ಉಡುಪಿ: ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ಬಂದ ಇಬ್ಬರು ದುಷ್ಕರ್ಮಿಗಳು ವ್ಯಕ್ತಿಯೊಬ್ಬರ ಗಮನವನ್ನು ಬೇರೆಡೆಗೆ ಸೆಳೆದು ಅವರ ಗುತ್ತಿಗೆಯಲ್ಲಿದ್ದ 50 ಸಾವಿರ ಮೌಲ್ಯದ 24 ಗ್ರಾಂ ನ ಚಿನ್ನದ ಚೈನ್ ಅನ್ನು ಲೂಟಿ ಮಾಡಿದ ಘಟನೆ ಮಂಗಳವಾರ ಬೆಳಗ್ಗೆ ಅಂಬಾಗಿಲು ಜಂಕ್ಷನ್ ನ ಮೀನುಮಾರುಕಟ್ಟೆಯ ಬಳಿ ನಡೆದಿದೆ.
ಚಿನ್ನದ ಚೈನ್ ಕಳೆದುಕೊಂಡವರನ್ನು ತಾಂಗದಡಿ ಮಾಂಡವಿ ಪ್ರಿನ್ಸ್ ಪ್ಯಾಲೇಸ್ ನಿವಾಸಿ ವೆಂಕಟರಮಣ್ಣ ಆಚಾರ್ಯ (68) ಎಂದು ಗುರುತಿಸಲಾಗಿದೆ. ಅವರು ಇಂದು ಬೆಳಗ್ಗೆ 8.45 ಸುಮಾರಿಗೆ ಹೂವು ತರಲೆಂದು ಅಂಬಾಗಿಲು ಜಂಕ್ಷನ್ ಕಡೆಗೆ ನಡೆದುಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಬೈಕ್ ನಲ್ಲಿ ಬಂದ ವ್ಯಕ್ತಿಯೊಬ್ಬ ಹಿಂದಿ ಭಾಷೆಯಲ್ಲಿ ‘ನಿಮ್ಮನ್ನು ಸಾಬ್ ಬುಲಾರಹಯೇ’ (ನಿಮ್ಮನ್ನು ಸಾಹೇಬರು ಕರೆಯುತ್ತಿದ್ದಾರೆ) ಎಂದು ಒಬ್ಬ ವ್ಯಕ್ತಿಯನ್ನು ತೋರಿಸಿ ಹೇಳಿದ್ದಾನೆ. ನಂತರ ಆ ವ್ಯಕ್ತಿಯ ಬಳಿ ಕರೆದುಕೊಂಡು ಹೋದಾಗ ಆತನು, ‘ಇಲ್ಲಿ ಗಲಾಟೆ ಆಗಿದೆ ನಿನಗೆ ಗೊತ್ತಿಲ್ಲವಾ ಎಂದು ಪ್ರಶ್ನಿಸಿದ್ದಾನೆ. ಬಳಿಕ ಕರೆದುಕೊಂಡು ಹೋದ ವ್ಯಕ್ತಿಯು ಬಂದು ವೆಂಕಟರಮಣ್ಣ ಆಚಾರ್ಯ ಅವರನ್ನು ತಪಾಸಣೆ ಮಾಡಿ, ಅವರ ಜೇಬಿನಲ್ಲಿದ್ದ ಕರವಸ್ತ್ರವನ್ನು ಹೊರತೆಗೆದು ಅದರಲ್ಲಿ ಕೈಯಲ್ಲಿದ್ದ ವಾಚ್, ಅಂಗಿಯ ಕಿಸೆಯಲ್ಲಿದ್ದ 1 ಸಾವಿರ ನಗದು ಹಾಗೂ ಕುತ್ತಿಗೆಯಲ್ಲಿದ್ದ ಚೈನ್ ಅನ್ನು ಇಟ್ಟು ಕಟ್ಟಿದ್ದಾನೆ. ಬಳಿಕ ಕಟ್ಟಿದ ಗಂಟನ್ನು ವೆಂಕಟರಮಣ್ಣ ಆಚಾರ್ಯ ಅವರಿಗೆ ನೀಡಿದ್ದಾನೆ. ವೆಂಕಟರಮಣ್ಣ ಸ್ವಲ್ಪ ಮುಂದೆ ಹೋಗಿ ಗಂಟನ್ನು ಬಿಚ್ಚಿ ಪರಿಶೀಲಿಸಿದಾಗ ಅದರಲ್ಲಿ ವಾಚ್ ಮತ್ತು 1 ಸಾವಿರ ನಗದು ಮಾತ್ರ ಇದ್ದು, ಚಿನ್ನದ ಚೈನ್ ಅನ್ನು ಆ ವ್ಯಕ್ತಿಗಳು ದೋಚಿರುವುದು ಗೊತ್ತಾಗುತ್ತದೆ. ತಕ್ಷಣ ಹಿಂದಿರುಗಿ ನೋಡುವಷ್ಟರಲ್ಲಿ ಅವರು ಬೈಕ್ ನಲ್ಲಿ ಪರಾರಿಯಾಗಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ. ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.