
ಪತ್ರಿಕೆಗೆ ಕಳುಹಿಸಿದ ವರದಿಯೊಂದು ಪ್ರಕಟವಾಗಿದೆಯೇ ಎಂದು ಆ ಪತ್ರಿಕೆಯ ವರದಿಗಾರರನ್ನು ಕೇಳಿದರೆ ಅವರಿಗೆ ಸಂತೋಷವೇನೂ ಆಗಲಿಕ್ಕಿಲ್ಲ. “ಬಂದಿರಬಹುದು, ನೋಡಿ” ಎನ್ನಬಹುದು ಅವರು. ಏಕೆಂದರೆ ತಮ್ಮ ಪತ್ರಿಕೆಯನ್ನು ಎಲ್ಲರೂ ಖರೀದಿಸಿ ಓದುತ್ತಾರೆ ಅಥವಾ ಓದಲಿ ಎಂಬ ನಿರೀಕ್ಷೆಯಲ್ಲಿ ಅವರಿರುತ್ತಾರೆ.
ಬೇಕಾದರೆ ಕೊಂಡುಕೊಂಡು ಓದಲಿ ಎನ್ನುವುದು ಪತ್ರಿಕಾ ಕಚೇರಿಯ ಧೋರಣೆ. ಏಕೆಂದರೆ ಪತ್ರಿಕೆ ಇರುವುದು ಖರೀದಿಸಿ ಓದುವುದಕ್ಕಾಗಿಯೇ! ಉತ್ಪಾದನಾ ವೆಚ್ಚಕ್ಕಿಂತ ಹಲವು ಪಟ್ಟು ಕಡಿಮೆ ದರಕ್ಕೆ ಸಿಗುವ ಉತ್ಪನ್ನವೊಂದಿದ್ದರೆ ಅದು ಪತ್ರಿಕೆ. ಬಂದಿರಬಹುದು ನೋಡಿ ಎಂದರೆ ಖರೀದಿಸಿ ನೋಡಿ ಎಂದರ್ಥ.
ಪತ್ರಿಕೆ ಓದುವುದೂ ಒಂದು ಕೌಶಲ. ತಾನು ಕಳುಹಿಸಿದ ಸುದ್ದಿ ಬಂದಿದೆಯೇ ಎಂಬ ಕುತೂಹಲದಿಂದ ಅಪರೂಪಕ್ಕೆ ಒಂದು ದಿನ ಪತ್ರಿಕೆ ಓದಲು ಹೋದರೆ ಹುಡುಕಾಟದ ಭರದಲ್ಲಿ ಸುದ್ದಿ ಪ್ರಕಟವಾಗಿದ್ದರೂ ಅಕ್ಷರಗಳ ರಾಶಿಯಲ್ಲಿ ಅದು ಕಣ್ಣಿಗೆ ಕಾಣದೇ ಹೋಗಬಹುದು! ಯಾವ ಪತ್ರಿಕೆಯಲ್ಲಿ ಯಾವ ವಿಧದ ಸುದ್ದಿ ಯಾವ ಆವೃತ್ತಿಯಲ್ಲಿ ಬರುತ್ತದೆ ಅಥವಾ ಬರಬಹುದು, ಯಾವ ರೀತಿ ಬರಬಹುದು ಎಂಬ ಅಂದಾಜು ಆಯಾ ಪತ್ರಿಕೆಗಳ ನೈಜ ಓದುಗರಿಗೆ ಇರಬಲ್ಲದು. ಎಂದೋ ಒಮ್ಮೆ ಪತ್ರಿಕೆ ಪುಟ ತಿರುವಿ ಹಾಕುವವರು ಓದುಗರು ಎನಿಸಿಕೊಳ್ಳಲಾರರು.
ಸುದ್ದಿಯೊಂದು ಪ್ರಕಟವಾಗಿದ್ದರೂ ಕಾಣದೆ ಹೋಗುವ ಪ್ರಸಂಗಗಳು ಕೇವಲ ಓದುಗರಿಗಷ್ಟೇ ಅಲ್ಲ, ಪತ್ರಿಕಾ ವರದಿಗಾರರಿಗೂ ಅನುಭವಕ್ಕೆ ಬಂದಿರಬಹುದು. ಸುದ್ದಿಯನ್ನು ಅವರು ಕಳುಹಿಸಿದಾಗ ಇದ್ದ ಅದರ ಮೂಲ ರೂಪವನ್ನೇ ಮನಸ್ಸಿನಲ್ಲಿಟ್ಟುಕೊಂಡು ಪತ್ರಿಕೆಯಲ್ಲಿ ಕಣ್ಣಾಡಿಸಿದಾಗ ಈ ಪರಿಯ ಅನುಭವವಾಗುವುದಿದೆ.
ಸುದ್ದಿಯು ವರದಿಗಾರರಿಂದ ಸುದ್ದಿಮನೆ ತಲುಪಿದ ಬಳಿಕ ಉಪ ಸಂಪಾದಕರ ಕೈಯಲ್ಲಿ ಪರಿಷ್ಕರಿಸಲ್ಪಟ್ಟು ಚಂದವಾಗಿ ಪುಟದಲ್ಲಿ ಕೂರಿಸಲ್ಪಡುತ್ತದೆ. ಆಗ ಅದರ ಸ್ವರೂಪ ಭಿನ್ನವಾಗಿರುತ್ತದೆ. ಹಾಗಾಗಿ ಅವಸರಕ್ಕೆ ಪತ್ರಿಕೆ ಪುಟ ತಿರುವಿ ಹಾಕಿ, ಪ್ರಕಟವಾಗಿದ್ದ ಸುದ್ದಿಯನ್ನು ಗಮನಿಸದೆ ಸುದ್ದಿ ಪ್ರಕಟವಾಗಿಲ್ಲ ಎಂದು ಕಚೇರಿಗೆ ಫೋನ್ ಮಾಡಿ ಹೇಳುವ ವರದಿಗಾರರು ಉಪ ಸಂಪಾದಕರ ಕೈಯಲ್ಲಿ “ಕಣ್ಣು ಕಾಣಿಸುವುದಿಲ್ಲವೇ? ಮೊದಲು ಸರಿಯಾಗಿ ಪೇಪರ್ ಓದಿ” ಎಂದು ಬಯ್ಯಿಸಿಕೊಳ್ಳಲೂಬಹುದು.
ತಮ್ಮ ಸುದ್ದಿಗಳೆಲ್ಲ ಪ್ರಮುಖ ಪುಟದಲ್ಲಿ ಉನ್ನತ ಜಾಗದಲ್ಲಿ ಇರಬೇಕು ಎಂಬ ನಿರೀಕ್ಷೆ ಓದುಗರಿಗೆ ಅಥವಾ ವರದಿಗಾರರಿಗೆ ಇರಬಹುದು. ಆದರೆ ಸುದ್ದಿಮನೆಯ ಪತ್ರಕರ್ತರಿಗೆ ಎಲ್ಲ ಪುಟಗಳೂ ಮುಖ್ಯ ಮತ್ತು ಎಲ್ಲ ಜಾಗವೂ ಅಮೂಲ್ಯ. ತಮಗೂ ಪುಟ ನಿರ್ವಹಣೆಗೆ ನೀತಿ- ನಿಯಮ, ಚೌಕಟ್ಟುಗಳಿವೆ ಎಂಬುದನ್ನು ಓದುಗರು ಮತ್ತು ವರದಿಗಾರರು ಅರ್ಥಮಾಡಿಕೊಳ್ಳಬೇಕು ಎಂಬುದು ಅವರ ನಿರೀಕ್ಷೆ.

ಈ ನಡುವೆ, ಪ್ರಸ್ತುತ ಬಹುತೇಕರು ಆನ್ಲೈನ್ ಸುದ್ದಿಗಳನ್ನು ಹೆಚ್ಚು ಓದುತ್ತಾರೆ. ಇ-ಪೇಪರ್ ಚಂದಾದಾರರಾಗುತ್ತಾರೆ. ಇಲ್ಲವೇ ಉಚಿತವಾಗಿ ಸಿಗುವ ವೆಬ್ಸೈಟ್ ನೋಡುತ್ತಾರೆ. ನ್ಯೂಸ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಅಥವಾ ಸುದ್ದಿಗಳನ್ನು ಓದುವುದೇ ಇಲ್ಲ. ನಿರೀಕ್ಷೆಗಳು ಬದಲಾಗಿವೆ. ಸುದ್ದಿ, ಮಾಹಿತಿಗಿಂತಲೂ ಮನೋರಂಜನೆ ನೀಡುವ ಸುದ್ದಿಗಳು ಅಥವಾ ಮಾಹಿತಿ ಮತ್ತು ಮನೋರಂಜನೆ ಎರಡೂ ಇರುವ (ಇನ್ಫೋಟೇನ್ಮೆಂಟ್) ಸುದ್ದಿಗಳು ಹೆಚ್ಚು ಓಡುತ್ತಿವೆ.
ಓದುಗರಿಗೆ ನಾಳೆಯವರೆಗೆ ಕಾದು ಪತ್ರಿಕೆ ಖರೀದಿಸಿ ಓದಲು ಆಸಕ್ತಿಯಿಲ್ಲ. ಒಂದೊಮ್ಮೆ ತಾವು ಯಾವುದೋ ಸುದ್ದಿ ಕೊಟ್ಟರೆ ಯಥಾವತ್ತಾಗಿ ಕೂಡಲೇ ಪ್ರಕಟಿಸಿ ವಾಟ್ಸಾಪ್ ನಲ್ಲಿ ಲಿಂಕ್ ಶೇರ್ ಮಾಡುವ ಸ್ಥಳೀಯ ನ್ಯೂಸ್ ವೆಬ್ಸೈಟ್ ಗಳು ಪ್ರಿಯವೆನಿಸುತ್ತವೆ. ಸಂತೋಷ ನೀಡುವ ಸೋಶಲ್ ಮೀಡಿಯಾದ ರುಚಿ ಹಿಡಿದಿದೆ; ಇದರ ಮುಂದೆ ಎಲ್ಲವೂ ಸಪ್ಪೆ ಎನಿಸುತ್ತಿದೆ.
ಈ ಮಧ್ಯೆ ಓದುಗರು ಗಮನಿಸಬೇಕಾದ ಸಂಗತಿ ಕೆಲವಿವೆ. ಸುದ್ದಿಗಳನ್ನು ಕೊಡುವ ಡಿಜಿಟಲ್ ಪ್ಲಾಟ್ಫಾರ್ಮ್ ಗಳು ಪ್ರತಿಯೊಂದು ಸುದ್ದಿಯನ್ನೂ ಹೊಚ್ಚ ಹೊಸತಾಗಿಯೇ ಕೊಡುತ್ತಿರುವುದೇನಲ್ಲ. ಸೂಕ್ಷ್ಮವಾಗಿ ಗಮನಿಸಿದರೆ ಡಿಜಿಟಲ್ ಸುದ್ದಿ ವೇದಿಕೆಗಳು ಇಂದು ಒದಗಿಸುವವುಗಳಲ್ಲಿ ಹೆಚ್ಚಿನ ಸುದ್ದಿಗಳು ಇಂದು ಬೆಳಗ್ಗೆ ಪತ್ರಿಕೆಯಲ್ಲಿ ಪ್ರಕಟವಾಗಿರುವವೇ. ಕೆಲವೊಮ್ಮೆ ಅಂತಹ ಹಳಸಲು ಸುದ್ದಿಗಳು ಸಂಜೆ ವೇಳೆಗೆ (ಕೆಲವೊಮ್ಮೆ ಮರುದಿನವೂ) ಪಬ್ಲಿಷ್ ಆಗುವುದು, ವೈರಲ್ ಆಗುವುದೂ ಇದೆ.
ಬ್ರೇಕಿಂಗ್ ನ್ಯೂಸ್ ಗಳನ್ನು ಟಿವಿ, ವೆಬ್ಸೈಟ್ ಗಳು ಸಮರ್ಥವಾಗಿ ಒದಗಿಸುತ್ತವೆ. ನ್ಯೂಸ್ ಆ್ಯಪ್ ಗಳು ಅಂಗೈಯಲ್ಲಿ ಹೊಸ ಹೊಸ ಅಪ್ಡೇಟ್ ಕೊಡುತ್ತವೆ. ಆದರೆ, ಪತ್ರಿಕಾ ವರದಿಗಳು ಸಮಗ್ರ ಮಾಹಿತಿ ಹೊಂದಿರುತ್ತವೆ. ಪ್ರಚಲಿತ ವಿದ್ಯಮಾನಗಳಿಗಾಗಿ ಟಿವಿ ಮುಂದೆ ಇಡೀ ದಿನ ಕುಳಿತರೂ ಸಿಗದ ಮಾಹಿತಿ, ಜ್ಞಾನ ಪತ್ರಿಕೆ ಓದಿನಿಂದ ಲಭಿಸುತ್ತದೆ ಎಂಬುದು ಪತ್ರಿಕೆ ಓದುಗರ ಅಂಬೋಣ. ಟಿವಿಗೆ ಸುದ್ದಿ ಸಂಗ್ರಹಕ್ಕೆ ಪ್ರಬಲ ಜಾಲವಿದ್ದರೂ, ಸುದ್ದಿ ಸಂಗ್ರಹಿಸಿ ಬಿತ್ತರಿಸುವ ಸಾಮರ್ಥ್ಯ, ಸೌಲಭ್ಯವಿದ್ದರೂ ಅವು ಹೆಚ್ಚು ಸಮಯದಲ್ಲಿ ಸೀಮಿತ ಮಾಹಿತಿಯನ್ನು ನೀಡುತ್ತವೆ. ಇನ್ನು ಕೆಲವು ಖ್ಯಾತ ವೆಬ್ಸೈಟ್, ನ್ಯೂಸ್ ಆ್ಯಪ್ ಗಳೂ ಪ್ರಬಲ ಸುದ್ದಿಜಾಲವಿಲ್ಲದೆ ಸುದ್ದಿಗಾಗಿ ಇತರ ಮೂಲಗಳನ್ನು ಅವಲಂಬಿಸಿರಬಹುದು.
ಪತ್ರಿಕೆಗಳು ಗಮನಿಸಬೇಕಾದ ಸಂಗತಿಗಳು ಕೆಲವಿವೆ. ‘ಬೇಕಾದರೆ ಓದಲಿ’ ಎಂಬ ಧೋರಣೆಯನ್ನು ತುಸು ಮಾರ್ಪಾಡುಗೊಳಿಸುವ ಅಗತ್ಯವಿದೆ. ಈಗೀಗ ಬದಲಾವಣೆಗಳು ಕಂಡುಬರುತ್ತಿವೆ. “ನಮ್ಮ ಉತ್ಪನ್ನವನ್ನೇ ಖರೀದಿಸಲಿ” ಎಂಬಲ್ಲಿಗೆ ಬದಲಾಗಿದೆ. ಅದಕ್ಕಾಗಿ ಟಿವಿ ಸುದ್ದಿ ಶೀರ್ಷಿಕೆ ಮಾದರಿ ಅನುಸರಿಸುವ ಕ್ರಮ ಇತ್ಯಾದಿ ಆರಂಭವಾಗಿದೆ. ಇನ್ನು ಕೆಲವು ಪತ್ರಿಕೆಗಳು ಎಲ್ಲ ವಿಷಯ, ಸಂಗತಿಗಳನ್ನು ಒದಗಿಸಲು ಪ್ರಯತ್ನಿಸಿದರೆ, ಕೆಲವು ಪತ್ರಿಕೆಗಳು ಸೀಮಿತ ವಿಷಯಗಳನ್ನು ನೀಡಲು ಶಕ್ತವಾಗುತ್ತವೆ. ಆದರೂ ಪತ್ರಿಕೆಗಳು ಹೊಸ ಓದುಗರನ್ನು ಸಂಪಾದಿಸುತ್ತಿರುವಂತೆ ಕಾಣುತ್ತಿಲ್ಲ.
ಪತ್ರಿಕೆಗಳು ವೆಬ್ಸೈಟ್ ಆರಂಭಿಸಿದರೂ ಆನ್ಲೈನ್ ಆವೃತ್ತಿಗೂ ಸಂಪಾದಕೀಯ ಬಳಗಕ್ಕೂ ಸಂಬಂಧವೇ ಇಲ್ಲವೇನೋ ಎಂದು ಭಾಸವಾಗುವ ಕೆಲವು ಸನ್ನಿವೇಶಗಳಿವೆ. ಪತ್ರಿಕೆಯಲ್ಲಿ ಇದ್ದಷ್ಟು ಸ್ವಚ್ಛವಾಗಿ ಅದೇ ಸುದ್ದಿ ಅದರ ಆನ್ಲೈನ್ ಆವೃತ್ತಿಯಲ್ಲಿ (ವೆಬ್ಸೈಟ್) ಇರುವುದು ಕಡಿಮೆ. ಪತ್ರಿಕೆಯಲ್ಲಿದ್ದಷ್ಟು ಗುಣಮಟ್ಟ ಅಲ್ಲಿ ಕಾಣುವುದಿಲ್ಲ.
ಹಾಗೆಂದು ಕನ್ನಡ ಪತ್ರಿಕೆಗಳಲ್ಲಿ ಎಲ್ಲವೂ ಸ್ವಚ್ಛವಾಗಿದೆ ಎನ್ನುವ ಹಾಗಿಲ್ಲ. ಕೊರೊನಾ ನಂತರ ಪತ್ರಿಕೆಗಳಲ್ಲಿ ಪ್ರೂಫ್ ರೀಡಿಂಗ್ ವಿಭಾಗವೇ ಕಣ್ಮರೆಯಾಗಿರುವಂತಿದೆ. ತಪ್ಪುಗಳು ಎದ್ದು ಕಾಣುತ್ತಿವೆ. ಹಿರಿಯರು ನಿರ್ವಹಿಸುವ ಮುಖ್ಯ ಆವೃತ್ತಿಗಳಲ್ಲೂ ಅಧ್ವಾನಗಳಾಗುತ್ತಿವೆ. ಕೆಲವೇ ವರ್ಷಗಳ ಅಂತರದಲ್ಲಿ “ಈ ಪತ್ರಿಕೆಯಲ್ಲಿ ಹಿಂದೆ ಹೀಗಾಗುತ್ತಿರಲಿಲ್ಲ” ಎಂಬುದಾಗಿ ‘ಓದುಗರು’ ಗುರುತಿಸುವ ಸನ್ನಿವೇಶಗಳು ಕಂಡುಬರುತ್ತಿವೆ. ಸುದ್ದಿಗಳನ್ನು ಎಡಿಟ್ ಮಾಡುವುದಕ್ಕೂ ಸ್ಕೋಪ್ ಕಡಿಮೆಯಾಗಿರುವಂತಿದೆ.
ಇನ್ನೊಂದು ಪ್ರಮುಖ ವಿಚಾರವೆಂದರೆ ಪತ್ರಿಕೆಯ ಭಾಷೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಸರಳ ಪದಗಳಲ್ಲಿ, ಕಡಿಮೆ ಪದಗಳಲ್ಲಿ ನೇರವಾಗಿ ವಿಚಾರಗಳನ್ನು ಬರೆಯಬೇಕು ಎಂಬುದು ಪತ್ರಕರ್ತರಿಗೆ ಹೇಳಿ ಕೊಡುವ ಪಾಠ. ಆದರೆ, ಪತ್ರಿಕೆಗಳ ಭಾಷೆಯು ಇಷ್ಟು ವರ್ಷಗಳಲ್ಲಿ ಜನಸಾಮಾನ್ಯರಿಗೆ ಎಷ್ಟರ ಮಟ್ಟಿಗೆ ಅರ್ಥವಾಗಿದೆ ಎಂಬುದು ಸಮೀಕ್ಷೆ ಮಾಡಬಹುದಾದ ವಿಷಯ. ಸರಳವಾಗಿರಬೇಕು, ಕಡಿಮೆ ಪದ ಇರಬೇಕು ಎಂದಾಗ ವಾಕ್ಯಗಳಲ್ಲಿ ಅಲ್ಪವಿರಾಮ, ಅರ್ಧವಿರಾಮದಂತಹ ಲೇಖನ ಚಿಹ್ನೆಗಳಿಗೆ ಪ್ರಾಮುಖ್ಯ ಬರುತ್ತದೆ.
ಕೆಲವೊಮ್ಮೆ ವ್ಯಾಕರಣವನ್ನು ತುಸು ಬದಿಗಿರಿಸಬೇಕಾಗುತ್ತದೆ. ಈ ಎಲ್ಲ ಸಂಗತಿಗಳನ್ನು ಸಾಮಾನ್ಯ ಓದುಗರು ಎಷ್ಟರ ಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ, ಸಾಹಿತ್ಯಕ್ಕೂ ಪತ್ರಿಕಾ ಸಾಹಿತ್ಯಕ್ಕೂ ಇರುವ ವ್ಯತ್ಯಾಸವನ್ನು ಓದುಗರು, ಹೊಸ ಕಾಲದ ಓದುಗರು, ಬೋಧಕ ವರ್ಗ, ವಿದ್ಯಾರ್ಥಿಗಳು ಹೇಗೆ ಅರ್ಥ ಮಾಡಿಕೊಂಡಿದ್ದಾರೆ ಎನ್ನುವುದು ಜಿಜ್ಞಾಸೆ. ಜಾಗ ಉಳಿಸುವುದಕ್ಕೆ ವಿಭಕ್ತಿ ಪ್ರತ್ಯಯಗಳನ್ನು ಬಿಟ್ಟರೂ ಸರಿಯಾಗಿ ಎಡಿಟ್ ಮಾಡದೆ, ಕೊನೆಯಲ್ಲಿ ಒಂದು ಸಾಲು ಎರಡು ಸಾಲು ಕಡಿಮೆ ಬಂತೆಂದು ಸಿಕ್ಕ ಸಿಕ್ಕಲ್ಲಿ ಎಂಟರ್ ಹೊಡೆದು, ಜಾಳು ಜಾಳಾಗಿ ಪುಟ ವಿನ್ಯಾಸ ಮಾಡಿದರೆ ಏನು ಲಾಭ? ಟಿವಿ, ವೆಬ್ ಸೈಟ್ ಗಳಿಗೂ ಭಾಷೆ ಬಳಕೆ ವಿಷಯದಲ್ಲಿ ಕಾಳಜಿ ಅಗತ್ಯ.
ಮಾಹಿತಿ, ಶಿಕ್ಷಣ ಮತ್ತು ಮನೋರಂಜನೆ ಪತ್ರಿಕೋದ್ಯಮದ ಮೂಲ ಮುಖ್ಯ ಕಾರ್ಯಗಳಾದರೂ ಪ್ರಸ್ತುತ ಮನೋರಂಜನೆಯೇ ಪ್ರಧಾನವಾಗುತ್ತಿರುವ ವಿಲಕ್ಷಣ ಸನ್ನಿವೇಶದಲ್ಲಿ ಪತ್ರಿಕೆಗಳು ಶಿಕ್ಷಣ ಕ್ಷೇತ್ರದಲ್ಲಿ ಅಸ್ತಿತ್ವವನ್ನು ಬಲಪಡಿಸುವ ಅಗತ್ಯವಿದೆ. ಹಳೆಯ ಓದುಗರನ್ನು ಉಳಿಸಿಕೊಳ್ಳುತ್ತಲೂ ಹೊಸ ಓದುಗರನ್ನು ಗಳಿಸಿಕೊಳ್ಳುವ ಅನಿವಾರ್ಯತೆಯಿದೆ. ಶಿಕ್ಷಣ ಸಂಸ್ಥೆಗಳು ಇದಕ್ಕೆ ಉತ್ತಮ ವೇದಿಕೆಯಾಗಬಹುದು.
ಎಲ್ಲ ವಿಧದ ಮಾಧ್ಯಮಗಳೂ ತಮ್ಮದೇ ಆದ ಪ್ರಾಮುಖ್ಯ ಹೊಂದಿವೆ. ತಾನೇ ಶ್ರೇಷ್ಠ ಅಥವಾ ಈ ಮಾಧ್ಯಮವೇ ಶ್ರೇಷ್ಠ ಎಂಬ ಭಾವನೆಯಿಂದ ಪ್ರಯೋಜನವಿಲ್ಲ. ಆದರೆ ಮಾಧ್ಯಮಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ತಂತ್ರಜ್ಞಾನದ ಅಳವಡಿಕೆ ಹೆಚ್ಚಾಗಿದೆ, ಓದುವ ಬರೆಯುವ ಹವ್ಯಾಸ ಕಡಿಮೆಯಾಗಿದೆ, ತಾಳ್ಮೆ ಕಡಿಮೆಯಾಗಿದೆ, ಭಾಷಾ ಜ್ಞಾನ ಕ್ಷೀಣಿಸುತ್ತಿದೆ. ಬಹುಶಃ ಈ ಸಂದರ್ಭದಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಕ್ರಾಂತಿಯ ಅಗತ್ಯವಿದೆ. ಮಾಧ್ಯಮ, ಓದುಗರು ಹಾಗೂ ಪಂಡಿತ ವರ್ಗ (ಭಾಷೆ, ತಂತ್ರಜ್ಞಾನ, ಶಿಕ್ಷಣ ಇತ್ಯಾದಿ)ದವರ ಕೂಡುವಿಕೆಯಲ್ಲಿ ವಿಚಾರ ಮಂಥನವಾಗಿ ಹೊಸ ದಾರಿ ಕಂಡುಕೊಳ್ಳಬಹುದಾಗಿದೆ.
ಮಾಧ್ಯಮಗಳು ಪರಸ್ಪರ ಒಂದನ್ನೊಂದು ಅರ್ಥ ಮಾಡಿಕೊಳ್ಳಬೇಕು. ಮಾಧ್ಯಮಗಳು ಮೊದಲಿಗೆ ತಮ್ಮೊಳಗೆ ಸುಧಾರಣೆ ತಂದುಕೊಂಡು, ಬಳಿಕ ಜನಸಾಮಾನ್ಯರನ್ನು ತಲುಪಬೇಕಿದೆ. ಅದರ ಜೊತೆಜೊತೆಗೆ ಶಿಕ್ಷಣ ರಂಗದಲ್ಲೂ (ಭಾಷೆ) ಸುಧಾರಣೆ ಅಗತ್ಯವಿದೆ. ಭಾಷೆ ಅರ್ಥವಾದಾಗ ಮಾಧ್ಯಮ ಭಾಷೆ ಅರ್ಥವಾಗಬಹುದು. ಆ ಬಳಿಕ ಮಾಧ್ಯಮಗಳು ಹೆಚ್ಚು ಜನರನ್ನು ತಲುಪಲು ಯೋಗ್ಯ ದಾರಿಯನ್ನು ಕಂಡುಕೊಳ್ಳಬೇಕು.
1843ರಲ್ಲಿ ಹರ್ಮನ್ ಮೊಗ್ಲಿಂಗ್ ಕನ್ನಡ ಪತ್ರಿಕೆ (ಮಂಗಳೂರ ಸಮಾಚಾರ) ಆರಂಭಿಸಿದಾಗ ಅದೊಂದು ಕ್ರಾಂತಿಯಾಗಿತ್ತು; ಈಗ ದೂರದರ್ಶನವಿದೆ, ನವ ಮಾಧ್ಯಮಗಳಿವೆ. ಸಾಮಾನ್ಯ ಪತ್ರಿಕಾ ವರದಿಗಳಿಗೆ ಒಂದು ಸಾಮಾನ್ಯ ಫಾರ್ಮುಲಾ ಇದೆ. ಈಗ ಅದರಲ್ಲಿ ‘ಕಾರ್ಯಕ್ರಮ ಯಾವತ್ತು ನಡೆಯಿತು’ ಎಂಬ ಅಂಶವನ್ನು ಬಿಟ್ಟುಬಿಡುವುದು ಸಾಮಾನ್ಯವಾಗಿದೆ. ಕೆಲವು ಮುಖ್ಯ ಆವೃತ್ತಿ, ಉಪ ಆವೃತ್ತಿಗಳ (ಲೋಕಲ್) ಸುದ್ದಿಗಳ ಪ್ರಸ್ತುತಿ (ಫಾರ್ಮ್ಯಾಟ್)ಯಲ್ಲಿ ಭಿನ್ನತೆ ಕಾಣಿಸುವುದಿದೆ (ಭಾಷಣ ಒಂದು ಪ್ಯಾರಾ ಮಾತ್ರ). ಈ ರೀತಿಯ ಬದಲಾವಣೆಗಳು ಕಾಲಕಾಲಕ್ಕೆ ನಡೆದಿರಬಹುದು.
ಈಗ ಹೊಸ ಕ್ರಾಂತಿಯಾಗಿ ಹೊಸ ರೂಪದಲ್ಲಿ ಪತ್ರಿಕೆಗಳು ಮೂಡಿ ಬರಲು ಸಾಧ್ಯವಿದೆ. ಹೊಸ ಫಾರ್ಮ್ಯಾಟ್ ನಲ್ಲಿ ಸುದ್ದಿ ಪ್ರಸ್ತುತಿ, ತಂತ್ರಜ್ಞಾನದ ಲೇಪನ, ಸಹ ಮಾಧ್ಯಮಗಳ ಸಮ್ಮಿಳಿತ, ಸಾಹಿತ್ಯ, ಶಿಕ್ಷಣದ ಮಿಶ್ರಣದೊಂದಿಗೆ ಆ ಆವೃತ್ತಿಯನ್ನು ನಿರೀಕ್ಷಿಸಬಹುದೇನೋ. ಟಿವಿ ಮಾಧ್ಯಮಗಳೂ ತಮ್ಮ ಸುದ್ದಿ ಪ್ರಸ್ತುತಿಯಲ್ಲಿ ಮಾರ್ಪಾಡು ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಈ ಎಲ್ಲ ಬದಲಾವಣೆ, ಕ್ರಾಂತಿ ಹೇಗೆ ಮತ್ತು ಎಂದು ಸಾಧಿತವಾಗಬಹುದು ಎಂಬುದಕ್ಕೆ ಕಾಲವೇ ಉತ್ತರ ನೀಡಬಹುದಾಗಿದೆ.
-ಕುದ್ಯಾಡಿ ಸಂದೇಶ್ ಸಾಲ್ಯಾನ್












