ಬೆಕ್ಕುಗಳ ಚೆಲ್ಲಾಟ; ಮನೆಯವರಿಗೆ ಪ್ರಾಣಸಂಕಟ- ಪೊಲೀಸರ ಚಾಣಾಕ್ಷತೆಯಿಂದ ಪ್ರಕರಣ ಸುಖಾಂತ್ಯ

ಬೆಂಗಳೂರು: ಎರಡು ಸಾಕು ಬೆಕ್ಕುಗಳ ‘ಪ್ರೇಮ ಕಥೆ’ ಎರಡು ಕುಟುಂಬಗಳ ನಡುವೆ ಭಾರೀ ಜಗಳಕ್ಕೆ ಕಾರಣವಾದ ವಿಚಿತ್ರ ಘಟನೆ ನಗರದಲ್ಲಿ ನಡೆದಿದೆ. ನೆರೆಹೊರೆ ಮನೆಯ ಹೆಣ್ಣು ಹಾಗೂ ಗಂಡು ಬೆಕ್ಕುಗಳ ಸಂಪರ್ಕದಿಂದ ನಾಲ್ಕು ಮುದ್ದಾದ ಮರಿಗಳಿಗೆ ಜನ್ಮವಾಗಿದ್ದು, ಇದೇ ವಿಚಾರವಾಗಿ ಕುಟುಂಬಗಳ ನಡುವೆ ತೀವ್ರ ವಾಗ್ವಾದ ಉಂಟಾಗಿದೆ.

ಹೆಣ್ಣು ಬೆಕ್ಕಿನ ಮಾಲೀಕರು, “ನಮ್ಮ ಬೆಕ್ಕು ಮರಿ ಹಾಕಲು ನಿಮ್ಮ ಬೆಕ್ಕೇ ಕಾರಣ, ಹೀಗಾಗಿ ಎಲ್ಲಾ ಮರಿಗಳನ್ನೂ ನೀವು ಸಾಕಬೇಕು” ಎಂದು ಆಗ್ರಹಿಸಿದ್ದು, ಈ ವಿಚಾರದಿಂದ ಮಾತಿಗೆ ಮಾತು ಬೆಳೆದು ಗಲಾಟೆ ತಾರಕಕ್ಕೇರಿತು. ಪರಿಸ್ಥಿತಿ ಮತ್ತಷ್ಟು ಉದ್ವಿಗ್ನಗೊಂಡು, ಬೆದರಿಕೆ ಮಾತುಗಳಿಗೂ ತಲುಪಿದ ಪರಿಣಾಮ, ಗಂಡು ಬೆಕ್ಕಿನ ಮನೆಯವರು ತಕ್ಷಣವೇ 112 ಗೆ ಕರೆ ಮಾಡಿ ಪೊಲೀಸರನ್ನು ಸ್ಥಳಕ್ಕೆ ಕರೆದಿದ್ದಾರೆ.

ಚಾಣಾಕ್ಷತನ ಮೆರೆದ ಪೋಲಿಸರು

ಸ್ಥಳಕ್ಕೆ ಆಗಮಿಸಿದ ಪೊಲೀಸರು ಎರಡೂ ಕುಟುಂಬಗಳನ್ನೂ ಸಮಾಧಾನಪಡಿಸಿ, ಜಗಳವನ್ನು ಶಮನಗೊಳಿಸಿದ್ದಾರೆ. ಬಳಿಕ ಸಮಸ್ಯೆಗೆ ವಿಭಿನ್ನ ಪರಿಹಾರ ಕಂಡುಹಿಡಿದ ಪೊಲೀಸರು, ನಾಲ್ಕು ಬೆಕ್ಕುಮರಿಗಳಲ್ಲಿ ಎರಡೆರಡು ಮರಿಗಳನ್ನು ಎರಡು ಕುಟುಂಬಗಳಿಗೆ ಹಂಚಿಕೆ ಮಾಡುವ ಮೂಲಕ ವಿವಾದಕ್ಕೆ ತೆರೆ ಎಳೆದಿದ್ದಾರೆ.

ಒಟ್ಟಾರೆ, ಬೆಕ್ಕುಗಳ ಸರಸ ಸಲ್ಲಾಪದಿಂದ ಉಂಟಾದ ಜಗಳವನ್ನು ಪೊಲೀಸರು ಜಾಣ್ಮೆಯಿಂದ ಬಗೆಹರಿಸಿ, ನೆರೆಹೊರೆಯಲ್ಲಿದ್ದ ಉದ್ವಿಗ್ನತೆಯನ್ನು ಶಮನಗೊಳಿಸಿದ್ದಾರೆ.