“ಯಾರೆ ನೀನು ಭುವನಮೋಹಿನಿ” ಹಾಡಿಗೆ ಕುಣಿದ ಉಡುಪಿಯ ಯಕ್ಷ ಸುಂದರಿ ಯಾರು ಗೊತ್ತಾ?

ಯಕ್ಷಗಾನದ ಖ್ಯಾತ ಭಾಗವತರಾದ ಜನ್ಸಾಲೆ ರಾಘವೇಂದ್ರ ಆಚಾರ್ಯ ಅವರ “ಯಾರು ನೀನು ಭುವನ ಮೋಹಿನಿ”ಹಾಡಿಗೆ ಕುಣಿದ ಯುವತಿಯೊಬ್ಬಳ ಕುಣಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು, ಯಕ್ಷಾಭಿಮಾನಿಗಳು ಮಾತ್ರವಲ್ಲ ರಾಜ್ಯದ ಬಹುತೇಕ ನೆಟ್ಟಿಗರು ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಂದ ಹಾಗೆ ಈ ಹುಡುಗಿ ಯಾರು ಎನ್ನುವುದು ಬಹುತೇಕ ಮಂದಿಯ ಪ್ರಶ್ನೆ.ಎಲ್ಲರೂ ಸಾಮಾಜಿಕ ಜಾಲತಾಣಗಳಲ್ಲಿ ಈ ಕುಣಿತದ ವಿಡಿಯೋ ಶೇರ್ ಮಾಡಿ ಖುಷಿ ಪಟ್ಟಿದ್ದಾರೆ ಬಿಟ್ಟರೆ , ಈ ಹುಡುಗಿ ಯಾರು ಎನ್ನುವ ಪ್ರಶ್ನೆ ಎತ್ತಿರಲಿಲ್ಲ.”ಯಾರೆ ನೀನು ಭುವನ  ಮೋಹಿನಿ”ಹಾಡಿಗೆ ಪ್ರಬುಧ್ದ ಕಲಾವಿದೆಯಂತೆ ಕುಣಿದ ಈ ಯುವತಿಯ ಹೆಸರೇ ಚೈತ್ರಾ ಶೆಟ್ಟಿ. ಕಡೆಕಾರಿನ ಯುವ ಕಲಾವಿದೆಯಾದ ಚೈತ್ರಾ, ಮೇ ೧೫ ರಂದು  ಕಟಪಾಡಿ ಸಮೀಪದ ಕುರ್ಕಾಲಿನ ಮದುವೆಮನೆಯಲ್ಲಿ ಮೆಹೆಂದಿ ಕಾರ್ಯಕ್ರಮಕ್ಕೆ ಸಂಬಂಧಿಕರ ಬತ್ತಾಯದ ಮೇರೆಗೆ ಸುಮ್ಮನೇ ಯಕ್ಷಗಾನದ ಹಾಡಿಗೆ ಸ್ಟೆಪ್ ಹಾಕಿದ್ದಾರೆ. ಅವರು  ಸ್ಟೆಪ್ ಹಾಕಿದ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಮಾತ್ರವಲ್ಲ “ಯಾರಪ್ಪ ಈ ಹುಡುಗಿ”ಅಂತ ಯಕ್ಷಪ್ರೇಮಿಗಳು ಹುಬ್ಬೇರಿಸಿದ್ದಾರೆ.

ಕಲಾ ಚೈತ್ರ:

ಅಂದ ಹಾಗೆ ಚೈತ್ರಾ ಅವರಿಗೆ ಬಾಲ್ಯದಿಂದಲೂ ಯಕ್ಷಗಾನದತ್ತ ಆಸಕ್ತಿ ಜಾಸ್ತಿ ಇತ್ತು. ಯಕ್ಷಗುರು ರಾಜೀವ್ ತೋನ್ಸೆ ಅವರ ಬಳಿ ಯಕ್ಷಗಾನ ಅಭ್ಯಾಸ ಕೂಡ ಮಾಡಿದ್ದಾರೆ. ಅಲ್ಲಲ್ಲಿ ಯಕ್ಷಗಾನ ಪ್ರದರ್ಶನವನ್ನೂ ನೀಡಿ ಯಕ್ಷ ರಂಗದಲ್ಲಿ ಸೈ ಅನ್ನಿಸಿಕೊಂಡಿದ್ದಾರೆ. ಆದರೆ ಅವರು ಸಾಂಪ್ರದಾಯಿಕವಾಗಿ ಈ ಹಿಂದೆ ಕುಣಿದದ್ದು ಸುದ್ದಿಯಾಗದೇ ಮೆಹಂದಿ ಕಾರ್ಯಕ್ರಮದಲ್ಲಿ ವೇಷಭೂಷಣಗಳಿಲ್ಲದೇ ಕುಣಿದದ್ದು ಭರ್ಜರಿ ಹಿಟ್ ಆಗಿದೆ.

ಚೈತ್ರಾ ಅವರ ವಿಡಿಯೋ ಇಲ್ಲಿದೆ: