ಎಂಥಾ ಅವಸ್ಥೆ ಮಾರ್ರೆ ಈ ರಸ್ತೆದು !   ಬೈಲೂರು- ಪಳ್ಳಿ ರಸ್ತೆ ಕಾಮಗಾರಿ ಅರ್ಧದಲ್ಲೇ ಸ್ಟಾಪ್: ಪ್ರಯಾಣಿಕರ ಬೈಗುಳ Non stop

ಕಾರ್ಕಳ: ಬೈಲೂರು ಮತ್ತು ಪಳ್ಳಿ ಗ್ರಾ.ಪಂ.ಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಮಗಾರಿ ಪ್ರಾರಂಭಗೊಂಡು ವರ್ಷ ಕಳೆದರೂ ಅರ್ಧದಷ್ಟೂ ಕಾಮಗಾರಿ ನಡೆಯದೆ ಪ್ರಯಾಣಿಕರುಸಂಕಟಪಡುತ್ತಿದ್ದಾರೆ.

ಸುಮಾರು 3.5 ಕಿ.ಮೀ. ಉದ್ದವಿರುವ ಈ ರಸ್ತೆ ಕಾಂಕ್ರಿಟೀಕರಣಕ್ಕೆ ಕೇಂದ್ರ ರಸ್ತೆನಿಧಿ ಯೋಜನೆಯ 4 ಕೋಟಿ ಅನುದಾನ ಒದಗಿಸಲಾಗಿತ್ತು. ಕುಂಟುತ್ತ ಸಾಗಿದ ಕಾಮಗಾರಿ ಈಗ ಸಂಪೂರ್ಣ ಸ್ಥಗಿತವಾಗಿದೆ. ಕಾಮಗಾರಿಗಾಗಿ ಹಿಂದಿದ್ದ ಡಾಮಾರು ರಸ್ತೆ ಅಗೆಯಲಾಗಿದ್ದು, ಈಗ ವಾಹನ ಸಂಚಾರ ದುಸ್ತರವಾಗಿದೆ.  

ಈ ರಸ್ತೆಯ ಮೂಲಕ ಪಳ್ಳಿ, ಬೆಳ್ಳೆ, ಉಡುಪಿ ಮಾರ್ಗವಾಗಿ ಬಹಳಷ್ಟು ಬಸ್ಸುಗಳು ಸೇರಿದಂತೆ ಸಾವಿರಾರು ವಾಹನಗಳು ಪ್ರತೀನಿತ್ಯ ಸಂಚರಿಸುತ್ತವೆ. ಇದೀಗ ರಸ್ತೆ ಕೆಟ್ಟಿರುವುದರಿಂದ ಹಲವು ಬಸ್‌ಗಳು ಸ್ಥಗಿತಗೊಂಡಿವೆ. ಆಟೋ ಚಾಲಕರೂ ಬಾಡಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ.  

ಶಾಪಗ್ರಸ್ತ ರಸ್ತೆ 

ಪಳ್ಳಿ ಬೈಲೂರು ರಸ್ತೆಗೆ 10 ವರ್ಷಗಳ ಹಿಂದೆ ಸಂಪೂರ್ಣ ಹದಗೆಟ್ಟಿದ್ದಾಗ ಡಾಮರೀರಣಕ್ಕೆ ಅನುದಾನ ಸಿಕ್ಕಿತ್ತು. ಆ ವೇಳೆಯೂ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದರು. ಈಗ ಇದ್ದ ರಸ್ತೆ ತೆಗೆದು ಕಾಮಗಾರಿಯೂ ನಡೆಸದೆ ಸಮಸ್ಯೆ ಉಂಟುಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿವೆ. ಈ ಹಿನ್ನೆಲೆಯಲ್ಲಿ ಕಾಮಗಾರಿ ಆರಂಭಗೊಳ್ಳದಿದ್ದರೆ ಗುತ್ತಿಗೆದಾರರ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದ್ದಾರೆ.ಸಂಬಂಧಪಟ್ಟವರಿಗೆ ಈ ರಸ್ತೆಯ ಗೋಳು, ಪ್ರಯಾಣಿಕರ ಪರದಾಟ ಇನ್ನಾದರೂ ಕಿವಿಗೆ ಕೇಳಲಿ.