ಕೊಲ್ಲೂರು: ಇಲ್ಲಿನ ಇತಿಹಾಸ ಪ್ರಸಿದ್ದ ಮೂಕಾಂಬಿಕಾ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಮೇ 9 ರಂದು ಶ್ರೀ ಮನ್ಮಹಾರಥೋತ್ಸವವು ಮೂಕಾಂಬಿಕೆಯ ಸನ್ನಿಧಿಯಲ್ಲಿ ನಡೆಯಿತು.
ಅಪರಾಹ್ನ 12:15 ರ ಸುಮಾರಿಗೆ ರಥಾರೋಹಣಕ್ಕೆ ಚಾಲನೆ ನೀಡಲಾಗಿದ್ದು, ಮಹಾದ್ವಾರದ ಮುಂಬಾಗಿಲಿನಿಂದ ಹೊರಟ ರಥವು ಸಂಜೆ 5:30 ಕ್ಕೆ ಮೆರವಣಿಗೆ ಮೂಲಕ ಓಲಗ ಮಂಟಪ ತಲುಪಿತು. ಮೆರವಣಿಗೆಯ ದಾರಿಯುದ್ದಕ್ಕೂ ವಿವಿಧ ರೀತಿಯ ಕಲಾ ತಂಡಗಳೂ ಪಾಲ್ಗೊಂಡವು.
ತಂತ್ರಿಗಳಾದ ಡಾ. ಕೆ. ಎನ್. ನಿತ್ಯಾನಂದ ಅಡಿಗರ ನೇತೃತ್ವದಲ್ಲಿ ನಡೆದಂತಹ ಅಷ್ಟಬಂಧ ಬ್ರಹ್ಮಕಲಶೋತ್ಸವದ ಬ್ರಹ್ಮರಥದ ವಿಧಿವಿಧಾನ ನಡೆಯಿತು. ಬೆಳಗ್ಗೆ ಅಧಿವಾಸಹೋಮ, ರಥಶುದ್ಧಿ ಹೋಮ, ಮಹಾಪೂಜೆ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವವೂ ನಡೆಯಿತು.ಅಪಾರ ಭಕ್ತರ ಸಮ್ಮುಖದಲ್ಲಿ ರಥೋತ್ಸವದ ಸಂಭ್ರಮ ಜರುಗಿದ್ದು, ಬ್ರಹ್ಮಕಲಶೋತ್ಸವದ ಸಲುವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಗಳು ಮೇ 11 ನೇ ತಾರೀಕಿನಂದು ಪೂರ್ಣಕುಂಭಾಶಭಿಷೇಕ ಹಾಗೂ ಆಶೀರ್ವಚನದೊಂದಿಗೆ ಪೂರ್ಣಗೊಳ್ಳಲಿದೆ. ಕರ್ನಾಟಕ ಸಹಿತ ವಿವಿಧ ರಾಜ್ಯಗಳಿಂದ ಆಗಮಿಸಿದಂತಹ ಸಹಸ್ರಾರು ಭಕ್ತರು ಮೂಕಾಂಬಿಕೆಗೆ ಪ್ರಾರ್ಥನೆ ಸಲ್ಲಿಸಿ ತೇರು ಎಳೆಯುವ ದೃಶ್ಯಗಳು ಕಂಡು ಬಂತು.
ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಸ್.ಸಿ ಕೋಟಾರಗಸ್ತಿ, ಡಾ. ಅತುಲ್ ಕುಮಾರ್ ಶೆಟ್ಟಿ, ಜಯಾನಂದ ಹೋಬಳಿದಾರ, ಗಣೇಶ ಕಿಣಿ ಬೆಳ್ವೆ, ಸಂಧ್ಯಾ ರಮೇಶ್, ಗೋಪಾಲ ಕೃಷ್ಣ ನಾಡ, ಶೇಖರ್ ಪೂಜಾರಿ, ರತ್ಯಾ ಆರ್. ಕುಂದರ್, ಗೋವಿಂದ ನಾಯ್ಕ ಮತ್ತು ರಥಶಿಲ್ಪಿಗಳಾದ ಲಕ್ಷ್ಮೀನಾರಾಯಣ ಆಚಾರ್ಯ, ರಾಜಗೋಪಾಲ ಆಚಾರ್ಯ ಉಪಸ್ಥಿತರಿದ್ದರು.
ಅದಮಾರು ಮಠದ ಸ್ವಾಮೀಜಿ ಹಾಗೂ ಸಂಗೀತ ನಿರ್ದೇಶಕ ಇಳೆಯರಾಜ ದೇವಳಕ್ಕೆ ಭೇಟಿ ನೀಡಿದರು.