ಕುಂದಾಪುರ: ಇಲ್ಲಿನ ಬುದ್ದನಜೆಡ್ಡು ಮತ್ತು ಅವಲಕ್ಕಿ ಪಾರೆ ಎಂಬಲ್ಲಿ ಪ್ರಾಗೈತಿಹಾಸಿಕ ಮಹತ್ವವುಳ್ಳ ನಂದಿಗೋಣ ನೃತ್ಯದ ಬಂಡೆಕಲೆಯನ್ನು ಎಂ.ಆರ್.ಎಸ್ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಇಲಾಖೆಯು ಕಂಡುಹಿಡಿದಿದೆ ಎಂದು ಪುರಾತತ್ವ ಶಾಸ್ತ್ರಜ್ಞ ಪ್ರೊ.ಟಿಮುರುಗೇಶಿ ತಿಳಿಸಿದ್ದಾರೆ.
ಕಲ್ಲಿನ ಮೇಲೆ ಕೆತ್ತಲಾಗಿರುವ ಈ ಚಿತ್ರದಲ್ಲಿ ನಂದಿಯೊಂದನ್ನು ಹಲಗೆ ಮೇಲೆ ಹೊತ್ತುಕೊಂಡು ಹೋಗುತ್ತಿರುವಂತೆ ಕೆತ್ತಲಾಗಿದ್ದು, ಬಹುಶಃ ಇದು ನೃತ್ಯಕಲೆಯನ್ನು ಪ್ರತಿನಿಧಿಸುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಜನಪದ ಸಂಸ್ಕೃತಿಯು ಧಾರ್ಮಿಕ ಹಾಗೆಯೇ ನಾಟಕೀಯ ಪ್ರದರ್ಶನಗಳೆರಡನ್ನೂ ಸಂಯೋಜಿಸುತ್ತದೆ. ಇದು ಕರಾವಳಿಯ ಭೂತ ಕೋಲದಲ್ಲಿ ವಿಸ್ತೃತವಾದ ನೃತ್ಯ ಪ್ರದರ್ಶನಗಳಲ್ಲಿ ಕಂಡುಬರುತ್ತದೆ. 20 ನೇ ಶತಮಾನದವರೆಗೆ ನಂದಿಗೋಣ ನೃತ್ಯವು ಕಂಡುಬರುತ್ತಿದ್ದು, ದುರದೃಷ್ಟವಶಾತ್ ಅದು ಈಗ ಅಳಿದು ಹೋಗಿದೆ. ಮರದ ಕಂಬಗಳಿರುವ ಪಲ್ಲಕ್ಕಿಯಲ್ಲಿ ನಂದಿಗೋಣ ಅಥವಾ ಗೂಳಿಯ ಪ್ರತಿಕೃತಿಯನ್ನು ಕುಳ್ಳಿರಿಸಿ ಒಯ್ಯುವ ಸಂಪ್ರದಾಯವಿತ್ತು. ಈ ನಿಟ್ಟಿನಲ್ಲಿ ಬುದ್ಧನ ಜೆಡ್ಡುವಿನ ಚಿತ್ರವು ಪ್ರಾಗೈತಿಹಾಸಿಕ ಕಾಲದ ಧಾರ್ಮಿಕ ಹಿನ್ನೆಲೆಯ ಪುರಾತನ ನಂದಿಗೋಣ ನೃತ್ಯವನ್ನು ಪ್ರತಿನಿಧಿಸುತ್ತಿರಬಹುದು ಎಂದು ಪ್ರೊ.ಟಿ ಮುರುಗೇಶಿ ಅಭಿಪ್ರಾಯಪಟ್ಟಿದ್ದಾರೆ.
ಭಾರತದಾದ್ಯಂತ ಗೂಳಿ, ನಂದಿಗೋಣ ಅಥವಾ ಹೈಗುಳಿ ಆರಾಧನೆ ಸಾಮಾನ್ಯವಾಗಿತ್ತು. ಇಂತಹ ಅಸಂಖ್ಯಾತ ಸ್ಥಳಗಳು ಭಾರತದಲ್ಲಿವೆ. ಕರಾವಳಿ ಕರ್ನಾಟಕದಲ್ಲಿ ಈ ಹಿಂದೆ ಸೋಂದಾ ಮತ್ತು ಗಾವಳಿಯಲ್ಲಿ ಬಂಡೆ ಕಲೆಗಳನ್ನು ಪತ್ತೆಹಚ್ಚಲಾಗಿತ್ತು. ಇದೀಗ ಕುಂದಾಪುರದ ಬುದ್ದನ ಜೆಡ್ದು ಮತ್ತು ಅವಲಕ್ಕಿ ಪಾರೆಯಲ್ಲಿಯೂ ಈ ರಚನೆಗಳು ಕಂಡುಬಂದಿವೆ. ಕರಾವಳಿಯ ಭೂತ ಕೋಲಗಳಲ್ಲಿ ನಂದಿಗೋಣದ ಆರಾಧನೆ ಕಂಡುಬರುತ್ತದೆ. ಇಂತಹ ಆರಾಧನೆಗಳು ಮಹಾರಾಷ್ಟ್ರ, ಗೋವಾ, ಕರ್ನಾಟಕ ಕರಾವಳಿ, ಮತ್ತು ಕೇರಳದ ಕಣ್ಣೂರಿನವರೆಗೂ ಕಂಡುಬರುತ್ತದೆ. ನಂದಿಯ ಚಿತ್ರವಿರುವ ಮುದ್ರೆಗಳು ಸಿಂಧೂ ನಾಗರಿಕತೆಯ ಬಯಲಿನಲ್ಲಿಯೂ ಕಂಡುಬಂದಿವೆ ಎಂದು ಮುರುಗೇಶಿ ತಿಳಿಸಿದ್ದಾರೆ.