ಕೋಚಿಂಗ್ ಸೆಂಟರ್ ಗಳ ಆಟಾಟೋಪಕ್ಕೆ ಕಡಿವಾಣ: ನಿಯಮ ಜಾರಿಗೊಳಿಸಿದ ಕೇಂದ್ರ ಶಿಕ್ಷಣ ಸಚಿವಾಲಯ

ನವದೆಹಲಿ: ದೇಶಾದ್ಯಂತ ಅಣಬೆಗಳಂತೆ ತಲೆ ಎತ್ತಿರುವ ಕೋಚಿಂಗ್ ಕೇಂದ್ರಗಳಿಗೆ ಮಾರ್ಗಸೂಚಿಗಳನ್ನು ಕೇಂದ್ರ ಶಿಕ್ಷಣ ಸಚಿವಾಲಯ ಜಾರಿಗೊಳಿಸಿದೆ. ದೇಶದ ಕೋಚಿಂಗ್ ಕ್ಯಾಪಿಟಲ್ ಎಂದು ಕರೆಯಲ್ಪಡುವ ರಾಜಸ್ಥಾನದ ಕೋಟಾದಲ್ಲಿ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಆತಂಕಕಾರಿ ಏರಿಕೆ ಪ್ರಕರಣದ ನಡುವೆ ಈ ಕ್ರಮವು ಬಂದಿದೆ.

16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಅಥವಾ ತಮ್ಮ ಮಾಧ್ಯಮಿಕ ಶಿಕ್ಷಣವನ್ನು ಇನ್ನೂ ಪೂರ್ಣಗೊಳಿಸದ ಯಾವುದೇ ವಿದ್ಯಾರ್ಥಿಗಳ ಪ್ರವೇಶಾತಿ ಅತಿಯಾದ ಶುಲ್ಕ ವಸೂಲಿ, ಮೂಲಸೌಕರ್ಯ, ಸರಿಯಾದ ದೂರು ಪರಿಹಾರ ವ್ಯವಸ್ಥೆ, ತಪ್ಪುದಾರಿಗೆಳೆಯುವ ಜಾಹೀರಾತುಗಳ ಪ್ರಕಟಣೆ ಮತ್ತು ಪ್ರವೇಶಾತಿಗೂ ಮುನ್ನ ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಉತ್ತಮ ಅಂಕಗಳು ಅಥವಾ ಶ್ರೇಣಿಗಳ ಭರವಸೆ ಮುಂತಾದ ಹಲವು ವಿಷಯಗಳ ಬಗ್ಗೆ ನಿಯಮಗಳನ್ನು ಪಾಲಿಸಲು ಶಿಕ್ಷಣ ಸಚಿವಾಲಯ ಸೂಚಿಸಿದೆ.

“ಯಾವುದೇ ನಿಗದಿತ ನೀತಿ ಅಥವಾ ನಿಯಂತ್ರಣದ ಅನುಪಸ್ಥಿತಿಯಲ್ಲಿ ದೇಶದಲ್ಲಿ ಅನಿಯಂತ್ರಿತ ಖಾಸಗಿ ಕೋಚಿಂಗ್ ಸೆಂಟರ್‌ಗಳ ಸಂಖ್ಯೆಯು ಬೆಳೆಯುತ್ತಲೇ ಇದೆ. ಇಂತಹ ಕೇಂದ್ರಗಳು ವಿದ್ಯಾರ್ಥಿಗಳಿಂದ ಅಧಿಕ ಶುಲ್ಕ ವಸೂಲಿ ಮಾಡುವ ನಿದರ್ಶನಗಳು, ವಿದ್ಯಾರ್ಥಿಗಳ ಮೇಲೆ ಅನಗತ್ಯ ಒತ್ತಡದ ಪರಿಣಾಮವಾಗಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುವುದು, ಬೆಂಕಿ ಮತ್ತು ಇತರ ಅಪಘಾತಗಳಿಂದ ಅಮೂಲ್ಯ ಜೀವಹಾನಿ, ಮತ್ತು ಈ ಕೇಂದ್ರಗಳು ಅಳವಡಿಸಿಕೊಳ್ಳುತ್ತಿರುವ ಹಲವಾರು ಅವ್ಯವಹಾರಗಳು ಮಾಧ್ಯಮಗಳಲ್ಲಿ ವ್ಯಾಪಕವಾಗಿ ವರದಿಯಾಗುತ್ತಿವೆ. ಕೋಚಿಂಗ್ ಸೆಂಟರ್ ತೆರೆಯಲು, ನಡೆಸಲು ಅಥವಾ ನಿರ್ವಹಿಸಲು, ಸಕ್ಷಮ ಪ್ರಾಧಿಕಾರದಿಂದ ಪೂರ್ವ ಅನುಮತಿಗಳನ್ನು ಪಡೆಯಬೇಕು ಮತ್ತು ಪ್ರಸ್ತುತ ಅನುಮತಿಯಿಲ್ಲದೆ ನಡೆಯುತ್ತಿರುವವರು ಮುಂದಿನ ಮೂರು ತಿಂಗಳೊಳಗೆ ನೋಂದಣಿಗೆ ಅರ್ಜಿ ಸಲ್ಲಿಸಬೇಕು” ಎಂದು ಸಚಿವಾಲಯ ತಿಳಿಸಿದೆ.

ಕೋಚಿಂಗ್ ಸೆಂಟರ್‌ಗಳು ಪದವಿ ಮಟ್ಟಕ್ಕಿಂತ ಕಡಿಮೆ ವಿದ್ಯಾರ್ಹತೆ ಹೊಂದಿರದ ಬೋಧಕರನ್ನು ತೊಡಗಿಸಿಕೊಳ್ಳುವಂತಿಲ್ಲ ಅಥವಾ “ನೈತಿಕ ಪ್ರಕ್ಷುಬ್ಧತೆಯನ್ನು ಒಳಗೊಂಡ ಯಾವುದೇ ಅಪರಾಧಕ್ಕಾಗಿ” ಶಿಕ್ಷೆಗೆ ಒಳಗಾದ ಬೋಧಕರ ಸೇವೆಗಳನ್ನು ನೇಮಿಸಿಕೊಳ್ಳುವಂತಿಲ್ಲ ಎಂದೂ ಸಚಿವಾಲಯ ತಿಳಿಸಿದೆ.

ಬೇಕಾಬಿಟ್ಟಿ ಶುಲ್ಕ ವಸೂಲಿಗೂ ಕಡಿವಾಣ

ಕೋಚಿಂಗ್ ಸೆಂಟರ್‌ಗಳು ನ್ಯಾಯಯುತ ಮತ್ತು ಸಮಂಜಸವಾದ ಶುಲ್ಕವನ್ನು ವಿಧಿಸಬೇಕು ಮತ್ತು ರಸೀದಿಗಳನ್ನು ನೀಡಬೇಕು. ನೀಡುವ ಕೋರ್ಸ್‌ಗಳು, ಆ ಕೋರ್ಸ್‌ಗಳ ಅವಧಿ, ತರಗತಿಗಳ ಸಂಖ್ಯೆ, ಉಪನ್ಯಾಸಗಳು, ಟ್ಯುಟೋರಿಯಲ್‌ಗಳನ್ನು ನಮೂದಿಸುವ ವಿವರಣಪತ್ರವನ್ನು ಒದಗಿಸಬೇಕು.

ವಿದ್ಯಾರ್ಥಿಯು ಸಂಪೂರ್ಣ ಕೋರ್ಸ್‌ಗೆ ಶುಲ್ಕವನ್ನು ಪಾವತಿಸಿದ್ದರೂ ಅದನ್ನು ಮಧ್ಯದಲ್ಲಿ ಬಿಟ್ಟರೆ, ಉಳಿದ ಅವಧಿಯ ಶುಲ್ಕವನ್ನು 10 ದಿನಗಳಲ್ಲಿ ಮರುಪಾವತಿಸಬೇಕಾಗುತ್ತದೆ. ಇದು ಹಾಸ್ಟೆಲ್ ಮತ್ತು ಮೆಸ್ ಶುಲ್ಕಕ್ಕೂ ಅನ್ವಯಿಸುತ್ತದೆ ಎಂದು ಅದು ಹೇಳಿದೆ.

ತರಗತಿಯ ಸಮಯದಲ್ಲಿ ಪ್ರತಿ ವಿದ್ಯಾರ್ಥಿಗೆ ಕನಿಷ್ಠ ಒಂದು ಚದರ ಮೀಟರ್ ಪ್ರದೇಶವನ್ನು ನಿಗದಿಪಡಿಸಬೇಕು ಮತ್ತು ಕೋಚಿಂಗ್ ಸೆಂಟರ್ ಕಟ್ಟಡಗಳು ಅಗ್ನಿ ಸುರಕ್ಷತೆ ಕೋಡ್‌ಗಳು, ಕಟ್ಟಡ ಸುರಕ್ಷತೆ ಕೋಡ್‌ಗಳು ಮತ್ತು ಇತರ ಮಾನದಂಡಗಳಿಗೆ ಬದ್ಧವಾಗಿರಬೇಕು ಎಂದು ಸಚಿವಾಲಯ ತಿಳಿಸಿದೆ.

ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯ, ದೂರು ಪೆಟ್ಟಿಗೆಗಳ ಅಳವಡಿಕೆ, ದೂರು ಪರಿಹಾರಕ್ಕೆ ಸಮಿತಿ ರಚನೆ, ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕಾಳಜಿ ವಹಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿರುವ ಸಚಿವಾಲಯ ಧರ್ಮ, ಜನಾಂಗ, ಜಾತಿ, ಲಿಂಗ, ಜನ್ಮಸ್ಥಳ ಮತ್ತು ಮೂಲದ ಆಧಾರದ ಮೇಲೆ ಯಾವುದೇ ತಾರತಮ್ಯ ಮಾಡಬಾರದು ಎಂದು ಸೇರಿಸಿದೆ. ದಿವ್ಯಾಂಗರು ಮತ್ತು ವಿದ್ಯಾರ್ಥಿನಿಯರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವಂತೆಯೂ ಹೇಳಿದೆ.