ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಗೆ ಸಜ್ಜಾದ ಕಾರವಾನ್ ಮಾದರಿ ಕಂಟೇನರ್ ಗಳು

ನವದೆಹಲಿ: ರಾಹುಲ್ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತ್ ಜೋಡೋ ಯಾತ್ರೆಯನ್ನು ಆರಂಭಿಸಿದ್ದು, ಇದಕ್ಕಾಗಿ ಕಂಟೇನರ್ ಗಳನ್ನು ಬೆಡ್ ರೂಂ ಮಾದರಿ ವಿನ್ಯಾಸಗೊಳಿಸಲಾಗಿದೆ. ಈ ಎಲ್ಲಾ ಕಂಟೆನರ್ ಗಳನ್ನು ಹಗಲು ಹೊತ್ತಿನಲ್ಲಿ ಒಂದೆಡೆ ನಿಲ್ಲಿಸಲಾಗುತ್ತದೆ. ಈ ಹೊತ್ತಿನಲ್ಲಿ ಇದೊಂದು ಸಣ್ಣ ಹಳ್ಳಿಯಂತೆ ಕಾಣುತ್ತದೆ. ಸುಮಾರು 60 ಟ್ರಕ್ ಗೆ ಆರೋಹಿಸಲಾದ ಕಂಟೈನರ್ ವ್ಯಾನ್‌ಗಳು ಹವಾನಿಯಂತ್ರಿತ ಮಲಗುವ ಕೋಣೆಗಳಾಗಿ ಮಾರ್ಪಟ್ಟಿವೆ. ಮುಂದಿನ ಐದು ತಿಂಗಳವರೆಗಿನ ರಾಹುಲ್ ಗಾಂಧಿ ಯಾತ್ರೆಯಲ್ಲಿ ಇವು ಭಾರತದಾದ್ಯಂತ ಚಲಿಸಲಿವೆ.

Image

ಕಂಟೈನರ್‌ಗಳನ್ನು ಅದರಲ್ಲಿರುವ ಹಾಸಿಗೆಗಳ ಸಂಖ್ಯೆಯನ್ನು ಅವಲಂಬಿಸಿ ಬಣ್ಣ-ಆಧಾರಿತ ವಲಯಗಳಲ್ಲಿ ನಿಲುಗಡೆ ಮಾಡಲಾಗುತ್ತದೆ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಜೊತೆಯಲ್ಲಿ ಪಯಣಿಸುವ 120 ಮಂದಿ ಕಾರ್ಯಕರ್ತರಿಗೆ ಉಳಕೊಳ್ಳುವ ಕಂಟೇನರ್ ಗಳ ಜೊತೆಗೆ ಮಿನಿ ಕಾನ್ಫರೆನ್ಸ್ ಹಾಲ್ ಆಗಿ ಮಾರ್ಪಟ್ಟಿರುವ ಕಂಟೇನರ್ ಕೂಡಾ ಇದೆ.

ಹಳದಿ ವಲಯದಲ್ಲಿರುವ ಕಂಟೇನರ್ ಗಳು ಒಂದು ಮಂಚ, ಒಂದು ಸೋಫಾ ಮತ್ತು ಸ್ನಾನಗೃಹವನ್ನು ಹೊಂದಿದೆ. ರಾಹುಲ್ ಕಂಟೈನರ್ ನಂಬರ್ 1ರಲ್ಲಿ ತಂಗಿದ್ದಾರೆ. ನೀಲಿ ವಲಯದ ಕಂಟೇನರ್‌ಗಳು ಪ್ರತಿ ಎರಡು ಹಾಸಿಗೆಗಳನ್ನು ಹೊಂದಿದ್ದು, ಒಂದು ಸ್ನಾನಗೃಹವಿದೆ. ಕೆಂಪು ಮತ್ತು ಕಿತ್ತಳೆ ವಲಯದ ಕಂಟೇನರ್‌ಗಳು ಸ್ನಾನಗೃಹ ಸೌಲಭ್ಯವಿಲ್ಲದೆ ನಾಲ್ಕು ಜನರು ಉಳಕೊಳ್ಳುವ ವ್ಯವಸ್ಥೆ ಹೊಂದಿದೆ. ಗುಲಾಬಿ ವಲಯವು ಮಹಿಳಾ ಯಾತ್ರಿಗಳಿಗೆ ಮೀಸಲಾಗಿದ್ದು, ನಾಲ್ಕು ಹಾಸಿಗೆಗಳನ್ನು ಮತ್ತು ಸ್ನಾನಗೃಹವನ್ನು ಹೊಂದಿದೆ. ಮಂಚಗಳೊಳಗೆ ವಸ್ತುಗಳನ್ನು ಶೇಖರಿಸುವ ವ್ಯವಸ್ಥೆ ಇದೆ.

ಸಾರ್ವಜನಿಕ ಶೌಚಾಲಯಗಳಾಗಿ ಮಾರ್ಪಡಿಸಿದ ಕಂಟೈನರ್‌ಗಳನ್ನು ‘ಟಿ’ ಎಂದು ಗುರುತಿಸಲಾಗಿದೆ. ಒಟ್ಟು ಏಳು ಶೌಚಾಲಯಗಳಿದ್ದು, ಐದು ಪುರುಷರಿಗೆ ಮತ್ತು ಎರಡು ಮಹಿಳೆಯರಿಗೆ ಮೀಸಲಿದೆ. ಪ್ರತಿ ಕ್ಯಾಂಪ್ ಸೈಟ್ ಕೂಡ ಗೊತ್ತುಪಡಿಸಿದ ಸಾಮಾನ್ಯ ಊಟದ ಪ್ರದೇಶವನ್ನು ಹೊಂದಿದೆ.

ಕಂಟೇನರ್ ಗಳನ್ನು ಸ್ವಚ್ಛಗೊಳಿಸಲು ಮತ್ತು ಕಾಂಗ್ರೆಸ್ ನಾಯಕರ ಬಟ್ಟೆಗಳನ್ನು ಸ್ವಚ್ಛಗೊಳಿಸಲು ಮನೆಗೆಲಸದ ತಂಡಗಳ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್  ವರದಿ ಮಾಡಿದೆ.

ಚಿತ್ರಕೃಪೆ: ಇಂಟರ್ನೆಟ್

ವಿಡಿಯೋ: ಟ್ವಿಟರ್