ಚಿಕ್ಕಮಗಳೂರು: ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತ ಶ್ರೇಣಿ ವ್ಯಾಪ್ತಿಯಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಬಾಲಕಿ ಶ್ರೀನಂದಾ (15) ಪ್ರಕರಣಕ್ಕೆ ಮರಣೋತ್ತರ ಪರೀಕ್ಷೆ ಮಹತ್ವದ ತಿರುವು ನೀಡಿದೆ. ವರದಿ ಪ್ರಕಾರ, ಬಾಲಕಿಯ ಸಾವಿನಲ್ಲಿ ಯಾವುದೇ ಅಸಹಜತೆ ಕಂಡುಬಂದಿಲ್ಲವೆಂದು ವೈದ್ಯರು ಸ್ಪಷ್ಟಪಡಿಸಿದ್ದಾರೆ.
ಮರಣೋತ್ತರ ಪರೀಕ್ಷೆಯಲ್ಲಿ ತಲೆಯ ಬಲಭಾಗಕ್ಕೆ ಉಂಟಾದ ಗಂಭೀರ ಗಾಯವೇ ಸಾವಿಗೆ ಕಾರಣವೆಂದು ತಿಳಿದುಬಂದಿದೆ. ದೇಹದ ವಿವಿಧ ಭಾಗಗಳಲ್ಲಿ ಗಾಯಗಳು ಹಾಗೂ ಹಲವೆಡೆ ಮೂಳೆ ಮುರಿತಗಳೂ ಪತ್ತೆಯಾಗಿದ್ದು, ಇವು ಎತ್ತರದಿಂದ ಬಿದ್ದ ಪರಿಣಾಮ ಸಂಭವಿಸಿರುವುದಾಗಿ ವರದಿ ಹೇಳಿದೆ.
ಬಾಲಕಿ ಶವವು ಬಾಬಾ ಬುಡನ್‌ಗಿರಿ ಸಮೀಪ ಸುಮಾರು 2000 ಅಡಿ ಆಳದ ಪ್ರದೇಶದಲ್ಲಿ ಪತ್ತೆಯಾಗಿತ್ತು. ಪ್ರಾಥಮಿಕವಾಗಿ ಪೊಲೀಸರು ಇದನ್ನು ಪ್ರಪಾತದಿಂದ ಬಿದ್ದ ಅಪಘಾತ ಎಂದು ಶಂಕಿಸಿದ್ದಾರೆ.
ಈ ನಡುವೆ, ಘಟನೆಗೆ ಮುನ್ನ ಶ್ರೀನಂದಾ ಸುಮಾರು 17 ನಿಮಿಷಗಳ ಕಾಲ ಫೋನ್‌ನಲ್ಲಿ ಮಾತನಾಡಿದ್ದಾಳೆಂಬ ಮಾಹಿತಿ ಲಭ್ಯವಾಗಿದೆ. ಅದರಲ್ಲಿ ಬಹುಪಾಲು ಸಮಯ ಸ್ನೇಹಿತೆಯೊಂದಿಗಿನ ಮಾತುಕತೆ ನಡೆದಿದ್ದು, ಈ ವೇಳೆ ಏನಾದರೂ ಮನಸ್ತಾಪ ಉಂಟಾಗಿತ್ತೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
ಶ್ರೀನಂದಾ ಕುಟುಂಬದವರು ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಪೊಲೀಸರು ಎಲ್ಲಾ ಆಯಾಮಗಳಿಂದ ತನಿಖೆ ಮುಂದುವರೆಸಿದ್ದಾರೆ.

















