ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ರಾಜೀನಾಮೆ; ಎರಡು ವರ್ಷದಲ್ಲೇ ಅಧಿಕಾರ ತ್ಯಾಗ !

ಲಂಡನ್ : ತೀವ್ರ ರಾಜಕೀಯ ಮತ್ತು ಆರ್ಥಿಕ ಬಿಕ್ಕಟ್ಟು, ಸ್ವಪಕ್ಷದೊಳಗಿನ ಹೆಚ್ಚುತ್ತಿರುವ ಅಸಮಾಧಾನ ಹಾಗೂ ನಾಯಕತ್ವದ ವಿರುದ್ಧದ ಬಹಿರಂಗ ಸವಾಲಿನ ನಡುವೆಯೇ ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಸೋಮವಾರ ತಮ್ಮ ಹುದ್ದೆಗೆ ರಾಜೀನಾಮೆ ಘೋಷಿಸಿದ್ದಾರೆ.

2024ರ ಸಾರ್ವತ್ರಿಕ ಚುನಾವಣೆಯಲ್ಲಿ ಲೇಬರ್ ಪಕ್ಷವನ್ನು ಭರ್ಜರಿ ಗೆಲುವಿನತ್ತ ಮುನ್ನಡೆಸಿದ್ದ ಸ್ಟಾರ್ಮರ್, ಕೇವಲ ಎರಡು ವರ್ಷಗಳಲ್ಲೇ ಅಧಿಕಾರ ತ್ಯಜಿಸಿರುವುದು ಬ್ರಿಟನ್ ರಾಜಕೀಯದಲ್ಲಿ ಮತ್ತೊಂದು ನಾಟಕೀಯ ಬೆಳವಣಿಗೆಗೆ ಕಾರಣವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ರಾಜೀನಾಮೆ ನೀಡಿದ ಆರನೇ ಬ್ರಿಟಿಷ್ ಪ್ರಧಾನಿಯಾಗಿ ಅವರು ಗುರುತಿಸಿಕೊಂಡಿದ್ದಾರೆ.
ಲಂಡನ್‌ನ ಪ್ರಧಾನಿ ಅಧಿಕೃತ ನಿವಾಸ 10 ಡೌನಿಂಗ್ ಸ್ಟ್ರೀಟ್ ಎದುರು ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಸ್ಟಾರ್ಮರ್, “ಮುಂದಿನ ಚುನಾವಣೆಗೆ ಪಕ್ಷವನ್ನು ಮುನ್ನಡೆಸಲು ನಾನು ಸರಿಯಾದ ವ್ಯಕ್ತಿಯೇ ಎಂಬ ಪ್ರಶ್ನೆಗೆ ನನ್ನ ಪಕ್ಷವೇ ಉತ್ತರ ನೀಡಿದೆ. ಅದನ್ನು ನಾನು ಗೌರವದಿಂದ ಸ್ವೀಕರಿಸುತ್ತಿದ್ದೇನೆ. ಅದಕ್ಕಾಗಿಯೇ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಭಾವುಕರಾಗಿ ಹೇಳಿದರು.

ರಾಜೀನಾಮೆಗೆ ಕಾರಣವಾದ ಅಂಶಗಳು:

ಲೇಬರ್ ಪಕ್ಷದೊಳಗೆ ಸ್ಟಾರ್ಮರ್ ನಾಯಕತ್ವದ ವಿರುದ್ಧ ಅಸಮಾಧಾನ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಮ್ಯಾಂಚೆಸ್ಟರ್‌ನ ಮಾಜಿ ಮೇಯರ್ ಆಂಡಿ ಬರ್ನ್‌ಹ್ಯಾಮ್ ಸಂಸತ್ ಪ್ರವೇಶಿಸಿದ ಬಳಿಕ ನಾಯಕತ್ವ ಬದಲಾವಣೆಗೆ ಒತ್ತಾಯ ಮತ್ತಷ್ಟು ತೀವ್ರಗೊಂಡಿತ್ತು. ಪಕ್ಷದ ಅನೇಕ ಸಂಸದರು ಬರ್ನ್‌ಹ್ಯಾಮ್ ಪರ ನಿಂತಿದ್ದರಿಂದ ಸ್ಟಾರ್ಮರ್ ಮೇಲೆ ಒತ್ತಡ ಹೆಚ್ಚಾಯಿತು.
ಇದರ ಜೊತೆಗೆ, ಬ್ರಿಟನ್‌ನಲ್ಲಿ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆ, ಸಾರ್ವಜನಿಕ ಸೇವೆಗಳ ಮೇಲಿನ ಅಸಮಾಧಾನ ಹಾಗೂ ನಿರೀಕ್ಷಿತ ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಸರ್ಕಾರ ವಿಫಲವಾಗಿದೆ ಎಂಬ ಟೀಕೆಗಳು ಹೆಚ್ಚಾಗಿದ್ದವು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಹಿನ್ನಡೆಯೂ ಸ್ಟಾರ್ಮರ್ ಸ್ಥಾನವನ್ನು ದುರ್ಬಲಗೊಳಿಸಿತು.

ಸಾಧನೆಗಳನ್ನೂ ನೆನಪಿಸಿಕೊಂಡ ಸ್ಟಾರ್ಮರ್:

ರಾಜೀನಾಮೆ ಭಾಷಣದಲ್ಲಿ ತಮ್ಮ ಆಡಳಿತದ ಸಾಧನೆಗಳನ್ನು ಉಲ್ಲೇಖಿಸಿದ ಸ್ಟಾರ್ಮರ್, “ಆರು ವರ್ಷಗಳ ಹಿಂದೆ ಲೇಬರ್ ಪಕ್ಷ ಮುಗಿದಿದೆ ಎಂದು ಹಲವರು ಭಾವಿಸಿದ್ದರು. ಆದರೆ ಕಠಿಣ ಪರಿಶ್ರಮದಿಂದ ನಾವು ಪಕ್ಷವನ್ನು ಅಧಿಕಾರಕ್ಕೆ ತಂದೆವು. ನಮ್ಮ ಆಡಳಿತದಲ್ಲಿ ವೇತನ ಹೆಚ್ಚಳ, ಕಾರ್ಮಿಕ ಸುಧಾರಣೆಗಳು ಹಾಗೂ ಲಕ್ಷಾಂತರ ಜನರನ್ನು ಬಡತನದಿಂದ ಹೊರತರುವ ಕೆಲಸ ಮಾಡಿದ್ದೇವೆ” ಎಂದು ಹೇಳಿದರು.

ಮುಂದಿನ ಪ್ರಧಾನಿ ಯಾರು?

ಸ್ಟಾರ್ಮರ್ ರಾಜೀನಾಮೆ ನೀಡಿದ್ದರೂ, ಲೇಬರ್ ಪಕ್ಷ ಹೊಸ ನಾಯಕನನ್ನು ಆಯ್ಕೆ ಮಾಡುವವರೆಗೆ ಅವರು ಮಧ್ಯಂತರ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ. ಆಂಡಿ ಬರ್ನ್‌ಹ್ಯಾಮ್ ಮುಂದಿನ ಪ್ರಧಾನಿಯಾಗುವ ಪ್ರಮುಖ ಆಕಾಂಕ್ಷಿಯಾಗಿ ಹೊರಹೊಮ್ಮಿದ್ದಾರೆ.
ಇರಾನ್-ಅಮೆರಿಕ ನಡುವಿನ ಉದ್ವಿಗ್ನತೆಯ ನಡುವೆಯೇ ಬ್ರಿಟನ್‌ನಲ್ಲಿ ನಡೆದಿರುವ ಈ ನಾಯಕತ್ವ ಬದಲಾವಣೆ, ಜಾಗತಿಕ ರಾಜಕೀಯ ವಲಯದ ಗಮನ ಸೆಳೆದಿದೆ.