ಕೇಂದ್ರ ಸಂಪುಟ ಪುನರ್ ರಚನೆ: ಶೋಭಾ ಕರಂದ್ಲಾಜೆ, ಶಿವಕುಮಾರ್ ಉದಾಸಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆ?.

ಉಡುಪಿ: ಕೇಂದ್ರ ಸಚಿವ ಸಂಪುಟಕ್ಕೆ ಶೀಘ್ರದಲ್ಲೇ ಸರ್ಜರಿ ನಡೆಯಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗೆ ಕರ್ನಾಟಕದ ಇಬ್ಬರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಸುದ್ದಿ ಕೂಡ ಕೇಳಿಬಂದಿದೆ.

ಉಡುಪಿ- ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ, ಹಾವೇರಿ-ಗದಗ ಸಂಸದ ಶಿವಕುಮಾರ್ ಉದಾಸಿ ಹಾಗೂ ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರ ಹೆಸರು ಸಹ ಸಂಭಾವ್ಯರ ಪಟ್ಟಿಯಲ್ಲಿದೆ ಎನ್ನಲಾಗಿದೆ.

ನಾಲ್ಕು ಬಾರಿಯ ಸಂಸದ  ಅಂಗಡಿ ಅವರು ಸುಮಾರು 16 ತಿಂಗಳು ಕೇಂದ್ರ ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಕೋವಿಡ್ ನಿಂದಾಗಿ ನಿಧನರಾದರು. ಉಪಚುನಾವಣೆಯಲ್ಲಿ ಅವರ ಪತ್ನಿ ಮಂಗಳಾ ಅಂಗಡಿ ಬೆಳಗಾವಿ ಸಂಸದೆಯಾಗಿ ಆಯ್ಕೆಯಾದರು. ಅಂಗಡಿ ನಿಧನದಿಂದ ತೆರವಾಗಿರುವ ಸಚಿವ ಸ್ಥಾನವನ್ನು ಯಾರಿಗೆ ಕೊಡುತ್ತಾರೆ ಎಂಬ ನಿರೀಕ್ಷೆ ಕೂಡ ಬಹಳಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಉತ್ತರ ಕರ್ನಾಟಕದ ಲಿಂಗಾಯತ ಮುಖಂಡ ಶಿವಕುಮಾರ್ ಉದಾಸಿ ಅವರು ಸಹ ಸಚಿವರಾಗುವ ಭರವಸೆಯ ನಾಯಕರಲ್ಲಿ ಒಬ್ಬರು. ಉದಾಸಿ ಅವರ ತಂದೆ ಹಾನಗಲ್ ಶಾಸಕ  ಸಿಎಂ ಉದಾಸಿ ಇತ್ತೀಚೆಗೆ ನಿಧನರಾದರು. ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರ ತಂದೆ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಆಗಿರುವುದರಿಂದ ಅವರು ಸಚಿವರಾಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಸಂಪುಟದಲ್ಲಿ ದಲಿತರಿಗೆ ಸ್ಥಾನ ಸಿಗಬಹುದೆಂಬ ಊಹಾಪೂಹದೊಡನೆ ರಾಜಕೀಯ ದೈತ್ಯ ಮಲ್ಲಿಕಾರ್ಜುನ್ ಖರ್ಗೆ ಅವರನ್ನು ಸೋಲಿಸಿದ ಕಲಬುರಗಿ ಸಂಸದ ದ ಡಾ. ಉಮೇಶ್ ಜಾಧವ್ ಹಾಗೂ ಚಿತ್ರದುರ್ಗ ಸಂಸದ ಎ ನಾರಾಯಣಸ್ವಾಮಿ ಅವರ ಹೆಸರು ಕೂಡ ಮುನ್ನಲೆಗೆ ಬಂದಿದೆ. ಆದರೆ ಯಾರಿಗೆ ಸಂಪುಟ ಸೇರುವ ಅವಕಾಶ ಲಭಿಸುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.