ಏಕಾಗ್ರತೆ ಮತ್ತು ಮಾನಸಿಕ ಸದೃಢತೆಗೆ ಚೆಸ್ ಹಾಗೂ ಚಿತ್ರಕಲೆ ಸಹಕಾರಿ: ನಿತ್ಯಾನಂದ ಶೆಟ್ಟಿ

ಹೆಬ್ರಿ: ನಮ್ಮ ವ್ಯಕ್ತಿತ್ವ ವಿಕಸನಗೊಳ್ಳಲು ದೈಹಿಕ ವ್ಯಾಯಾಮದ ಜತೆ ಮಾನಸಿಕ ಚಟುವಟಿಕೆ ಕೂಡ ಮುಖ್ಯ. ಓದಿನಲ್ಲಿ ಏಕಾಗ್ರತೆ ಬರಲು ಹಾಗೂ ಮಾನಸಿಕವಾಗಿ ಸದೃಢರಾಗಲು ಚೆಸ್ ಹಾಗೂ ಚಿತ್ರಕಲೆ ಸಹಕಾರಿ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಕಳೆದ 7 ವರ್ಷಗಳಿಂದ ಉಚಿತ ಚೆಸ್ ತರಗತಿಯನ್ನು ನಡೆಸುತ್ತಿರುವುದರ ಜತೆಗೆ ಈ ಬಾರಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲಾ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದು ಮೂಡುಬಿದ್ರೆ ತಾಲೂಕು ದೈಹಿಕ ಶಿಕ್ಷಣಾಧಿಕಾರಿ ನಿತ್ಯಾನಂದ ಶೆಟ್ಟಿ ಶಿವಪುರ ಹೇಳಿದರು.

ಅವರು ಭಾನುವಾರದಂದು ಚಾಣಕ್ಯ ಎಜ್ಯುಕೇಶನ್ ಅಕಾಡಮಿ ಸಂಸ್ಥೆಯ ಆಶ್ರಯದಲ್ಲಿ ಹೆಬ್ರಿ ಎಸ್.ಆರ್ ಸ್ಕೂಲ್ ಬಳಿಯ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನಲ್ಲಿ ನಡೆಯುತ್ತಿರುವ ಉಚಿತ ಚೆಸ್ ಹಾಗೂ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ಚಿತ್ರಕಲಾ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.

ಮುದ್ರಾಡಿ ಪ್ರೌಢಶಾಲಾ ಆಂಗ್ಲ ಭಾಷಾ ಶಿಕ್ಷಕ ಬಲ್ಲಾಡಿ ಚಂದ್ರಶೇಖರ ಭಟ್‌ ಮಾತನಾಡಿ, ಪಠ್ಯದ ಜತೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮ ಮಕ್ಕಳನ್ನು ತೊಡಗಿಸಿಕೊಳ್ಳುವಂತೆ ಅವಕಾಶ ಕಲ್ಪಿಸಿದಾಗ ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರ ಬರಲು ಸಾಧ್ಯ. ಈ ನಿಟ್ಟಿನಲ್ಲಿ ಚಾಣಕ್ಯ ಸಂಸ್ಥೆ ಯಾವುದೇ ಲಾಭದ ಉದ್ದೇಶವಿಲ್ಲದೆ ಕಳೆದ 7 ವರ್ಷಗಳಿಂದ ಹೆಸರಾಂತ ಸಂಪನ್ಮೂಲ ವ್ಯಕ್ತಿಗಳಿಂದ ವೈವಿಧ್ಯಮಯ ತರಬೇತಿ ನೀಡುತ್ತಿರುವುದು ಗ್ರಾಮೀಣ ಮಕ್ಕಳಿಗೆ ಅನುಕೂಲವಾಗಿದೆ ಎಂದರು.

ವಿಠ್ಠಲ ಶೆಟ್ಟಿ ಪ್ರೌಢಶಾಲೆಯ ಗಣಿತ ಶಿಕ್ಷಕ ಶಿವಾನಂದ ಶೆಟ್ಟಿ ಮಾತನಾಡಿ, ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳನ್ನು ಅನಾವರಣಗೊಳಿಸಲು ಅನುಕೂಲವಾಗುತ್ತದೆ. ಈ ನಿ ಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಅವಕಾಶ ಕಲ್ಪಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಚಾಣಕ್ಯ ಟ್ಯುಟೋರಿಯಲ್ ಕಾಲೇಜಿನ ಪ್ರಾಂಶುಪಾಲೆ ವೀಣಾ ಯು.ಶೆಟ್ಟಿ ಮಾತನಾಡಿ, ಪ್ರತಿ ಭಾನುವಾರ ಚಿತ್ರಕಲಾ ತರಬೇತಿ ನಡೆಯುತ್ತಿದ್ದು ಸರಕಾರಿ ಶಾಲೆಯಲ್ಲಿ ಓದುತ್ತಿರುವ ಆಸಕ್ತರಿಗೆ ಚಿತ್ರಕಲಾ ತರಬೇತಿ ನೀಡಲಾಗುತ್ತಿದೆ. ಅಲ್ಲದೆ ಪ್ರತಿ ಶನಿವಾರ ಆಸಕ್ತರಿಗೆ ಉಚಿತ ಚೆಸ್ ತರಬೇತಿ ನಡೆಯಲಿದೆ. ಜತೆಗೆ ಪ್ರತಿ ಭಾನುವಾರ ಶಾಸ್ತ್ರೀಯ ಹಾಗೂ ಟ್ರ‍್ಯಾಕ್ ಸಂಗೀತ ತರಬೇತಿ, ಭರತನಾಟ್ಯ, ಫಿಲ್ಮ್ ಡಾನ್ಸ್ ತರಗತಿ ನಡೆಯುತ್ತಿದ್ದು ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ವಿನಂತಿಸಿದರು.

ಸಂಗೀತ ಗುರು ಸ್ವಾತಿ ಭಟ್ ಉಡುಪಿ, ಚಿತ್ರ ಕಲಾವಿದ ವಸಂತ ದೇವಾಡಿಗ, ನೃತ್ಯ ನಿರ್ದೇಶಕ ಅವಿನಾಶ್ ಪೆರ್ಡೂರು, ಸುಕೇಶ್ ಮೊದಲಾದವರು ಉಪಸ್ಥಿತರಿದ್ದರು.

ಮಾನ್ಯ ಯು.ಶೆಟ್ಟಿ ಸ್ವಾಗತಿಸಿ, ಉದಯಕುಮಾರ್ ಕಾರ್ಯಕ್ರಮ ನಿರೂಪಿಸಿ, ಶಿಕ್ಷಕಿ ಶತಾ ಶೆಟ್ಟಿ ವಂದಿಸಿದರು.