ಪ್ರಾಚೀನ ಭತ್ತದ ತಳಿಗೆ ಜೀವ ನೀಡಿದ ಕೃಷಿಕ

ಆ ದಾರಿ ಹೊಕ್ಕರೆ ಎಲ್ಲೆಲ್ಲೂ ತೋಟಗಳ ನೆರಳು, ಆ ನೆರಳಲ್ಲೇ ಸಾಗಿದರೆ ಪಚ್ಚೆ ತೆನೆಯ ಗಾಳಿ ಮೈ ಸೋಕಿ ಮನಸ್ಸಲ್ಲಿ ಅರಳಿಸುವ ಅನುಭವ ವಿಶಿಷ್ಟ. ಒಂದೆಕರೆ ಜಾಗದಲ್ಲಿ ಹರಡಿ ತೊನೆದಾಡುವ ಆ ಗದ್ದೆಯ ತೆನೆಗಳನ್ನು ನೋಡುತ್ತ ನಿಂತರೆ ಮಣ್ಣಿನ ಫಲವತ್ತತೆ, ಮುಂದೆ ಅಕ್ಕಿಯಾಗುವ ಆ ಭತ್ತದ ಪರಿಮಳ ಈಗಲೇ ಮನಸ್ಸನ್ನು ಆವರಿಸಿಕೊಂಡುಬಿಡುತ್ತದೆ. ಪ್ರಾಚೀನ ಬತ್ತದ ತಳಿಯ ಮಹತ್ವ ಅರಿತವರು ಈ ಕಾಲದಲ್ಲಿ ಕಡಿಮೆಯಾದರೂ, ಪ್ರಾಚೀನ ತಳಿಯ ಮಹತ್ವ ಈ ಕಾಲದ ಮಂದಿಗೆ ಈಗೀಗ ಅರಿವಾಗುತ್ತಿರುವುದು ಸುಳ್ಳಲ್ಲ. ಆದರೆ ಪ್ರಾಚೀನ ತಳಿಯಿಂದ ವ್ಯವಹಾರಿಕವಾಗಿ ಅಂತದ್ದೇನೂ ಲಾಭವಾಗಲ್ಲ ಎನ್ನುವ ಕಾರಣಕ್ಕೆ ಈ ಕುರಿತು ಅಂತಹ ಆಸಕ್ತಿ ತಾಳುವವರು ಕಡಿಮೆ.

ಆದರೆ ಬೆಳ್ತಂಗಡಿ ತಾಲೂಕಿನ ಸುಲ್ಕೇರಿ ಗ್ರಾಮದ ಕೃಷಿಕ ಹಾಗೂ ಉಪನ್ಯಾಸಕರಾಗಿರುವ ಚಂದ್ರಕಾಂತ ಗೋರೆ ಅವರಿಗೆ ಹಾಗಲ್ಲ. ಇವರಿಗೆ ಪ್ರಾಚೀನ ಬತ್ತದ ತಳಿಯ ಕುರಿತು ವಿಶೇಷ ಆಸಕ್ತಿ, ತಮ್ಮ ಹಿರಿಯರ ಕಾಲದಿಂದಲೂ ಪ್ರಾಚೀನ ತಳಿಯ ಬತ್ತದ ಕೃಷಿಗೆ ಹೆಚ್ಚಿನ ಆದ್ಯತೆ ಸಿಗುತ್ತಿದ್ದುದರಿಂದ ಗೋರೆಯವರೂ ಈ ಆ ಕುರಿತು ಹೆಚ್ಚಿನ ಆಸಕ್ತಿ ವಹಿಸಿ ಇದೀಗ ಮಸೂರಿ ಬತ್ತದ ತಳಿ ಬೆಳೆಯುತ್ತಿದ್ದಾರೆ. ಸುಮಾರು ೧ ಎಕ್ರೆ ಇರುವ ಇವರ ಹೊಲದಲ್ಲಿ ವರ್ಷಂಪ್ರತಿ ೨೦ ಮುಡಿಯಷ್ಟು ಬತ್ತ ಸಿದ್ದವಾಗುತ್ತಿದೆ. ಮಸೂರಿ ಅನ್ನುವ ಪ್ರಾಚೀನ ತಳಿಯನ್ನು ಉಳಿಸಬೇಕು, ಬರೀ ವ್ಯವಹಾರಿಕ ಉದ್ದೇಶದಿಂದಷ್ಟೇ ಕೃಷಿ ಮಾಡಬಾರದು, ಆರೋಗ್ಯದ ಹಿತದೃಷ್ಟಿಯಿಂದಲೂ ಕೃಷಿ ಖುಷಿ ಕೊಡಬೇಕು ಎನ್ನುವ ಹುಮ್ಮಸ್ಸಿನಿಂದ ಗೋರೆಯವರು ಮಸೂರಿ ಬೆಳೆಯುತ್ತಿದ್ದಾರೆ. ಈ ಪ್ರಾಚೀನ ತಳಿಯ ಬತ್ತದಿಂದ ಆರೋಗ್ಯದ ಗುಟ್ಟನ್ನೂ, ಸುಖವನ್ನೂ ಕಂಡುಕೊಂಡಿದ್ದಾರೆ. ಉಳಿದಂತೆ ೧೦ ಎಕರೆಯಷ್ಟು ಅಡಿಕೆ, ತೆಂಗು ಬೆಳೆದು ಕೃಷಿಯಲ್ಲೇ ಖುಷಿ ಕಾಣುತ್ತಿದ್ದಾರೆ ಗೋರೆಯವರು. ಸಾಮಾನ್ಯ ತಳಿಗಳನ್ನು ಬೆಳೆಸುವ ರೀತಿಯಲ್ಲಿಯೇ ಈ ಪ್ರಾಚೀನ ತಳಿಯನ್ನು ಗೋರೆಯವರು ಶ್ರೀ ಪದ್ದತಿ ಅಡಿಯಲ್ಲಿ ನಾಟಿ ಮಾಡುತ್ತಾರೆ. ತೋಟ ಮತ್ತು ಗದ್ದೆಗೆ ಕೆಲಸದಾಳುಗಳ ಸಮಸ್ಯೆ ಇಲ್ಲದಿರುವುದರಿಂದ ನೇಜಿ ನೆಡುವ ಪ್ರಕ್ರಿಯೆಯಿಂದ ತೊಡಗಿ, ಅಕ್ಕಿ ಮೂಟೆ ಮಾಡುವವರೆಗೆ ಎಲ್ಲಾ ಕೆಲಸಗಳು ಇವರ ಕೃಷಿಭೂಮಿಯಲ್ಲಿ ಸಾಂಗವಾಗಿ ನೆರವೇರುತ್ತಿದೆ. ಪಕ್ಕದಲ್ಲೇ ನದಿ ಹರಿಯುತ್ತಿರುವುದರಿಂದ ನೀರಿನ ಸಮಸ್ಯೆಯೂ ಇವರಿಗೆ ಒಂದಷ್ಟೂ ಕಾಡುವುದಿಲ್ಲ. ತೋಟದಲ್ಲಿಯೇ ತೋಡಿದ ಕೆರೆಯಲ್ಲಿಯೂ ವರ್ಷಪೂರ್ತಿ ನೀರಿರುತ್ತದೆ. ಹಾಗಾಗಿ ಬೇಸಿಗೆಯಲ್ಲಿಯೂ ಇವರ ತೋಟ ತಂಪಾಗಿರುತ್ತದೆ.

ಅಂದ ಹಾಗೇ ಮಸೂರಿ ಅಕ್ಕಿಯ ಗುಣಗಳು ನಮ್ಮ ಆರೋಗ್ಯಕ್ಕೆ ಪೂರಕ. ಈ ಅಕ್ಕಿಯಿಂದ ಮಾಡಿದ ಪಾಯಸ, ಚಕ್ಕುಲಿ, ಕೋಡುಬಳೆಯ ಪರಿಮಳ ಆಹಾ ಎಂಥಾ ಅದ್ಭುತ ಎನ್ನುವುದು ಕೆಲವರಿಗಾದರೂ ಗೊತ್ತಿರಬಹುದು. ಪೇಟೆಯಲ್ಲಿ ಸಿಗುವ ಪಾಲಿಶ್ ಮಾಡಿದ ಅಕ್ಕಿಯಲ್ಲಿ ಆರೋಗ್ಯಕ್ಕೆ ಪೂರಕವೆನ್ನಿಸುವ ಗುಣಗಳು ಅಷ್ಟಾಗಿ ಇರುವುದಿಲ್ಲ. ಈ ಅಕ್ಕಿಯಿಂದ ಮಾಡುವ ಖಾದ್ಯಗಳಲ್ಲಿಯೂ ಹೇಳುವಷ್ಟೇನೂ ರುಚಿಯೂ ಇಲ್ಲಬಿಡಿ. ಆದರೆ ಮಸೂರಿ ಅಕ್ಕಿ ಹಾಗಲ್ಲ, ಇದರ ತಿಳಿ ಗಂಜಿ ಬಾಯಾರಿಕೆಗೂ ದೇಹಕ್ಕೂ ತಂಪು, ರಟ್ಟೆಗೆ ಗಟ್ಟಿತನ ಒದಗಿಸುತ್ತದೆ. ಈ ಅಕ್ಕಿ ಬಳಸಿ ಕೆಲವರ ಬೆನ್ನುನೋವು ವಾಸಿಯಾದ ಉದಾಹರಣೆ ಇದೆ ಎನ್ನುವುದನ್ನು ಗೋರೆಯವರು ಒತ್ತಿ ಹೇಳುತ್ತಾರೆ. ಮಸೂರಿ ಅಕ್ಕಿಯಲ್ಲೇ ಆರೋಗ್ಯದ ಗುಟ್ಟಿದೆ ಎನ್ನುವ ಗೋರೆಯವರ ಬಳಿ, ಇದಕ್ಕಾಗಿಯೇ ಒಂದಷ್ಟು ಅಕ್ಕಿ ಖರೀದಿಸಿ, ಮಸೂರಿ ಅಕ್ಕಿಯಿಂದಲೇ ದೇಹಕ್ಕೊಂದಿಷ್ಟು ಚೈತನ್ಯ ಸಿಗುತ್ತಿದೆ ಎಂದವರು ಇದ್ದಾರೆ.

ವ್ಯಾವಹಾರಿಕ ಉದ್ದೇಶದಿಂದ ಈ ತಳಿಯನ್ನು ಬೆಳೆಸುತ್ತಿಲ್ಲ, ನಮ್ಮ ಮನೆ ಬಳಕೆಗಷ್ಟೇ ಈ ಅಕ್ಕಿಯನ್ನು ಬಳಸುತ್ತೇವೆ, ಉಳಿದಂತೆ ನನ್ನ ಒಂದಷ್ಟು ಗೆಳೆಯರಿಗೆ ಕೊಟ್ಟುಬಿಡುತ್ತೇನೆ. ಈ ಅಕ್ಕಿಯಿಂದ ಮಾಡಿದ ಖಾದ್ಯಗಳ ರುಚಿ ಬಲ್ಲವರು ಮತ್ತೆಂದೂ ಇದನ್ನು ಬಿಡಲು ಒಪ್ಪುವುದಿಲ್ಲ. ಮಾರುಕಟ್ಟೆಯಲ್ಲಿ ಈ ಅಕ್ಕಿ ಸಿಗುವುದಿಲ್ಲ, ಆದರೆ ಮುಂದೆ ಇದಕ್ಕೂ ಮಾರುಕಟ್ಟೆ ಒದಗಬಹುದು, ಪ್ರಾಚೀನ ತಳಿಯನ್ನು ಉಳಿಸುವ ನಿಟ್ಟಿನಿಂದ ಮಸೂರಿ ಬತ್ತದ ತಳಿಯನ್ನು ನೆಚ್ಚಿಕೊಂಡಿದ್ದೇನೆ. ಇದರಲ್ಲಿ ಸಿಗುವ ಸತ್ವ ಬೇರೆ ಬತ್ತದ ತಳಿಗಳಲ್ಲಿ ಸಿಗುವುದಿಲ್ಲಎನ್ನುತ್ತಾರೆ ಚಂದ್ರಕಾಂತ ಗೋರೆ. ಪ್ರಾಚೀನ ಬತ್ತದ ತಳಿಗಳನ್ನು ಉಳಿಸಬೇಕು, ಅದರ ಮಹತ್ವವನ್ನು ಈ ಪೀಳಿಗೆಗೆ ದಾಟಿಸಬೇಕು ಎನ್ನುವ ಕಾಳಜಿಯಿರುವ ಗೋರೆಯವರ ಕೃಷಿ ಬದುಕು ಬೆಳೆಗಾರರಿಗೆ ಮಾದರಿ. ಇವರ ಸಂಪರ್ಕ :944964043