ಜಿಯೋ–ಏರ್‌ಟೆಲ್‌ಗೆ ಸೆಡ್ಡು ಹೊಡೆಯಲು BSNL–Vi ಜೊತೆಯಾಟ, ನೆಟ್‌ವರ್ಕ್ ಹಂಚಿಕೆಗೆ ಮಹತ್ವದ ಹೆಜ್ಜೆ:ಸದ್ದು ಮಾಡಲಿದೆ BSNL ಮತ್ತು ವೊಡಾಫೋನ್ ಐಡಿಯಾ!

ಬೆಂಗಳೂರು: ದೇಶದ ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ ಮತ್ತು ಏರ್‌ಟೆಲ್‌ಗಳ ಪಾರುಪತ್ಯಕ್ಕೆ ಸವಾಲು ಹಾಕಲು ಬಿಎಸ್ಎನ್ಎಲ್ ಹಾಗೂ ವೊಡಾಫೋನ್ ಐಡಿಯಾ (Vi) ಹೊಸ ತಂತ್ರ ರೂಪಿಸಿವೆ. ಎರಡೂ ಸಂಸ್ಥೆಗಳು ತಮ್ಮ ನೆಟ್‌ವರ್ಕ್ ಹಾಗೂ ಮೂಲಸೌಕರ್ಯಗಳನ್ನು ಪರಸ್ಪರ ಹಂಚಿಕೊಳ್ಳಲು ಮುಂದಾಗಿದ್ದು, ಈ ಒಪ್ಪಂದ ಜಾರಿಯಾದರೆ ಗ್ರಾಹಕರಿಗೆ ನೆಟ್‌ವರ್ಕ್ ವ್ಯಾಪ್ತಿ ಹೆಚ್ಚುವ ಜತೆಗೆ ಎರಡೂ ಕಂಪನಿಗಳ ವೆಚ್ಚವೂ ತಗ್ಗಲಿದೆ.

ವೊಡಾಫೋನ್ ಐಡಿಯಾ ಸಿಇಒ ಅಭಿಜಿತ್ ಕಿಶೋರ್ ಮತ್ತು ಬಿಎಸ್ಎನ್ಎಲ್ ಸಿಎಂಡಿ ರಾಬರ್ಟ್ ಜೆ. ರವಿ ನಡುವೆ ನಡೆದ ಸಭೆಯಲ್ಲಿ ಈ ಕುರಿತು ಮಹತ್ವದ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ. ನೆಟ್‌ವರ್ಕ್ ಸಾಮರ್ಥ್ಯವನ್ನು ಒಟ್ಟಾಗಿ ಬಳಸಿಕೊಳ್ಳುವ ಮೂಲಕ ಮಾರುಕಟ್ಟೆಯಲ್ಲಿ ಮತ್ತಷ್ಟು ಬಲಿಷ್ಠವಾಗುವುದು ಎರಡೂ ಸಂಸ್ಥೆಗಳ ಉದ್ದೇಶವಾಗಿದೆ.

ಎಲ್ಲಿ ನೆಟ್‌ವರ್ಕ್ ಇಲ್ಲವೋ ಅಲ್ಲಿ ಮತ್ತೊಂದು ಕಂಪನಿ ನೆರವು

ಪ್ರಸ್ತಾವಿತ ವ್ಯವಸ್ಥೆಯಡಿ ಬಿಎಸ್ಎನ್ಎಲ್ ಮತ್ತು Vi ಗ್ರಾಹಕರು ಪರಸ್ಪರರ ನೆಟ್‌ವರ್ಕ್ ಬಳಸಿಕೊಳ್ಳಲು ಅವಕಾಶ ದೊರೆಯಲಿದೆ. ಬಿಎಸ್ಎನ್ಎಲ್ ಸೇವೆ ದುರ್ಬಲವಾಗಿರುವ ಪ್ರದೇಶದಲ್ಲಿ ಅದರ ಗ್ರಾಹಕರು Vi ನೆಟ್‌ವರ್ಕ್ ಮೂಲಕ ಸಂಪರ್ಕ ಪಡೆಯಬಹುದು. ಅದೇ ರೀತಿ Vi ವ್ಯಾಪ್ತಿ ಕಡಿಮೆ ಇರುವ ಪ್ರದೇಶಗಳಲ್ಲಿ ಅದರ ಗ್ರಾಹಕರಿಗೆ ಬಿಎಸ್ಎನ್ಎಲ್ ನೆಟ್‌ವರ್ಕ್ ನೆರವಾಗಲಿದೆ.

ಇದರಿಂದ ಪ್ರತಿಯೊಂದು ಪ್ರದೇಶದಲ್ಲೂ ಪ್ರತ್ಯೇಕವಾಗಿ ಹೊಸ ನೆಟ್‌ವರ್ಕ್ ನಿರ್ಮಿಸುವ ಅಗತ್ಯ ಕಡಿಮೆಯಾಗಲಿದೆ. ಗ್ರಾಹಕರಿಗೆ ಸಂಪರ್ಕ ಕಡಿತದ ಸಮಸ್ಯೆಯೂ ತಗ್ಗುವ ನಿರೀಕ್ಷೆಯಿದೆ.

ಟವರ್‌ನಿಂದ ಫೈಬರ್‌ವರೆಗೆ ಹಂಚಿಕೆ

ಎರಡೂ ಕಂಪನಿಗಳ ಸಹಭಾಗಿತ್ವ ಕೇವಲ ನೆಟ್‌ವರ್ಕ್ ಬಳಕೆಗೆ ಸೀಮಿತವಾಗಿಲ್ಲ. ಟೆಲಿಕಾಂ ಟವರ್‌ಗಳು, ಆಪ್ಟಿಕಲ್ ಫೈಬರ್ ಸೇರಿದಂತೆ ಪ್ರಮುಖ ಮೂಲಸೌಕರ್ಯಗಳನ್ನು ಹಂಚಿಕೊಳ್ಳುವ ಯೋಜನೆಯೂ ಇದರಲ್ಲಿದೆ.

ದೆಹಲಿ ಮತ್ತು ಮುಂಬೈನಲ್ಲಿ ಈಗಾಗಲೇ ಬಿಎಸ್ಎನ್ಎಲ್ ಗ್ರಾಹಕರು ಆದಾಯ ಹಂಚಿಕೆ ಮಾದರಿಯಲ್ಲಿ Vi ನೆಟ್‌ವರ್ಕ್ ಬಳಸುತ್ತಿರುವ ವ್ಯವಸ್ಥೆ ಇದೆ. ಇದೇ ಮಾದರಿಯನ್ನು ದೇಶದ ಇತರ ಟೆಲಿಕಾಂ ವಲಯಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ.

ಬಿಎಸ್ಎನ್ಎಲ್ ಈಗಾಗಲೇ 1,441ಕ್ಕೂ ಅಧಿಕ ಟವರ್‌ಗಳನ್ನು Viಗೆ 4G ಮತ್ತು 5G ಸೇವೆಗಾಗಿ ಬಾಡಿಗೆಗೆ ನೀಡಿದೆ ಎನ್ನಲಾಗಿದೆ.

ಜಿಯೋ–ಏರ್‌ಟೆಲ್‌ಗಿಂತ ಹಿಂದೆ ಉಳಿದಿರುವ ಮೂಲಸೌಕರ್ಯ

ಮೂಲಸೌಕರ್ಯದ ವಿಚಾರದಲ್ಲಿ ಜಿಯೋ ಮತ್ತು ಏರ್‌ಟೆಲ್‌ಗಳಿಗೆ ಹೋಲಿಸಿದರೆ Vi ಮತ್ತು ಬಿಎಸ್ಎನ್ಎಲ್ ಸಾಕಷ್ಟು ಹಿಂದೆ ಇವೆ. ಜಿಯೋ ಸುಮಾರು 3.33 ಲಕ್ಷ ಹಾಗೂ ಏರ್‌ಟೆಲ್ ಸುಮಾರು 2.92 ಲಕ್ಷ ಸೈಟ್‌ಗಳನ್ನು ಹೊಂದಿವೆ. Viಯಲ್ಲಿ ಸುಮಾರು 1.90 ಲಕ್ಷ ಹಾಗೂ ಬಿಎಸ್ಎನ್ಎಲ್‌ನಲ್ಲಿ ಸುಮಾರು 1.21 ಲಕ್ಷ ಟವರ್‌ಗಳಿವೆ.

ಫೈಬರ್ ಜಾಲದಲ್ಲಿಯೂ ಇದೇ ವ್ಯತ್ಯಾಸ ಕಂಡುಬರುತ್ತದೆ. ಜಿಯೋ ಸುಮಾರು 10 ಲಕ್ಷ ಕಿ.ಮೀ., ಏರ್‌ಟೆಲ್ ಸುಮಾರು 5.50 ಲಕ್ಷ ಕಿ.ಮೀ. ಫೈಬರ್ ಜಾಲ ಹೊಂದಿವೆ. Viಯ ಫೈಬರ್ ಜಾಲ ಸುಮಾರು 1.65 ಲಕ್ಷ ಕಿ.ಮೀ. ಇದೆ.

ಹೀಗಾಗಿ ಪರಸ್ಪರ ಮೂಲಸೌಕರ್ಯ ಬಳಸಿಕೊಳ್ಳುವುದರಿಂದ ಎರಡೂ ಕಂಪನಿಗಳು ಜಿಯೋ ಮತ್ತು ಏರ್‌ಟೆಲ್‌ಗೆ ಇರುವ ಮೂಲಸೌಕರ್ಯ ಅಂತರವನ್ನು ತಗ್ಗಿಸಿಕೊಳ್ಳಬಹುದು ಎಂಬ ನಿರೀಕ್ಷೆ ಇದೆ.

BSNLಗೆ ವೆಚ್ಚ ಉಳಿತಾಯ, Viಗೆ ವೇಗದ ವಿಸ್ತರಣೆ

ಈ ಒಪ್ಪಂದದಿಂದ Viಗೆ ಹೊಸ ಟವರ್‌ಗಳನ್ನು ಸ್ಥಾಪಿಸುವ ವೆಚ್ಚ ಹಾಗೂ ಸಮಯ ಉಳಿಯಲಿದೆ. ಬಿಎಸ್ಎನ್ಎಲ್ ಈಗಾಗಲೇ ಹೊಂದಿರುವ ಟವರ್‌ಗಳು ಮತ್ತು ಇತರ ಮೂಲಸೌಕರ್ಯಗಳನ್ನು ಬಳಸಿಕೊಂಡು Vi ತನ್ನ 4G ಮತ್ತು 5G ಸೇವೆಗಳನ್ನು ವೇಗವಾಗಿ ವಿಸ್ತರಿಸಬಹುದು.

ಇನ್ನೊಂದೆಡೆ, ಗ್ರಾಮೀಣ ಹಾಗೂ ನೆಟ್‌ವರ್ಕ್ ವ್ಯಾಪ್ತಿ ಕಡಿಮೆ ಇರುವ ಪ್ರದೇಶಗಳಲ್ಲಿ ಬಿಎಸ್ಎನ್ಎಲ್ ಕೂಡ Viಯ ನೆಟ್‌ವರ್ಕ್ ಅನ್ನು ಬಳಸಿಕೊಳ್ಳಬಹುದು. ಹೊಸದಾಗಿ ಟವರ್‌ಗಳನ್ನು ನಿರ್ಮಿಸಲು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡುವ ಬದಲು ಅಸ್ತಿತ್ವದಲ್ಲಿರುವ ಮೂಲಸೌಕರ್ಯವನ್ನು ಬಳಸಿಕೊಳ್ಳುವುದು ಸಂಸ್ಥೆಗೆ ಲಾಭದಾಯಕವಾಗಲಿದೆ.

ಸರ್ಕಾರದ ಹೂಡಿಕೆಗೆ ಹೆಚ್ಚಿನ ಪ್ರಯೋಜನ

ಬಿಎಸ್ಎನ್ಎಲ್ ಸಂಪೂರ್ಣ ಸರ್ಕಾರಿ ಸ್ವಾಮ್ಯದ ಸಂಸ್ಥೆಯಾಗಿದೆ. ವೊಡಾಫೋನ್ ಐಡಿಯಾದಲ್ಲೂ ಕೇಂದ್ರ ಸರ್ಕಾರದ ಸುಮಾರು 49% ಪಾಲು ಇದೆ. ಹೀಗಾಗಿ ಒಂದೇ ರೀತಿಯ ಮೂಲಸೌಕರ್ಯಕ್ಕಾಗಿ ಎರಡೂ ಸಂಸ್ಥೆಗಳು ಪ್ರತ್ಯೇಕವಾಗಿ ಹಣ ಖರ್ಚು ಮಾಡುವುದನ್ನು ತಪ್ಪಿಸಿ, ಈಗಿರುವ ಸಂಪನ್ಮೂಲಗಳನ್ನು ಗರಿಷ್ಠವಾಗಿ ಬಳಸಿಕೊಳ್ಳುವುದು ಸರ್ಕಾರದ ದೃಷ್ಟಿಯಿಂದಲೂ ಮಹತ್ವದ ಹೆಜ್ಜೆಯಾಗಿದೆ.

ಮುಂದಿನ ದಿನಗಳಲ್ಲಿ ಟವರ್ ಹಾಗೂ ನೆಟ್‌ವರ್ಕ್ ಹಂಚಿಕೆಯ ಜತೆಗೆ ಇತರ ಮೂಲಸೌಕರ್ಯ ಮತ್ತು ಸೇವೆಗಳಲ್ಲಿಯೂ ಸಹಭಾಗಿತ್ವ ವಿಸ್ತರಿಸುವ ಸಾಧ್ಯತೆ ಇದೆ.

ರಿಚಾರ್ಜ್ ದರಕ್ಕೂ ಬೀಳುತ್ತಾ ಪರಿಣಾಮ?

ಜಿಯೋ ಮತ್ತು ಏರ್‌ಟೆಲ್‌ಗಳ ದುಬಾರಿ ರಿಚಾರ್ಜ್ ಯೋಜನೆಗಳಿಂದಾಗಿ ಗ್ರಾಹಕರಿಗೆ ಅಗ್ಗದ ಪರ್ಯಾಯದ ಅಗತ್ಯ ಹೆಚ್ಚಾಗಿದೆ. ಬಿಎಸ್ಎನ್ಎಲ್ ಕಡಿಮೆ ದರದ ಯೋಜನೆಗಳನ್ನು ಹೊಂದಿದ್ದರೂ, ನೆಟ್‌ವರ್ಕ್ ವ್ಯಾಪ್ತಿಯ ಕೊರತೆಯಿಂದಾಗಿ ಹಲವು ಗ್ರಾಹಕರು ಖಾಸಗಿ ಕಂಪನಿಗಳನ್ನೇ ಅವಲಂಬಿಸಿದ್ದಾರೆ.

BSNL–Vi ಸಹಭಾಗಿತ್ವದಿಂದ ಬಿಎಸ್ಎನ್ಎಲ್‌ನ ನೆಟ್‌ವರ್ಕ್ ವ್ಯಾಪ್ತಿ ಮತ್ತು ಸೇವೆಯ ಗುಣಮಟ್ಟ ಸುಧಾರಿಸಿದರೆ, ಹೆಚ್ಚಿನ ಗ್ರಾಹಕರು ಅಗ್ಗದ ಬಿಎಸ್ಎನ್ಎಲ್ ಯೋಜನೆಗಳತ್ತ ಆಕರ್ಷಿತರಾಗಬಹುದು. ಇದರಿಂದ ಜಿಯೋ ಮತ್ತು ಏರ್‌ಟೆಲ್‌ಗಳ ಮೇಲೂ ಸ್ಪರ್ಧಾತ್ಮಕ ಒತ್ತಡ ಹೆಚ್ಚುವ ಸಾಧ್ಯತೆಯಿದೆ.

ಅಂತಿಮವಾಗಿ ಈ ಪೈಪೋಟಿ ರಿಚಾರ್ಜ್ ದರ, ನೆಟ್‌ವರ್ಕ್ ಗುಣಮಟ್ಟ ಮತ್ತು ಸೇವೆಗಳ ವಿಚಾರದಲ್ಲಿ ಗ್ರಾಹಕರಿಗೆ ಲಾಭ ತರುವುದೇ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.