ನವದೆಹಲಿ: ಸಂಸತ್ತಿನ ಬಜೆಟ್ ಅಧಿವೇಶನದ ಮೊದಲು ಕೇಂದ್ರವು ಹೊಸ ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯನ್ನು ತರಲಿದೆ. ಭಾನುವಾರ ಹಿಮಾಚಲ ಪ್ರದೇಶದ ಧರ್ಮಶಾಲಾದಲ್ಲಿ ರಾಜ್ಯ ಪ್ರವಾಸೋದ್ಯಮ ಸಚಿವರ ರಾಷ್ಟ್ರೀಯ ಸಮ್ಮೇಳನವನ್ನುದ್ದೇಶಿಸಿ ಮಾತನಾಡಿದ ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಈ ವಿಷಯ ತಿಳಿಸಿದ್ದಾರೆ. ಎಲ್ಲ ಪಾಲುದಾರರೊಂದಿಗೆ ವ್ಯಾಪಕ ಸಮಾಲೋಚನೆ ಮತ್ತು ಚರ್ಚೆಯ ನಂತರ ರಾಷ್ಟ್ರೀಯ ಪ್ರವಾಸೋದ್ಯಮ ನೀತಿಯನ್ನು ಜಾರಿಗೆ ತರಲಾಗುವುದು ಎಂದು ಅವರು ಹೇಳಿದರು.
ಜಿ 20 ಜಾಗತಿಕ ಶೃಂಗಸಭೆಯನ್ನು ಭಾರತ ಆಯೋಜಿಸಲಿದ್ದು,ಈ ಸಂದರ್ಭದಲ್ಲಿ ರಾಜ್ಯ ಪ್ರವಾಸೋದ್ಯಮ ಮಂತ್ರಿಗಳ ರಾಷ್ಟ್ರೀಯ ಸಮ್ಮೇಳನವೂ ಮುಖ್ಯವಾಗಿದೆ. ಭಾರತದ ಪ್ರವಾಸೋದ್ಯಮ ಸಾಮರ್ಥ್ಯವನ್ನು ಜಗತ್ತಿಗೆ ಪ್ರದರ್ಶಿಸಲು ಜಿ-20 ಅನ್ನು ವೇದಿಕೆಯಾಗಿ ಬಳಸಿಕೊಳ್ಳಲಾಗುವುದು. ವಿವಿಧ ಪ್ರವಾಸಿ ಸರ್ಕ್ಯೂಟ್ಗಳಿಗೆ ಉತ್ತೇಜನ ನೀಡಲಾಗುತ್ತಿದ್ದು, ಶೀಘ್ರದಲ್ಲಿಯೇ ‘ಅಂಬೇಡ್ಕರ್ ಸರ್ಕ್ಯೂಟ್’ ಅನ್ನು ಆರಂಭಿಸಲಾಗುವುದು. ಪ್ರವಾಸಿ ಸರ್ಕ್ಯೂಟ್ಗಳ ಉತ್ತೇಜನಕ್ಕಾಗಿ ಕ್ರಿಯಾ ಯೋಜನೆಯಡಿ ಹಿಮಾಲಯನ್ ಸರ್ಕ್ಯೂಟ್ ಅನ್ನು ಅಭಿವೃದಿಪಡಿಸಲಾಗುವುದು ಎಂದು ಸಚಿವರು ಹೇಳಿದರು.
ಅಂಬೇಡ್ಕರ್ ಸರ್ಕ್ಯೂಟ್ ವಿಶೇಷತೆ:
ಡಾ.ಬಿ.ಆರ್ ಅಂಬೇಡ್ಕರ್ ಅವರಿಗೆ ಸಂಬಂಧಪಟ್ಟ ಸ್ಥಳಗಳನ್ನು ತೀರ್ಥ ಸ್ಥಳಗಳ ರೀತಿ ರೂಪಿಸುವ ಕೇಂದ್ರ ಸರಕಾರದ ಯೋಜನೆ ಇದಾಗಿದ್ದು, ಇದು ಅಂಬೇಡ್ಕರ್ ಅವರ ಹುಟ್ಟೂರು ಮೋವ್, ಅವರು ಬೌದ್ಧ ಮತಕ್ಕೆ ಮತಾಂತರಗೊಂಡ ನಾಗಪುರ, ಅವರ ಕೊನೆಯ ದಿನಗಳಲ್ಲಿ ವಾಸವಿದ್ದ ದೆಹಲಿಯ 26 ಅಲಿಪುರ್ ರಸ್ತೆ ಮತ್ತು ಅವರ ಅಂತ್ಯಕ್ರಿಯೆ ನಡೆಸಲಾದ ಮಹಾರಾಷ್ಟ್ರದ ದಾದರ್ ಮುಂತಾದ ಸ್ಥಳಗಳನ್ನು ವಿಶ್ವದರ್ಜೆಯ ಪ್ರವಾಸಿ ಸ್ಥಳಗಳನ್ನಾಗಿ ಮಾರ್ಪಡಿಸಲಿದೆ. ಈ ಸ್ಥಳಗಳಲ್ಲಿನ ಸ್ಮಾರಕಗಳ ಸುತ್ತಲೂ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವ ಮೂಲಕ ಪ್ರವಾಸಿಗರ ಭೇಟಿಗೆ ಅನುಕೂಲ ಕಲ್ಪಿಸುವ ಯೋಚನೆ ಸರಕಾರಕ್ಕಿದೆ.
ಏಪ್ರಿಲ್ 14 ರಂದು ಅಂಬೇಡ್ಕರ್ ಅವರ ಜನ್ಮದಿನದಂದು ಪ್ರಧಾನಿ ಮೋದಿಯವರು ಮೋವ್ನಲ್ಲಿ ಅಂಬೇಡ್ಕರ್ ಸರ್ಕ್ಯೂಟ್ ಅನ್ನು ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿದೆ.