ಸುಳ್ಳು ಸುದ್ದಿ, ಭಾರತ ವಿರೋಧಿ ದ್ವೇಷ ವಿಷಯಕ್ಕಾಗಿ 8 ಯೂಟ್ಯೂಬ್ ಹಾಗೂ 1 ಫೇಸ್ ಬುಕ್ ಖಾತೆಯನ್ನು ನಿರ್ಬಂಧಿಸಿದ ಕೇಂದ್ರ

ನವದೆಹಲಿ: ಸುಳ್ಳು ಸುದ್ದಿ, ಭಾರತ ವಿರೋಧಿ ದ್ವೇಷ ಪೂರಿತ ವಿಷಯಗಳನ್ನು ಪ್ರಸಾರಮಾಡಿದ್ದಕ್ಕಾಗಿ ಪಾಕಿಸ್ತಾನದ ಒಂದು ಸೇರಿದಂತೆ, ಒಟ್ಟು ಎಂಟು ಯೂಟ್ಯೂಬ್ ಚಾನೆಲ್ ಮತ್ತು ಒಂದು ಫೇಸ್ ಬುಕ್ ಖಾತೆಯನ್ನು ಕೇಂದ್ರ ಸರಕಾರ ನಿಷೇಧಿಸಿದೆ ಎಂದು ಸುದ್ದಿ ಸಂಸ್ಥೆ ಎ.ಎನ್.ಐ ವರದಿ ಮಾಡಿದೆ.

ಕೇಂದ್ರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು 2021 ರ ಮಾಹಿತಿ ತಂತ್ರಜ್ಞಾನ ನಿಯಮಗಳ ಅಡಿಯಲ್ಲಿ ಆಗಸ್ಟ್ 16 ರಂದು ಭಾರತ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಈ ಚಾನೆಲ್ ಗಳ ಮೇಲೆ ನಿಷೇಧ ಹೇರಿದೆ. ನಿಷೇಧಿತ ಚಾನೆಲ್ ಗಳಿಗೆ ಒಟ್ಟಾರೆಯಾಗಿ 114 ಕೋಟಿ ವೀಕ್ಷಣೆಗಳು ಮತ್ತು 85 ಲಕ್ಷ ಬಳಕೆದಾರರು ಇದ್ದರೆನ್ನಲಾಗಿದೆ.

ಈ ಯೂಟ್ಯೂಬ್ ಚಾನೆಲ್ ಗಳನ್ನು ವಿಶ್ಲೇಷಿಸಿದ ಬಳಿಕ ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ, ದೇಶದ ಭದ್ರತೆಗೆ ಕಂಟಕವಾಗುವ ಮತ್ತು ಸುಳ್ಳು ಸುದ್ದಿಗಳನ್ನು ಹರಡುವ ಅವುಗಳ ಸ್ಪಷ್ಟ ಕಾರ್ಯಸೂಚಿಯ ಬಗ್ಗೆ ತಿಳಿದುಬಂದಿದೆ ಎಂದು ಸಚಿವಾಲಯ ತಿಳಿಸಿದೆ.

ಭಾರತ ಸರಕಾರದ ಬಗ್ಗೆ, ಭಾರತೀಯ ಸೇನೆಯ ಬಗ್ಗೆ ಸುಳ್ಳು ಸುದ್ದಿಗಳನ್ನು ಹರಡುವ ಉದ್ದೇಶದಿಂದ ಕಂಟೆಂಟ್ ಗಳನ್ನು ರಚಿಸಲಾಗುತ್ತಿರುವ ಬಗ್ಗೆ ಪುರಾವೆಗಳು ದೊರೆತ ಬಳಿಕ ಈ ಚಾನೆಲ್ ಗಳನ್ನು ನಿಷೇಧಿಸಲಾಗಿದೆ.

ಪಾಕಿಸ್ತಾನದ ನ್ಯೂಸ್ ಕಿ ದುನಿಯಾ, ಫೇಸ್ ಬುಕ್ ಪೇಜ್ ನ ಲೋಕತಂತ್ರ ಟಿವಿ, ಸಬ್ ಕುಚ್ ದೇಖೋ, ಯು ಎಂಡ್ ವಿ ಟಿವಿ, ಎ.ಎಂ ರಜ್ವಿ, ಗೌರವ್ ಶಾಲಿ ಪವನ್, ಸೀಟಾಪ್ 5 ಟಿ.ಎಚ್, ಸರ್ಕಾರಿ ಅಪ್ಡೇಟ್ ಮುಂತಾದ ಚಾನೆಲ್ ಗಳನ್ನು ನಿಷೇಧಿಸಲಾಗಿದೆ.