ಮಾಸ್ಕ್ ಧರಿಸದವರ ವಿರುದ್ಧ ಪ್ರಕರಣ ದಾಖಲು: ಡಿಸಿ ಎಚ್ಚರಿಕೆ

ಉಡುಪಿ: ಕೋವಿಡ್ ಎರಡನೇ ಅಲೆಯು ಆರಂಭವಾಗಿದ್ದು, ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್ ಧರಿಸುವುದು, ಸುರಕ್ಷಿತ ಅಂತರವನ್ನು ಕಡ್ಡಾಯವಾಗಿ ಪಾಲಿಸಬೇಕು. ಸುರಕ್ಷತಾ ನಿಯಮಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸುವುದರ ಜೊತೆಗೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಎಚ್ಚರಿಕೆ ನೀಡಿದ್ದಾರೆ.

ಅಜ್ಜರಕಾಡು ಜಿಲ್ಲಾ ಆಸ್ಪತ್ರೆಯಲ್ಲಿ ಮಂಗಳವಾರ ಅವರು ಎರಡನೇ ಹಂತದ ಕೋವಿಡ್ ಲಸಿಕೆ ಪಡೆದು ಮಾತನಾಡಿದರು.
ಸಾರ್ವಜನಿಕರು ಜಾಗೃತರಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಾಪಿಂಗ್ ಮಾಲ್‌ಗಳಲ್ಲಿ, ಅಂಗಡಿಗಳಿಗೆ ತೆರಳುವ ಗ್ರಾಹಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸದೆ ಅಂಗಡಿಗೆ ಬರುವ ಸಾರ್ವಜನಿಕರ ಪ್ರವೇಶವನ್ನು ಅಂಗಡಿ ಮಾಲಕರು ನಿಷೇಧಿಸಬೇಕು. ಇಲ್ಲದಿದ್ದಲ್ಲಿ ಅಂತಹ ಅಂಗಡಿ ಮಾಲಕರ ಪರವಾನಿಗೆಯನ್ನು ರದ್ದು ಮಾಡಲಾಗುವುದು ಎಂದು ಅವರು ತಿಳಿಸಿದರು.

ಕೇರಳ ಮತ್ತು ಮಹಾರಾಷ್ಟ್ರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರು 72 ಗಂಟೆಯ ಮೊದಲಿನ ಕೊರೋನದ ನೆಗೆಟಿವ್ ವರದಿಯನ್ನು ಕಡ್ಡಾಯ ವಾಗಿ ತರಬೇಕು. ಹೊರ ರಾಜ್ಯಗಳಿಂದ ನೆಗೆಟಿವ್ ವರದಿಯನ್ನು ತಾರದೆ ಬಂದವರ ಬಗ್ಗೆ ಸಾರ್ವಜನಿಕರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ಯನ್ನು ನೀಡಬೇಕು. ಅವರಿಗೆ ತಕ್ಷಣ ಕೊರೋನ ಪರೀಕ್ಷೆಯನ್ನು ನಡೆಸಲಾಗುವುದು ಎಂದರು.

ಜನವರಿಯಲ್ಲಿ ಇದ್ದ ಶೇ. 0.5 ಪಾಸಿಟಿವ್ ಪ್ರಮಾಣವು ಈಗ ಶೇ.1.5ಕ್ಕೆ ಏರಿಕೆಯಾಗಿದೆ. ಈಗ ನಾವು ಹೆಚ್ಚಿನ ಮುನ್ನೆಚ್ಚರಿಕೆ ವಹಿಸದಿದ್ದರೆ ಮುಂದೆ  ಅಪಾಯ ಎದುರಿಸಬೇಕಾಗಬಹುದು. 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ 45ರಿಂದ 59 ವರ್ಷದೊಳಗಿನ ಇತರೆ ಕಾಯಿಲೆಗಳಿಂದ ಬಳುತ್ತಿರುವವರು ಕೊರೋನ ಲಸಿಕೆಯನ್ನು ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಲಸಿಕೆಯನ್ನು ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುವುದು ಎಂದು ಅವರು ಹೇಳಿದರು.