ನವದೆಹಲಿ: ಜಾಗತಿಕವಾಗಿ ಏರುತ್ತಿರುವ ರಸಗೊಬ್ಬರಗಳ ಬೆಲೆಯಿಂದ ರೈತರನ್ನು ರಕ್ಷಿಸಲು 2022-23 ರ ಕೇಂದ್ರ ಬಜೆಟ್‌ನಲ್ಲಿ ಈಗಾಗಲೇ ಮಂಜೂರು ಮಾಡಲಾದ 1.05 ಲಕ್ಷ ಕೋಟಿ ರೂಪಾಯಿಗಳ ಜೊತೆಗೆ ಹೆಚ್ಚುವರಿಯಾಗಿ 1.10 ಲಕ್ಷ ಕೋಟಿ ರೂಪಾಯಿಗಳನ್ನು ರೈತರಿಗೆ ನೀಡಲಾಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರ ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಕೇಂದ್ರ ಅಬಕಾರಿ ಸುಂಕ ಕಡಿತವನ್ನು ಘೋಷಿಸಿ, “ನಾವು ಪೆಟ್ರೋಲ್ ಮೇಲಿನ ಕೇಂದ್ರ ಅಬಕಾರಿ ಸುಂಕವನ್ನು ಲೀಟರ್‌ಗೆ 8 ರೂಪಾಯಿ ಮತ್ತು ಡೀಸೆಲ್‌ಗೆ 6 ರೂಪಾಯಿ ಕಡಿತಗೊಳಿಸುತ್ತಿದ್ದೇವೆ. ಇದರಿಂದ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 9.5 ರೂ., ಡೀಸೆಲ್ ದರ 7 ರೂಗೆ ಕಡಿತಗೊಳಿಸುತ್ತದೆ. ಇದು ಸರ್ಕಾರದ ಆದಾಯದ ಮೇಲೆ ವರ್ಷಕ್ಕೆ ಸುಮಾರು 1 ಲಕ್ಷ ಕೋಟಿ ರೂಪಾಯಿಯಷ್ಟು ಹೊರೆ ಹಾಕುತ್ತದೆ” ಎಂದು ಹಣಕಾಸು ಸಚಿವೆ ಟ್ವೀಟ್ ಮಾಡಿದ್ದಾರೆ.
ಅಗತ್ಯ ವಸ್ತುಗಳ ಬೆಲೆಗಳನ್ನು ನಿಯಂತ್ರಣದಲ್ಲಿಡುವುದನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದಿರುವ ಸಚಿವೆ, ಈ ಹಿಂದೆ ಬೆಲೆ ಕಡಿತ ಮಾಡದ ರಾಜ್ಯಗಳು ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮೇಲಿನ ವ್ಯಾಟ್ ಅನ್ನು ಕಡಿತಗೊಳಿಸಿ ಗ್ರಾಹಕರಿಗೆ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಈ ವರ್ಷ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಒಂಬತ್ತು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ಸರ್ಕಾರವು ಪ್ರತಿ ಗ್ಯಾಸ್ ಸಿಲಿಂಡರ್‌ಗೆ (12 ಸಿಲಿಂಡರ್‌ಗಳವರೆಗೆ) 200 ರೂ ಸಬ್ಸಿಡಿ ನೀಡಲಿದೆ. ಇದು ವರ್ಷಕ್ಕೆ ಸುಮಾರು 6100 ಕೋಟಿ ರೂಪಾಯಿಗಳ ಆದಾಯದ ಪರಿಣಾಮಗಳನ್ನು ಹೊಂದಿರುತ್ತದಾದರೂ ಇದರಿಂದ ನಮ್ಮ ತಾಯಿ ಮತ್ತು ಸಹೋದರಿಯರಿಗೆ ಸಹಾಯವಾಗುತ್ತದೆ ಎಂದಿದ್ದಾರೆ.