ಹೃದಯ ಸ್ತಂಭನ ಸಮಯದಲ್ಲಿ ಸಿಪಿಆರ್ ನೀಡಿ ವ್ಯಕ್ತಿಯ ಜೀವ ಉಳಿಸಿ: ಸಿಪಿಆರ್ ನೀಡುವ ವಿಧಾನದ ಬಗ್ಗೆ ತಿಳಿಯಿರಿ

ಇತ್ತೀಚಿನ ದಿನಗಳಲ್ಲಿ ಹೃದಯಾಘಾತ ಮತ್ತು ಹೃದಯ ಸ್ತಂಭನಗಳು ಸಾಮಾನ್ಯವೆಂಬಂತಾಗಿದ್ದು, ಬಾಳಿ ಬದುಕಬೇಕಾಗಿರುವ ಎಳೆ ಜೀವಗಳು ತರಗೆಲೆಗಳಂತೆ ಧರೆಗುರುಳುತ್ತಿರುವ ದೃಶ್ಯಗಳು ಎಲ್ಲೆಲ್ಲೂ ಕಂಡುಬರುತ್ತಿದೆ. ಹೃದಯಾಘಾತ ಅಥವಾ ಹೃದಯಸ್ತಂಭನವಾದಾಗ ಹತ್ತಿರದಲ್ಲೇ ವ್ಯಕ್ತಿಗಳಿದ್ದರೂ ಈ ಸಂದರ್ಭದಲ್ಲಿ ಯಾವ ರೀತಿ ವರ್ತಿಸಬೇಕುನ್ನುವುದು ಬಹುತೇಕರಿಗೆ ತಿಳಿದಿರುವುದಿಲ್ಲ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಗಾಬರಿಯಾಗದೆ ಹೃದಯ ಸ್ತಂಭನವಾದ ವ್ಯಕ್ತಿಗೆ ತಕ್ಷಣ ಸಿಪಿಆರ್ ನೀಡಿದಲ್ಲಿ ವ್ಯಕ್ತಿಯ ಪ್ರಾಣ ಉಳಿಸಬಹುದು.

ಸಿಪಿಆರ್ ಎಂದರೇನು ಮತ್ತು ನಾವು ಅದನ್ನು ಯಾವಾಗ ಬಳಸಬೇಕು?

ಕಾರ್ಡಿಯೋಪಲ್ಮನರಿ ಪುನರುಜ್ಜೀವನ (ಸಿಪಿಆರ್) ಎನ್ನುವುದು ತುರ್ತು ವಿಧಾನವಾಗಿದ್ದು, ಉಸಿರಾಟ ಅಥವಾ ಹೃದಯ ಬಡಿತ ನಿಂತರೆ ವ್ಯಕ್ತಿಯ ಜೀವವನ್ನು ಉಳಿಸಲು ಇದು ಸಹಾಯ ಮಾಡುತ್ತದೆ. ಒಬ್ಬ ವ್ಯಕ್ತಿಯ ಹೃದಯವು ಬಡಿಯುವುದನ್ನು ನಿಲ್ಲಿಸಿದಾಗ, ಅವರು ಹೃದಯ ಸ್ತಂಭನಕ್ಕೊಳಗಾಗಿದ್ದಾರೆ ಎಂದರ್ಥ. ಹೃದಯ ಸ್ತಂಭನದ ಸಮಯದಲ್ಲಿ, ಹೃದಯವು ಮೆದುಳು ಮತ್ತು ಶ್ವಾಸಕೋಶಗಳು ಸೇರಿದಂತೆ ದೇಹದ ಉಳಿದ ಭಾಗಗಳಿಗೆ ರಕ್ತವನ್ನು ಪಂಪ್ ಮಾಡಲು ಸಾಧ್ಯವಿಲ್ಲ. ತಕ್ಷಣ ಚಿಕಿತ್ಸೆ ಸಿಗದಿದ್ದಲ್ಲಿ ನಿಮಿಷಗಳಲ್ಲಿ ಸಾವು ಸಂಭವಿಸಬಹುದು. ಸಿಪಿಆರ್ ಎದೆಯ ಸಂಕೋಚನವನ್ನು ಬಳಸಿ ಹೃದಯವು ಪಂಪ್ ಮಾಡುವುದನ್ನುಅನುಕರಿಸುತ್ತದೆ. ಈ ಸಂಕೋಚನಗಳು ದೇಹದಾದ್ಯಂತ ರಕ್ತ ಪುನಃ ಹರಿಯುವಂತೆ ಮಾಡುತ್ತದೆ.

Image

ಹೃದಯ ಸ್ತಂಭನ ಮತ್ತು ಹೃದಯಾಘಾತ ಬೇರೆ ಬೇರೆಯಾಗಿವೆ. ಹೃದಯಕ್ಕೆ ರಕ್ತದ ಹರಿವು ನಿರ್ಬಂಧಿಸಲ್ಪಟ್ಟಾಗ ಹೃದಯಾಘಾತ ಸಂಭವಿಸುತ್ತದೆ. ಹೃದಯಾಘಾತದಿಂದ ಬಳಲುತ್ತಿರುವ ವ್ಯಕ್ತಿಯು ಇನ್ನೂ ಮಾತನಾಡುತ್ತಿರುತ್ತಾರೆ ಮತ್ತು ಉಸಿರಾಡುತ್ತಿರುತ್ತಾರೆ. ಈ ವ್ಯಕ್ತಿಗೆ ಸಿಪಿಆರ್ ನ ಅಗತ್ಯವಿಲ್ಲದಿದ್ದರೂ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಬೇಕಾಗುತ್ತದೆ. ಹೃದಯಾಘಾತಕ್ಕೆ ತಕ್ಷಣ ಚಿಕಿತ್ಸೆ ದೊರೆಯದಿರುವುದು ಹೃದಯ ಸ್ತಂಭನವಾಗುವ ಅಪಾಯವನ್ನು ಹೆಚ್ಚಿಸುತ್ತದೆ.

ಸಿಪಿಆರ್ ಅನ್ನು ನಿರ್ವಹಿಸಲು ಔಪಚಾರಿಕ ತರಬೇತಿ ಅಗತ್ಯವಿಲ್ಲ

ಸಿಪಿಆರ್ ಅನ್ನು ನಿರ್ವಹಿಸಲು ನಿಮಗೆ ವಿಶೇಷ ಪ್ರಮಾಣೀಕರಣ ಅಥವಾ ಔಪಚಾರಿಕ ತರಬೇತಿಯ ಅಗತ್ಯವಿಲ್ಲ, ಆದರೆ ಅದರ ಬಗ್ಗೆ ಶಿಕ್ಷಣದ ಅಗತ್ಯವಿದೆ.

ಆಸುಪಾಸಿನಲ್ಲಿ ಯಾರಿಗಾದರೂ ಹೃದಯ ಸ್ತಂಭನ ಸಂಭವಿಸಿದರೆ, ಭಯಪಡಬೇಡಿ ಬದಲಿಗೆ ಅವರನ್ನು ಬದುಕಿಸಲು ಸಿದ್ಧರಾಗಿ. ಹೃದಯ ಸ್ತಂಭನವಾಗುವುದನ್ನು ನೀವು ನೋಡಿದರೆ ಈ ಹಂತಗಳನ್ನು ಅನುಸರಿಸಿ:

ಆಂಬ್ಯುಲೆನ್ಸ್ ಗೆ ಕರೆಮಾಡಿ: ಯಾರಿಗಾದರೂ ಹೃದಯ ಸ್ತಂಭನವಾಗುತ್ತಿರುವುದು ಕಂಡುಬಂದರೆ ತಕ್ಷಣ ಆಂಬ್ಯುಲೆಸ್ ಗೆ ಕರೆ ಮಾಡಿ.

ಸಿಪಿಆರ್ ನೀಡಿ: ಆಂಬ್ಯುಲೆನ್ಸ್ ಬರುವವರೆಗೆ ಅಥವಾ ಸಹಾಯ ದೊರೆಯುವವರೆಗೆ ವ್ಯಕ್ತಿಗೆ ಸಿಪಿಆರ್ ನೀಡಿ. ಒಂದು ನಿಮಿಷಕ್ಕೆ 100 ರಿಂದ 120 ಬಾರಿಯಂತೆ ಅಂಗೈಗಳನ್ನು ಎದೆಯ ಮಧ್ಯದಲ್ಲಿ ಗಟ್ಟಿಯಾಗಿ ಮತ್ತು ವೇಗವಾಗಿ ಕೆಳಗೆ ತಳ್ಳಿರಿ. ಪ್ರತಿ ತಳ್ಳುವಿಕೆಯ ನಂತರ ಎದೆಯು ತನ್ನ ಸಾಮಾನ್ಯ ಸ್ಥಿತಿಗೆ ಬರಲಿ. ಈ ವಿಧಾನದಲ್ಲಿ ಕೈಗಳ ಬಳಕೆ ಮಾತ್ರ ಇರುತ್ತದೆ ಮತ್ತು ವ್ಯಕ್ತಿಯ ಬಾಯಿಯ ಮೂಲಕ ಉಸಿರು ನೀಡುವಿಕೆ ಒಳಗೊಂಡಿರುವುದಿಲ್ಲ. ವೈದ್ಯಕೀಯ ವೃತ್ತಿಪರರು ಆಗಮಿಸುವವರೆಗೆ ಅಥವಾ ಸಿಪಿಆರ್ ತರಬೇತಿ ಹೊಂದಿರುವ ವ್ಯಕ್ತಿ ಬರುವವರೆಗೆ ಸಿಪಿಆರ್ ನೀಡುವುದನ್ನು ಮುಂದುವರಿಸಿ.

ಪ್ರತಿ ಜೀವವೂ ಅಮೂಲ್ಯವಾಗಿದ್ದು, ನಮ್ಮ ಸಮಯೋಚಿತ ಕಾರ್ಯಾಚರಣೆಯಿಂದ ಒಂದು ಜೀವವನ್ನು ಉಳಿಸಬಹುದು ಎನ್ನುವುದು ನೆನಪಿರಲಿ.

ಕೃಪೆ: ಸಿಡಿಸಿ.