ಕಾರ್ಕಳ: ಮುದ್ರಾಡಿ ನಮ ತುಳುವೆರ್ ಕಲಾ ಸಂಘಟನೆ, ಸಂಸ ಥಿಯೇಟರ್, ಅವಿರತ ಪುಸ್ತಕ ಬೆಂಗಳೂರು ಆರ್ಟ್ ಫೌಂಡೇಶನ್ ನೀಡುವ ಸಿಜಿಕೆ 2020ರ ಪ್ರಶಸ್ತಿಗೆ ಕಲಾವಿದ, ರಂಗ ನಿರ್ದೇಶಕ, ಕಾರ್ಕಳದ ಚಂದ್ರನಾಥ ಬಜಗೋಳಿ ಅವರು ಆಯ್ಕೆಯಾಗಿರುತ್ತಾರೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುಕುಮಾರ್ ಮೋಹನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಂದ್ರನಾಥ ಬಜಗೋಳಿ ಕಳೆದ 24 ವರ್ಷಗಳಿಂದ ಚಿತ್ರಕಲೆ ಮತ್ತು ರಂಗಭೂಮಿಯ ಚಟುವಟಿಕೆಗಳಲ್ಲಿ ನಿರಂತರ ಸೇವೆ ಮಾಡುತ್ತಾ ಬಂದಿದ್ದು, ಐದು ದೊಡ್ಡ ನಾಟಕಗಳು ಹಾಗೂ 17 ಸಣ್ಣ ನಾಟಕಗಳನ್ನು ರಚಿಸಿದ್ದಾರೆ. ಹಿರಿಯ ಸಾಹಿತಿಗಳಾದ ದ.ರಾ.ಬೇಂದ್ರೆ, ಗಿರೀಶ್ ಕರ್ನಾಡ್ ಸೇರಿದಂತೆ ಹಲವಾರು ನಾಟಕಕಾರರ ನಾಟಕಗಳ ಸಹಿತ ೭೫ಕ್ಕಿಂತಲೂ ಹೆಚ್ಚು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಉಡುಪಿ, ಮಂಗಳೂರು ಸಹಿತ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನೂರಾರು ಶಿಬಿರಗಳಲ್ಲಿ ತನ್ನದೇ ಪರಿಕಲ್ಪನೆಯ ಉಪನ್ಯಾಸ, ಕಾರ್ಯಾಗಾರಗಳನ್ನು ನಡೆಸಿಕೊಟ್ಟಿದ್ದಾರೆ. ಮಾನಸ ಕಲಾ ಶಾಲೆಯ ಮೂಲಕ ಸಾವಿರಾರು ವಿದ್ಯಾರ್ಥಿಗಳಿಗೆ ಚಿತ್ರಕಲಾ ಶಿಕ್ಷಣವನ್ನು ನೀಡುತ್ತಿದ್ದಾರೆ.
ಪ್ರಶಸ್ತಿ ಪ್ರಧಾನ:
2020 ಜೂನ್ 27ರ ಬೆಳಿಗ್ಗೆ ಗಂ: 10.೦೦ ಕ್ಕೆ ಕಾರ್ಕಳ ಶಿರಿಡಿ ಸಾಯಿ ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಶಾಸಕ, ವಿ. ಸುನಿಲ್ ಕುಮಾರ್ ಪ್ರಶಸ್ತಿ ಪ್ರಧಾನ ಮಾಡಲಿರುವರು. ಧರ್ಮಯೋಗಿ ಮೋಹನ ಪಾತ್ರಿ (ಶ್ರೀ ಕ್ಷೇತ್ರ ಮುದ್ರಾಡಿ) ಚಂದ್ರಹಾಸ ಸುವರ್ಣ ಡಿ. ಆರ್. ರಾಜು ಕಾರ್ಕಳ. ಮತ್ತು ವಿಜಯ ಶೆಟ್ಟಿ ಭಾಗವಹಿಸಲಿದ್ದಾರೆ.