ಜುಲೈ 1ರಿಂದ 15ರ ವರೆಗೆ ನಡೆಯುತ್ತೆ ಸಿಬಿಎಸ್‌ಇ ಪರೀಕ್ಷೆ: ಇಲ್ಲಿದೆ ವೇಳಾಪಟ್ಟಿ

ನವದೆಹಲಿ: ಸಿಬಿಎಸ್‌ಇಯು 10 ಮತ್ತು 12ನೇ ತರಗತಿಯ ಬಾಕಿ ಇರುವ ಪರೀಕ್ಷೆಗಳ ವೇಳಾಪಟ್ಟಿಯನ್ನು ಸೋಮವಾರ ಪ್ರಕಟಿಸಿದೆ. ಜುಲೈ 1ರಿಂದ 15ರ ವರೆಗೆ ಪರೀಕ್ಷೆಗಳು ನಡೆಯಲಿವೆ.
ಕೊರೊನಾ ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಮಾರ್ಚ್‌ 25ರಿಂದ ದೇಶದಾದ್ಯಂತ ಲಾಕ್‌ಡೌನ್ ಘೋಷಿಸಿದ್ದ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡಲ್ಪಟ್ಟಿತ್ತು.
10ನೇ ತರಗತಿ ಪರೀಕ್ಷೆಗೆ ಜುಲೈ 1ರಿಂದ ಮೊದಲುಗೊಂಡು ನಾಲ್ಕು ದಿನಾಂಕ ನಿಗದಿಪಡಿಸಲಾಗಿದೆ. ಮೊದಲ ಪರೀಕ್ಷೆ ಸಮಾಜ ವಿಜ್ಞಾನ ವಿಷಯದ್ದಾಗಿರಲಿದೆ. ಮರುದಿನ ವಿಜ್ಞಾನ ಪರೀಕ್ಷೆ ನಡೆಯಲಿದೆ ಎಂದು ಸಿಬಿಎಸ್‌ಇ ಪರೀಕ್ಷಾ ನಿಯಂತ್ರಕ ಸಂಯಮ್ ಭಾರದ್ವಾಜ್ ತಿಳಿಸಿದ್ದಾರೆ.
ಜುಲೈ 10ರಂದು ಹಿಂದಿ ಭಾಷೆಯ ಉಭಯ ಕೋರ್ಸ್‌ಗಳಿಗೆ ಮತ್ತು 15ರಂದು ಇಂಗ್ಲಿಷ್ ಭಾಷೆಯ ಉಭಯ ಕೋರ್ಸ್‌ಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ.
ಏನೇನು ಕ್ರಮ:?
ಪರೀಕ್ಷಾ ಕೇಂದ್ರಕ್ಕೆ ಬರುವಾಗ ವಿದ್ಯಾರ್ಥಿಗಳು ಮಾಸ್ಕ್‌ ಧರಿಸಿಕೊಂಡೇ ಬರಬೇಕು. ಸ್ಯಾನಿಟೈಸರ್‌ಗಳನ್ನು ಅವರೇ ತರಬೇಕು
ಮಕ್ಕಳು ಅನಾರೋಗ್ಯಪೀಡಿತರಲ್ಲ ಎಂಬುದನ್ನು ಪಾಲಕರು ದೃಢಪಡಿಸಬೇಕು. ವಿದ್ಯಾರ್ಥಿಗಳು ಕಡ್ಡಾಯವಾಗಿ ಅಂತರ ಕಾಯ್ದುಕೊಳ್ಳಬೇಕು’ ಎಂದವರು ಹೇಳಿದ್ದಾರೆ.
ಜುಲೈ 1ರಂದು 12ನೇ ತರಗತಿಯವರಿಗೆ ಹೋಮ್ ಸೈನ್ಸಸ್ ಹಾಗೂ ಮರುದಿನ ಹಿಂದಿ ಭಾಷೆಯ ಉಭಯ ಕೋರ್ಸ್‌ಗಳಿಗೆ ಪರೀಕ್ಷೆ ನಡೆಯಲಿದೆ.
ಜುಲೈ 9ರಂದು 12ನೇ ತರಗತಿಯವರಿಗೆ ಬ್ಯುಸಿನೆಸ್ ಸ್ಟಡೀಸ್, ಜುಲೈ 10ರಂದು ಬಯೋಟೆಕ್ನಾಲಜಿ ಮತ್ತು ಜುಲೈ 11ರಂದು ಜಿಯೋಗ್ರಫಿ ವಿಷಯಗಳ ಪರೀಕ್ಷೆ ನಡೆಯಲಿವೆ ಎಂದವರು ಮಾಹಿತಿ ನೀಡಿದರು.