ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ; ಹೇಮಾ ಪ್ರದೀಪ್ ಶೆಟ್ಟಿಯವರಿಗೆ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ

ಹೆಬ್ರಿ: ನಿವೃತ್ತ ಶಿಕ್ಷಕ ಹಿರಿಯ ಸಾಹಿತಿ, ಯಕ್ಷಗಾನ ಕಲಾವಿದ, ಹರಿದಾಸ, ಜಿನದಾಸ, ತಾಳಮದ್ದಳೆ ಅರ್ಥದಾರಿ, ನಾಟಕಕಾರ, ಪ್ರಸಂಗಕರ್ತ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಚಾಣಕ್ಯ ಎಜ್ಯುಕೇಶನ್ ಮತ್ತು ಕಲ್ಚರಲ್ ಅಕಾಡೆಮಿ ಹೆಬ್ರಿ ಇದರ ವತಿಯಿಂದ ಶಿಕ್ಷಕರ ದಿನಾಚರಣೆ ಅಂಗವಾಗಿ ನೀಡಲಾಗುವ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಈ ಬಾರಿ ಹೆಬ್ರಿ ಎಸ್. ಆರ್. ಪಬ್ಲಿಕ್ ಸ್ಕೂಲ್ ನ ಶಿಕ್ಷಕಿ ಹೇಮಾ ಪ್ರದೀಪ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಮಾಂಬೆಟ್ಟು ಗುಲಾಬಿ ಶೆಟ್ಟಿ ಮತ್ತು ಸಂಜೀವ ಶೆಟ್ಟಿ ದಂಪತಿಯ ಪುತ್ರಿಯಾಗಿ ಜನಿಸಿರುವ ಹೇಮಾ ಶೆಟ್ಟಿ ಅವರು ಡಿ.ಎಡ್ ಪದವೀಧರರು.
2007ರಲ್ಲಿ ಶಿಕ್ಷಕ ವೃತ್ತಿಗೆ ಪಾದರ್ಪಣೆ ಮಾಡಿದ ಇವರು ಶಿಕ್ಷಣವೆಂಬುದು ಕೇವಲ ಪಠ್ಯಪುಸ್ತಕದ ಜ್ಞಾನವನ್ನು ಬೋಧಿಸುವ ಕಾರ್ಯವಲ್ಲ; ಅದು ವ್ಯಕ್ತಿತ್ವವನ್ನು ರೂಪಿಸುವ, ಮೌಲ್ಯಗಳನ್ನು ಬೆಳೆಸುವ ಹಾಗೂ ಉತ್ತಮ ಸಮಾಜ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವ ಪವಿತ್ರ ಸೇವೆ. ಆ ಮಹತ್ತರ ಧ್ಯೇಯವನ್ನು ಜೀವನದ ಆದರ್ಶವಾಗಿಸಿಕೊಂಡು ಪ್ರಸ್ತುತ ಹೆಬ್ರಿ ಎಸ್.ಆರ್. ಪಬ್ಲಿಕ್ ಸ್ಕೂಲ್ ನಲ್ಲಿ ಕಳೆದ 17 ವರ್ಷಗಳಿಂದ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಿಕ್ಷಣ ಸಂಸ್ಥೆಯಲ್ಲಿ ಉತ್ತಮವಾದ ಶಿಕ್ಷಕರಿದ್ದರೆ ಸುಸಂಸ್ಕೃತ ಪ್ರಜೆಗಳನ್ನು ಹೊಂದಿದ ರಾಷ್ಟದ ನಿರ್ಮಾಣವಾಗುತ್ತದೆ. ಈ ಹೊಣೆಯನ್ನು ಹೊತ್ತು ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ರೂಪಿಸುವ ಶಿಕ್ಷಕರು, ಬದುಕಿನ ಹೆಜ್ಜೆಯನ್ನು ಸರಿಯಾದ ಪಥಕ್ಕೆ ಕೊಡೊಯ್ಯುವವರೇ ನಿಜವಾದ ಉತ್ತಮ ಶಿಕ್ಷಕರು. ಒಬ್ಬ ವಿದ್ಯಾರ್ಥಿಯ ಜೀವನಯಾನದ ಬದುಕಿಗೆ ಆದರ್ಶವಾಗಿ, ದಡ ಸೇರಲು ನಾವಿಕನಾಗಿ, ಸನ್ಮಾರ್ಗದ ಚಾಲಕನಾಗಿ, ಅಜ್ಞಾನದ ಕತ್ತಲೆಯಲ್ಲಿ ಬೆಳದಿಂಗಳಾಗಿ, ಜ್ಞಾನದಾಹಿಗಳಿಗೆ ಅಕ್ಷರದಾಸೋಹಿಯಾಗಿ, ಸಾಧನೆಯ ಕಿರೀಟಕ್ಕೆ ಸೂರ್ತಿಯ ನೆಲೆಯಾಗಿ, ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಗುರುತಿಸಿ
ಅವರಿಗೆ ಮಾರ್ಗದರ್ಶನ ನೀಡಿ ಅವಕಾಶ ಕಲ್ಪಿಸಲು ಹಗಲಿರಳು ಶ್ರಮಿಸುವವರೇ ನಿಜವಾದ ಶಿಕ್ಷಕರು. ಅಂತಹ ಪವಿತ್ರವಾದ ಶಿಕ್ಷಕ ವೃತ್ತಿಯನ್ನು ಆಯ್ಕೆ ಮಾಡಿಕೊಂಡು, ವೃತ್ತಿ ಶಿಕ್ಷಕರಾಗಿರದೆ ಶಿಕ್ಷಕ ವೃತ್ತಿಯಲ್ಲಿ ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಂಡು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕಿಯಾಗಿ ಗುರುತಿಸಿಕೊಂಡ ಹೇಮಾ ಶೆಟ್ಟಿ ಅವರು ಮಾದರಿಯಾಗಿದ್ದಾರೆ.

ಬಹುಮುಖ ಪ್ರತಿಭೆಯ ಶಿಕ್ಷಕಿ:

ಮಕ್ಕಳಲ್ಲಿ ಅಡಗಿರುವ ಸೂಕ್ತ ಪ್ರತಿಭೆಯನ್ನು ಗುರುತಿಸಿ ಅವರಿಗೆ ಸೂಕ್ತ ವೇದಿಕೆಯನ್ನು ಕಲ್ಪಿಸಿ ಕೊಡುವುದರ ಜೊತೆಗೆ ಪ್ರೋತ್ಸಾಹ ನೀಡಿ ತರಬೇತಿಯನ್ನು ನೀಡುತ್ತಾ ಮಕ್ಕಳ ಏಳಿಗೆಯಲ್ಲಿ ಸದಾ ತೊಡಗಿಸಿಕೊಂಡಿರುವ ಇವರು ಸಾಂಸ್ಕೃತಿಕ ಕ್ಷೇತ್ರದಲ್ಲೂ ತನ್ನನ್ನು ಸಂಪೂರ್ಣವಾಗಿ ತೊಡಿಸಿಕೊಂಡ ಇವರು
ಬೋಧನೆಯ ಜೊತೆಗೆ ಗಾಯನ, ನೃತ್ಯ, ವೇದಿಕೆ ನಿರೂಪಣೆ, ಸುದ್ದಿ ವಾಚನ ಹಾಗೂ ಜಾಹೀರಾತುಗಳಿಗೆ ಹಿನ್ನೆಲೆ ಧ್ವನಿ (Voice-over) ನೀಡುವಂತಹ ವೈವಿಧ್ಯಮಯ ಕಲಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಶಿಕ್ಷಣ ಮತ್ತು ಸಂಸ್ಕೃತಿಯ ಸಮನ್ವಯವನ್ನು ಅತ್ಯಂತ ಸುಂದರವಾಗಿ ಪ್ರತಿಬಿಂಬಿಸುತ್ತದೆ. ಶಾಲಾ ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ನಿರೂಪಣೆ, ಸಂವಹನ ಕೌಶಲ್ಯ ಮತ್ತು ಕಲಾತ್ಮಕ ಅಭಿವ್ಯಕ್ತಿ ಅನೇಕ ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಿದೆ.

ಪ್ರತಿಭೆಗೆ ಸಂದ ಗೌರವ:

ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಅಮೂಲ್ಯ ಸೇವೆಯನ್ನು ಗುರುತಿಸಿ ಈಗಾಗಲೇ 2022ರಲ್ಲಿ ಆದರ್ಶ ಶಿಕ್ಷಕಿ ಪ್ರಶಸ್ತಿ, ಜನಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ವೇದಿಕೆ ನಿರೂಪಣೆಯ ಕ್ಷೇತ್ರದಲ್ಲಿ ತೋರಿದ ಅಸಾಧಾರಣ ಪ್ರತಿಭೆಗೆ ರಾಜ್ಯ ಮಟ್ಟದ ಅತ್ಯುತ್ತಮ ನಿರೂಪಕಿ ಪ್ರಶಸ್ತಿ ಲಭಿಸಿದ್ದು ಬಹುಮುಖ ಪ್ರತಿಭೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ. ಇವರ ಶೈಕ್ಷಣಿಕ ಸಾಹಿತ್ಯ, ಸಾಂಸ್ಕೃತಿಕ ರಂಗದಲ್ಲಿನ ಅಮೂಲ್ಯ ಸೇವೆಯನ್ನು ಗುರುತಿಸಿ ಈ ಬಾರಿ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಸ್ಮರಣಾರ್ಥ ಉಡುಪಿ ಜಿಲ್ಲಾ ಮಟ್ಟದ ಚಾಣಕ್ಯ ಅತ್ಯುತ್ತಮ ಶಿಕ್ಷಕಿ -2026 ಪ್ರಶಸ್ತಿಯನ್ನು ನೀಡಲಾಗುತ್ತಿದೆ.

ಅಂಬಾತನಯರ ನೆನಪಿನಲ್ಲಿ ಪ್ರಶಸ್ತಿ:
ಚಾಣಕ್ಯ ಸಂಸ್ಥೆ ಕಳೆದ 11 ವರ್ಷಗಳಿಂದ ಶಿಕ್ಷಣ ಮಾತ್ರವಲ್ಲದೆ ವಿವಿಧ ಸಾಂಸ್ಕೃತಿಕ ಚಟುವಟಿಕೆ ಬಗ್ಗೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ವಿವಿಧ ವೇದಿಕೆಗಳಲ್ಲಿ ಆವಕಾಶ ಕಲ್ಪಿಸುವುದರ ಜತೆಗೆ ಪತ್ರಿಕೆ ಹಾಗೂ ಟಿ.ವಿ.ಮಾಧ್ಯಮಗಳಲ್ಲಿ ಪ್ರತಿಭೆಯ ಅನಾವರಣ ಮಾಡಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಸಾಂಸ್ಕೃತಿಕ ಕ್ಷೇತ್ರದಲ್ಲಿ ತೊಡಗಿಸಿಕೊಂಡ ಚಾಣಕ್ಯ ಸಂಸ್ಥೆ ಶಿಕ್ಷಕರ ದಿನಾಚರಣೆ ಅಂಗವಾಗಿ ಶಿಕ್ಷಣದ ಜತೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಕೊಂಡು ಮಕ್ಕಳ ಪ್ರತಿಭೆಯನ್ನು ಹೊರತರುವಲ್ಲಿ ಶ್ರಮಿಸುತ್ತಿರುವ ಉಡುಪಿ ಜಿಲ್ಲೆಯ ಶಿಕ್ಷಕರನ್ನು ಕಳೆದ 4 ವರ್ಷದಿಂದ ಗುರುತಿಸಿ ಶಿಕ್ಷಣದ ಜತೆ ಸಾಂಸ್ಕೃತಿಕ, ಸಾಹಿತ್ಯ, ಯಕ್ಷಗಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ನಾಡಿನ ಹೆಸರಾಂತ ಶಿಕ್ಷಕ ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ನೆನಪಿನಲ್ಲಿ ಚಾಣಕ್ಯ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು ಪ್ರಶಸ್ತಿ ಪ್ರಧಾನ ಸಮಾರಂಭ ಸೆ. 5ರಂದು ಮಧ್ಯಾಹ್ನ 2:30ಕ್ಕೆ ಹೆಬ್ರಿ ಎಸ್. ಆರ್. ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.