ಯುಎಪಿಎ ಅಧಿಕಾರ ಚಲಾಯಿಸಿ ಪಿಎಫ್‌ಐ ನಿಗ್ರಹಿಸಿ: ರಾಜ್ಯಗಳಿಗೆ ಕೇಂದ್ರದ ನಿರ್ದೇಶನ

ನವದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ಅದರ ಸಹವರ್ತಿಗಳು ಮತ್ತು ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘಗಳೆಂದು ಘೋಷಿಸಿದ ನಂತರ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯಿದೆ(ಯುಎಪಿಎ), 1967 ರ ಅಧಿಕಾರವನ್ನು ಅವುಗಳ ವಿರುದ್ಧ ಚಲಾಯಿಸಲು ಕೇಂದ್ರ ಸರ್ಕಾರವು ನಿರ್ದೇಶನ ನೀಡಿದೆ.

ನಿನ್ನೆ ಹೊರಡಿಸಿದ ಅಧಿಸೂಚನೆಯಲ್ಲಿ, ಕೇಂದ್ರ ಸರ್ಕಾರವು ಪಿಎಫ್‌ಐ, ಅದರ ಸಹವರ್ತಿಗಳು ಮತ್ತು ಅಂಗಸಂಸ್ಥೆಗಳನ್ನು ಕಾನೂನುಬಾಹಿರ ಸಂಘ ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಐದು ವರ್ಷಗಳ ಅವಧಿಗೆ ಘೋಷಿಸಿದೆ.

ಪಿಎಫ್‌ಐ ಮತ್ತು ಸಂಬಂಧಿತ ರಂಗಗಳ ಕಾನೂನುಬಾಹಿರ ಚಟುವಟಿಕೆಗಳಿಗೆ ತಕ್ಷಣವೇ ಕಡಿವಾಣ ಹಾಕದಿದ್ದರೆ, ಅವರು ಈ ಅವಕಾಶವನ್ನು ಬಳಸಿಕೊಂಡು ಅವರ ವಿಧ್ವಂಸಕ ಚಟುವಟಿಕೆಗಳನ್ನು ಮುಂದುವರಿಸುತ್ತಾರೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಭಂಗ ಮತ್ತು ದೇಶದ ಸಾಂವಿಧಾನಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತಾರೆ ಎಂದು ಸರ್ಕಾರ ಅಭಿಪ್ರಾಯಪಟ್ಟಿದೆ.

ಅವರು ಭಯೋತ್ಪಾದನಾ-ಆಧಾರಿತ ಪ್ರತಿಗಾಮಿ ಆಡಳಿತವನ್ನು ಪ್ರೋತ್ಸಾಹಿಸುತ್ತಾರೆ ಮತ್ತು ಜಾರಿಗೊಳಿಸುತ್ತಾರೆ ಮತ್ತು ದೇಶ ವಿರೋಧಿ ಭಾವನೆಗಳನ್ನು ಪ್ರಚಾರ ಮಾಡುವುದನ್ನು ಮುಂದುವರೆಸುತ್ತಾರೆ ಮತ್ತು ದೇಶದ ವಿರುದ್ಧ ಅಸಮಾಧಾನವನ್ನು ಸೃಷ್ಟಿಸುವ ಉದ್ದೇಶದಿಂದ ಸಮಾಜದ ನಿರ್ದಿಷ್ಟ ವರ್ಗವನ್ನು ಎತ್ತಿಕಟ್ಟುತ್ತಾರೆ ಎಂದು ನಿರ್ದೇಶನ ಹೇಳಿದೆ.

ಜಾಗತಿಕ ಭಯೋತ್ಪಾದನಾ ಗುಂಪುಗಳೊಂದಿಗೆ ಪಿಎಫ್‌ಐ ಅಂತರಾಷ್ಟ್ರೀಯ ಸಂಪರ್ಕದ ಹಲವಾರು ನಿದರ್ಶನಗಳಿವೆ ಮತ್ತು ಪಿಎಫ್‌ಐನ ಕೆಲವು ಕಾರ್ಯಕರ್ತರು ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾ (ಐಎಸ್‌ಐಎಸ್) ಗೆ ಸೇರಿಕೊಂಡಿದ್ದಾರೆ ಮತ್ತು ಸಿರಿಯಾ, ಇರಾಕ್ ಮತ್ತು ಅಫ್ಘಾನಿಸ್ತಾನದಲ್ಲಿ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗವಹಿಸಿದ್ದಾರೆ ಎಂದು ಅದು ಉಲ್ಲೇಖಿಸಿದೆ.

ಇದನ್ನು ಗಮನದಲ್ಲಿಟ್ಟುಕೊಂಡು, ಪಿಎಫ್‌ಐ ಮತ್ತು ಅದರ ಸಹವರ್ತಿಗಳು ಮತ್ತು ಅಂಗಸಂಸ್ಥೆಗಳು ತಕ್ಷಣವೇ ಜಾರಿಗೆ ಬರುವಂತೆ ಕಾನೂನುಬಾಹಿರ ಸಂಘ ಎಂದು ಘೋಷಿಸುವುದು ಅಗತ್ಯವಾಗಿದೆ ಎಂದು ಸಚಿವಾಲಯ ಹೇಳಿದೆ. ಉತ್ತರ ಪ್ರದೇಶ, ಕರ್ನಾಟಕ ಮತ್ತು ಗುಜರಾತ್ ನ ರಾಜ್ಯ ಸರ್ಕಾರಗಳು ಪಿಎಫ್‌ಐ ನಿಷೇಧಿಸಲು ಶಿಫಾರಸು ಮಾಡಿವೆ ಎಂದು ಗೃಹ ಸಚಿವಾಲಯ ತಿಳಿಸಿದೆ.