗೂ ಮಾನಸಿಕ ವಿಕಾಸದೊಂದಿಗೆ ದೈಹಿಕವಾಗಿಯೂ ಸದೃಢರಾಗುತ್ತಾರೆ. ಮಕ್ಕಳು ಲವಲವಿಕೆಯಿಂದ ಇರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತದೆ ಎಂದರು.

ಮಕ್ಕಳು ತಮಗಿಷ್ಟವಾದ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಸಾಕಷ್ಟು ಅವಕಾಶಗಳಿದ್ದು, ಅದನ್ನು ಸದುಪಯೋಗಪಡಿಸಿಕೊಳ್ಳಿ. ಮಕ್ಕಳು ಆಟದ ಜೊತೆಗೆ ಓದಿನ ಕಡೆಯೂ ಗಮನಹರಿಸಬೇಕು. ಪರಿಶ್ರಮದಿಂದ ಪ್ರತಿಫಲ ಸಾಧ್ಯ. ಮುಂದಿನ ದಿನಗಳಲ್ಲಿ ಉತ್ತಮ ಜೀವನ ಸಾಗಿಸಲು ಈಗಿನಿಂದಲೇ ಪ್ರಯತ್ನಿಸಬೇಕು ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್ ಮಾತನಾಡಿ, ಹಬ್ಬದ ವಾತಾವರಣ ಬಾಲಭವನದಲ್ಲಿ ಸೃಷ್ಠಿಯಾಗಿದೆ. ಮಕ್ಕಳು ದೇಶದ ಸಂಪತ್ತು. ಅವರು ಆರೋಗ್ಯವಂತರಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕೆಂಬ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಶಿಕ್ಷಣ ವ್ಯವಸ್ಥೆಯು ಮಕ್ಕಳ ಬಾಲ್ಯವನ್ನು
ಕಿತ್ತುಕೊಳ್ಳುವಂತಾಗಬಾರದು. ಮಕ್ಕಳು ಮೊಬೈಲ್ ಗೀಳಿಗೆ ಬಲಿಯಾಗದೇ ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.

ಮಕ್ಕಳಿಗೆ ಕನಸು ಹಾಗೂ ಭವಿಷ್ಯವನ್ನು ಕಲ್ಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಪ್ರತಿ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ಪ್ರತಿಭೆ ಹಾಗೂ ಚೈತನ್ಯ ಹೊಂದಿರುತ್ತಾರೆ. ಪೋಷಕರು ತಮ್ಮ ಮಕ್ಕಳ ಕನಸನ್ನು ನನಸಾಗಿಸಲು ಸೂಕ್ತ ಅವಕಾಶ ಕಲ್ಪಿಸಿಕೊಡಬೇಕು. ಮಕ್ಕಳ ಹಬ್ಬಗಳು ಇಲಾಖೆಗೆ ಸೀಮಿತವಾಗದೇ ಪ್ರತೀ ಗ್ರಾಮಗಳಲ್ಲೂ ಇಂತಹ ಕಾರ್ಯಕ್ರಮಗಳನ್ನು ಆಚರಿಸುವಂತಾಗಬೇಕು ಎಂದ ಅವರು,
ಕಾರ್ಯಕ್ರಮದಲ್ಲಿ ಸರಕಾರಿ ಶಾಲಾ ಮಕ್ಕಳಿಗೆ ಅವಕಾಶ ಕಲ್ಪಿಸಿರುವುದು ಉತ್ತಮ ಸಂಗತಿ. ಇಂತಹ ಕಾರ್ಯಕ್ರಮಗಳು ಮಕ್ಕಳಲ್ಲಿ ಸಮಾನತೆ ಕಲ್ಪಿಸುವುದರೊಂದಿಗೆ ಅವರುಗಳಲ್ಲಿ ಕ್ರಿಯಾಶೀಲತೆ, ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಆಟದೊಂದಿಗೆ ಪಾಠದ ಕಡೆಗೂ ಗಮನಹರಿಸಬೇಕು ಎಂದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರೋಶನ್ ಕುಮಾರ್ ಶೆಟ್ಟಿ, ಮಕ್ಕಳ ಕಲ್ಯಾಣ ಸಮಿತಿಯ ಜಿಲ್ಲಾ ಅಧ್ಯಕ್ಷ ರೊನಾಲ್ಡ್ ಬಿ ಫುಟಾರ್ಡೊ, ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ನಾಗರಾಜ್, ಕ್ರೀಡಾ ಇಲಾಖೆಯ ರವಿಚಂದ್ರ, ವಿವಿಧ ಇಲಾಖಾಧಿಕಾರಿಗಳು, ಶಿಕ್ಷಕರುಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ರೂಪ ನಿರೂಪಿಸಿ, ವಂದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ 9 ರಿಂದ 18 ವರ್ಷದೊಳಗಿನ ಸರಕಾರಿ ಶಾಲೆಯ ಮಕ್ಕಳಿಗೆ ಜಾನಪದ ನೃತ, ಸಂಗೀತ, ಚಿತ್ರಕಲೆ, ಕಥೆ ಬರೆಯುವುದು, ನಾಟಕ, ಮನೋರಂಜನಾ ಆಟ, ಖೋ-ಖೋ ಹಾಗೂ ಕಬಡ್ಡಿ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ಸುಮಾರು 350 ಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡಿದ್ದರು.