ಮೂರು ವರ್ಷದಲ್ಲಿ ಮಾಧ್ಯಮಗಳ ಜಾಹೀರಾತಿಗಾಗಿ ₹1700 ಕೋಟಿ ಖರ್ಚು ಮಾಡಿದ ಕೇಂದ್ರ ಸರ್ಕಾರ

ನವದೆಹಲಿ: ಕಳೆದ ಮೂರು ವರ್ಷದಲ್ಲಿ ಕೇಂದ್ರ ಸರ್ಕಾರವು ಜಾಹೀರಾತಿಗಾಗಿ ಬರೋಬ್ಬರಿ ₹1700 ಕೋಟಿ ಖರ್ಚು ಮಾಡಿದೆ.

ಈ ಬಗ್ಗೆ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಮಂಗಳವಾರ ಮಾಹಿತಿ ನೀಡಿದ್ದು, ಮುದ್ರಣ, ಎಲೆಕ್ಟ್ರಾನಿಕ್ ಮತ್ತು ಹೊರಾಂಗಣ ಜಾಹೀರಾತುಗಳಿಗಾಗಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ₹1700 ಕೋಟಿ ಖರ್ಚು ಮಾಡಿದೆ ಎಂದು ಹೇಳಿದೆ.

ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್, 2018-19 ರಿಂದ 2020-21 ರ ಅವಧಿಯಲ್ಲಿ ಸರ್ಕಾರವು ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನೀಡಿದ ಜಾಹೀರಾತುಗಳಿಗಾಗಿ ₹1,700 ಕೋಟಿ ಖರ್ಚು ಮಾಡಿದೆ ಎಂದು ತಿಳಿಸಿದರು.

ಸರ್ಕಾರದ ನೀತಿಗಳು ಮತ್ತು ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡಲಾಗಿತ್ತು ಎಂದು ಹೇಳಿದ್ದಾರೆ.

ಪತ್ರಿಕೆಗಳಲ್ಲಿನ ಜಾಹೀರಾತುಗಳಿಗಾಗಿ ಸರ್ಕಾರವು ಒಟ್ಟು ₹826.5 ಕೋಟಿ ಖರ್ಚು ಮಾಡಿದೆ. 2020-21ರಲ್ಲಿ 6,085 ಪತ್ರಿಕೆಗಳಲ್ಲಿ ಪ್ರಕಟವಾದ ಜಾಹೀರಾತುಗಳಿಗಾಗಿ ₹118.59 ಕೋಟಿ, 2019-20ರಲ್ಲಿ 5,365 ಪತ್ರಿಕೆಗಳ ಜಾಹೀರಾತಿಗೆ ₹200 ಕೋಟಿ ಮತ್ತು 2018-19ರಲ್ಲಿ 6,119 ಪತ್ರಿಕೆಗಳ ಜಾಹೀರಾತುಗಳಿಗಾಗಿ ₹507.9 ಕೋಟಿ ಖರ್ಚಾಗಿರುವುದು ಸಚಿವಾಲಯವು ಹಂಚಿಕೊಂಡ ಅಂಕಿಅಂಶಗಳಿಂದ ತಿಳಿದು ಬಂದಿದೆ.

ವಿದ್ಯುನ್ಮಾನ ಮಾಧ್ಯಮಗಳಲ್ಲಿನ ಜಾಹೀರಾತುಗಳಿಗಾಗಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಒಟ್ಟು ₹193.52 ಕೋಟಿ ವ್ಯಯಿಸಿದೆ.