ಚಂಡೀಗಢ ವಿಮಾನ ನಿಲ್ದಾಣ ಇನ್ನು ಮುಂದೆ ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

ನವದೆಹಲಿ: ಭಾರತದ ಸ್ವಾತಂತ್ರ್ಯ ಹೋರಾಟದ ಮಹಾನ್ ಕ್ರಾಂತಿಕಾರಿಗಳಲ್ಲಿ ಒಬ್ಬರಾದ ಶಹೀದ್ ಭಗತ್ ಸಿಂಗ್ ಅವರ ಹೆಸರನ್ನು ಪಂಜಾಬ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಡಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರದಂದು ಘೋಷಿಸಿದ್ದು, ಭಗತ್ ಸಿಂಗ್ ಜನ್ಮದಿನವಾದ ಸೆಪ್ಟೆಂಬರ್ 28 ರಿಂದ ಚಂಡಿಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಶಹೀದ್-ಎ-ಆಜಮ್-ಭಗತ್ ಸಿಂಗ್ ಅವರ ಹೆಸರಿನಿಂದ ಕರೆಯಲ್ಪಡಲಿದೆ. ವಿತ್ತ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಶಹೀದ್ ಭಗತ್ ಸಿಂಗ್ ನಿಲ್ದಾಣದ ನಾಮಕರಣ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.

ಕಳೆದ ಏಳು ವರ್ಷಗಳಿಂದ ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಮಧ್ಯೆ ಹೆಸರಿನ ಬಗ್ಗೆ ಹಗ್ಗ ಜಗ್ಗಾಟ ನಡೆಯುತ್ತಿದ್ದು, ಎರಡೂ ಸರ್ಕಾರಗಳು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭಗತ್ ಸಿಂಗ್ ಹೆಸರಿಡುವ ಬಗ್ಗೆ ಒಮ್ಮತವನ್ನು ತಲುಪಿದ ಸುಮಾರು ಒಂದು ತಿಂಗಳ ಬಳಿಕ ಈ ಘೋಷಣೆ ಬಂದಿದೆ. ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಹರಿಯಾಣ ಉಪಮುಖ್ಯಮಂತ್ರಿ ದುಶ್ಯಂತ್ ಚೌಟಾಲಾ ಅವರು ಆಗಸ್ಟ್‌ನಲ್ಲಿ ಈ ವಿಷಯದ ಕುರಿತು ಸಭೆ ನಡೆಸಿದ ನಂತರ ಈ ನಿರ್ಧಾರಕ್ಕೆ ಬರಲಾಗಿದೆ.

ಚಂಡೀಗಢ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೆಸರನ್ನು ಬದಲಾಯಿಸಿ ಶಹೀದ್ ಭಗತ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಎನ್ನುವ ಬೋರ್ಡ್ ಹಾಕಲಾಗಿದೆ.

₹485 ಕೋಟಿ ವೆಚ್ಚದ ಚಂಡೀಗಢ ವಿಮಾನ ನಿಲ್ದಾಣ ಯೋಜನೆಯು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ ಮತ್ತು ಪಂಜಾಬ್ ಮತ್ತು ಹರಿಯಾಣ ಸರ್ಕಾರಗಳ ಜಂಟಿ ಉದ್ಯಮವಾಗಿದೆ. ಪಂಜಾಬ್ ಮತ್ತು ಹರಿಯಾಣ ತಲಾ 24.5% ಪಾಲನ್ನು ಹೊಂದಿದ್ದರೆ, ಎ.ಎ.ಐಯು 51% ಪಾಲನ್ನು ಹೊಂದಿದೆ.