ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಹೊಸತೊಂದು ಸಂಚಲವನ್ನು ಹುಟ್ಟು ಹಾಕಿದ 777ಚಾರ್ಲಿ ಚಿತ್ರವು 25 ದಿನಗಳಲ್ಲಿ ದೇಶಾದ್ಯಂತ 450 ಸ್ಕ್ರೀನ್ ಗಳಲ್ಲಿ, ಎಲ್ಲಾ ಭಾಷೆಗಳನ್ನು ಒಟ್ಟು ಸೇರಿಸಿ ಸರಿ ಸುಮಾರು 150 ಕೋಟಿ ರೂಗಳನ್ನು ಗಲ್ಲಾಪೆಟ್ಟಿಗೆಯಿಂದ ಬಾಚಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ನಿರ್ಮಾಪಕ-ನಟ ರಕ್ಷಿತ್ ಶೆಟ್ಟಿ, ಚಾರ್ಲಿ ಯಶಸ್ಸಿನಿಂದ ಇಡೀ ತಂಡ ಸಂಪೂರ್ಣವಾಗಿ ಖುಷಿಯಾಗಿದೆ. ಇದು ಬರಿಯ ಚಿತ್ರವಲ್ಲ, ಇದು ನಮ್ಮೆಲ್ಲರ ಜೀವನದ ಮೂರು ವರ್ಷದ ಅನುಭವ ಕಥನ. ಕೆಜಿಎಫ್-1 ಮತ್ತು ಕೆಜಿಎಫ್- 2 ಚಿತ್ರವು ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿ, ಕನ್ನಡ ಚಿತ್ರಗಳಿಗೆ ಒಂದು ವೇದಿಕೆ ಕಲ್ಪಿಸಿ ಕೊಟ್ಟಿದ್ದರಿಂದ ಇತರ ಕನ್ನಡ ಚಿತ್ರಗಳೂ ದೇಶಾದ್ಯಂತ ಯಶಸ್ಸು ಪಡೆಯಲು ಸಾಧ್ಯವಾಯಿತು.
ಚಾರ್ಲಿ ಸಿನಿಮಾವು ಬೇರೆ ಜೋನರ್ ಚಿತ್ರವಾಗಿದ್ದು, ಇದುವರೆಗೂ ಸಿನಿಮಾ ನೋಡದವರನ್ನೂ ಚಿತ್ರಮಂದಿರಕ್ಕೆ ಎಳೆ ತಂದಿದೆ. ಚಿತ್ರವು ಸರಿ ಸುಮಾರು 150 ಕೋಟಿ ರೂ ಗಳಿಸಿದ್ದು ನಿಮಾಪಕರ ಕೈಗೆ 90-100 ಕೋಟಿ ಬರಲಿದೆ, ಒಟಿಟಿಯಲ್ಲಿಯೂ ಓಡುವ ನಿರೀಕ್ಷೆ ಇದೆ. ಚಾರ್ಲಿ ಯಶಸ್ಸಿನ 5% (4-5ಕೋಟಿ ರೂ) ಭಾಗವು ಚಾರ್ಲಿಗೆ ಸಲ್ಲಬೇಕಾಗಿದ್ದು, ಅವಳಿಗೆ ಅದರ ಅರಿವಿಲ್ಲವಾದ್ದರಿಂದ ಆ ಹಣವನ್ನು ಒಂದೋ ನೇರವಾಗಿ, ಇಲ್ಲ ಅವಳ ಹೆಸರಿನಲ್ಲಿ ಬ್ಯಾಂಕಿನಲ್ಲಿಟ್ಟು ಅದರ ಬಡ್ಡಿಯಿಂದ ದೇಶಾದ್ಯಂತ ಭಾರತೀಯ ತಳಿಗಳನ್ನು ದತ್ತು ತೆಗೆದುಕೊಳ್ಳುವ ಅಥವಾ ರಕ್ಷಿಸುವ ಎನ್.ಜಿ.ಒಗಳಿಗೆ ನೀಡುವ ನಿರ್ಧಾರವನ್ನು ಚಿತ್ರ ತಂಡ ಮಾಡಿದೆ. ಇನ್ನು 10% (7-10 ಕೋಟಿ ರೂ) ಲಾಭವನ್ನು ಚಾರ್ಲಿಗಾಗಿ ದುಡಿದ, ಅದರಲ್ಲಿ ತನ್ನನ್ನು(ನಿರ್ಮಾಪಕ) ಹೊರತುಪಡಿಸಿ ಎಲ್ಲಾ ತಂತ್ರಜ್ಞರಿಗೆ ನೀಡಲಾಗುವುದು. ಚಿತ್ರವು 50 ದಿನಗಳು ಓಡುವ ಭರವಸೆ ಇದ್ದು, ಪೂರೈಸಿದಲ್ಲಿ ಸಕ್ಸಸ್ ಪಾರ್ಟಿ ಇಟ್ಟುಕೊಳ್ಳಲಾಗುವುದು ಎಂದು ಏಷಿಯಾ ನೆಟ್ ಸುವರ್ಣ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.