ಕಾರ್ಕಳ: ಹೆಬ್ರಿ ತಾಲೂಕು ಕಾರ್ಕಳ ತಾಲೂಕಿನಿಂದ ಬೇರ್ಪಟ್ಟು ಪೂರ್ಣ ಪ್ರಮಾಣದ ತಾಲೂಕಾಗಿ ಘೋಷಣೆ ಆಗಿ ವರ್ಷಗಳಾದರೂ ಇಷ್ಟರವರೆಗೆ ಹೋಬಳಿ ಘೋಷಣೆ ಆಗದೇ ಇರುವುದರಿಂದ ಹಲವಾರು ಆಡಳಿತಾತ್ಮಕ ಸಮಸ್ಯೆಗಳು ತಲೆದೋರುತ್ತಿದ್ದು, ಈ ನಿಟ್ಟಿನಲ್ಲಿ ಕಾರ್ಕಳ ವಿಧಾನಸಭಾ ಸದಸ್ಯರು, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವರ ಸತತ ಪ್ರಯತ್ನದಿಂದಾಗಿ ಹೆಬ್ರಿ ಹೋಬಳಿ ರಚನೆ ಮಾಡುವ ಬಗ್ಗೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಆಗಿರುತ್ತದೆ.
ಹೆಬ್ರಿ ತಾಲೂಕು ರಚನೆಗೊಂಡು ತಾಲೂಕು ಕಛೇರಿ ಆರಂಭ ಆಗಿದ್ದರೂ ತಾಲೂಕಿನ ಹೆಚ್ಚಿನ ಗ್ರಾಮಗಳು ಅಜೆಕಾರು ಹೋಬಳಿಗೆ ಒಳಗೊಂಡಿತ್ತು. ಹಾಗೂ ಹೆಬ್ರಿ ತಾಲೂಕಿನ ಸಾರ್ವಜನಿಕರು ಕಂದಾಯ ಇಲಾಖೆಯ ಸೇವೆ ಪಡೆಯಲು ಅಜೆಕಾರು ನಾಡ ಕಛೇರಿಗೆ ಬಂದು ಅರ್ಜಿ ಸಲ್ಲಿಸಬೇಕಾಗಿತ್ತು. ಇದರಿಂದ ಸಾರ್ವಜನಿಕರಿಗೆ ತುಂಬಾ ತೊಂದರೆಯಾಗುತ್ತಿತ್ತು ಮತ್ತು ಎರಡೂ ಕಡೆ ಒಬ್ಬರೇ ಕಂದಾಯ ನಿರೀಕ್ಷಕರು ಕರ್ತವ್ಯ ನಿರ್ವಹಿಸಬೇಕಾಗಿತ್ತು.
ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಮಾನ್ಯ ಸಚಿವರಾದ ವಿ. ಸುನಿಲ್ ಕುಮಾರ್ ರವರು ಕಂದಾಯ ಸಚಿವರಾದ ಆರ್. ಅಶೋಕ್ ರವರಿಗೆ ಮನವಿ ಮಾಡಿಕೊಂಡ ಮೇರೆಗೆ ಇಂದು ನಡೆದ ಸಚಿವ ಸಂಪುಟ ಸಭೆಗೆ ಅನುಮೋದನೆಗಾಗಿ ಕಡತವನ್ನು ಇರಿಸಲಾಗಿತ್ತು.
ಹೋಬಳಿ ರಚನೆ ಬಗ್ಗೆ ಶೀಘ್ರ ಸರ್ಕಾರಿ ಆದೇಶ ಜಾರಿ ಆಗಲಿದ್ದು ತದನಂತರ ಹೆಬ್ರಿ ತಾಲೂಕು ಕೇಂದ್ರದಲ್ಲಿಯೇ ಕಂದಾಯ ಸೇವೆಗಳು ಆರಂಭವಾಗಲಿದ್ದು, ಹೆಬ್ರಿ ಕೇಂದ್ರ ಸ್ಥಾನಕ್ಕೆ ಓರ್ವ ಕಂದಾಯ ನಿರೀಕ್ಷಕರು ಹಾಗೂ ಇನ್ನಿತರ ಹುದ್ದೆಗಳು ಸೃಷ್ಠಿಯಾಗಲಿದೆ. ಇದರಿಂದ ತಾಲೂಕಿನ ಸಾರ್ವಜನಿಕರಿಗೆ ತ್ವರಿತವಾಗಿ ಮತ್ತು ನಿಗದಿತ ಕಾಲಮಿತಿಯಲ್ಲಿ ಸೇವೆಗಳನ್ನು ಪಡೆಯಲು ಅನುಕೂಲವಾಗಲಿದೆ ಎಂದು ಸಚಿವರ ಕಚೇರಿಯ ಪ್ರಕಟಣೆ ತಿಳಿಸಿದೆ.