ಉಡುಪಿ: ಬೈಕ್ ನಲ್ಲಿ ಬಂದ ಖದೀಮನೊಬ್ಬ ಮಹಿಳೆಯರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಸುಲಿಗೆ ಮಾಡಿರುವ ಸರಣಿ ಘಟನೆ ಮಣಿಪಾಲ ಹಾಗೂ ಉಡುಪಿ ಪರಿಸರದಲ್ಲಿ ಇಂದು ಬೆಳಿಗ್ಗೆ ನಡೆದಿದೆ.
ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಅಂಬಾಗಿಲು ಕುಕ್ಕುಂಜೆಯ ಮಹಿಳೆಯೊಬ್ಬರು ದೇವಸ್ಥಾನಕ್ಕೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬೈಕ್ ನಲ್ಲಿ ಬಂದ ದುಷ್ಕರ್ಮಿ ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಸಿದುಕೊಂಡಿದ್ದಾನೆ.
ಆದರೆ ಈ ವೇಳೆ ಮಹಿಳೆ ಕೂಡಲೇ ಎಚ್ಚೆತ್ತುಕೊಂಡು ಸರವನ್ನು ಬೀಗಿಯಾಗಿ ಹಿಡಿದಿಟ್ಟುಕೊಂಡ ಪರಿಣಾಮ ಸರ ತುಂಡಾಗಿ, ಅರ್ಧ ಸರವನ್ನು ಕಸಿದುಕೊಂಡು ದುಷ್ಕರ್ಮಿ ಪರಾರಿಯಾಗಿದ್ದಾನೆ.
ಅದೇ ರೀತಿ ಇಂದ್ರಾಳಿ ಕಾಮಾಕ್ಷಿ ದೇವಸ್ಥಾನ ಬಳಿ ಮಹಿಳೆಯೊಬ್ಬರ ಚಿನ್ನದ ಸರವನ್ನು ಖದೀಮರು ಸುಲಿಗೆ ಮಾಡಿರುವ ಘಟನೆ ವರದಿಯಾಗಿದೆ. ಈ ಎರಡು ಘಟನೆಗಳ ಬಗ್ಗೆ ಮಣಿಪಾಲ ಠಾಣೆಯಲ್ಲಿ ದೂರು ದಾಖಲಾಗಿದೆ.
ಉಡುಪಿ ಬ್ರಹ್ಮಗಿರಿಯ ಅಪಾರ್ಟ್ ಮೆಂಟ್ ವೊಂದಕ್ಕೆ ಕೆಲಸಕ್ಕೆ ಹೋಗುತ್ತಿದ್ದ ಮಹಿಳೆಯ ಚಿನ್ನದ ಸರವನ್ನು ದುಷ್ಕರ್ಮಿ ಕಸಿದುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಉಡುಪಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಮೂರು ಸರಗಳ್ಳತನ ಪ್ರಕರಣ ಒಂದೇ ದಿನ ನಡೆದಿದ್ದು, ಇದರಲ್ಲಿ ಸರಗಳ್ಳತನ ಜಾಲವೊಂದು ಸಕ್ರಿಯವಾಗಿರುವ ಶಂಕೆ ವ್ಯಕ್ತವಾಗಿದೆ. ಪೊಲೀಸರು ಪ್ರತ್ಯೇಕ ತಂಡ ರಚನೆ ಮಾಡಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ದುಷ್ಕರ್ಮಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.