ಘನತ್ಯಾಜ್ಯ ಘಟಕಗಳ ಬ್ರ್ಯಾಂಡಿಂಗ್ ಕಾರ್ಯದಲ್ಲಿ ಉಡುಪಿ ಜಿಲ್ಲೆ ಮಾದರಿ ಹೆಜ್ಜೆ: ಜ್ಯೋತಿ ಉದಯಕುಮಾರ್

ಉಡುಪಿ: ಘನತ್ಯಾಜ್ಯ ಘಟಕಗಳನ್ನು ಬ್ರ್ಯಾಂಡಿಂಗ್ ಮಾಡುವ ಕಾರ್ಯ ಉತ್ತಮವಾಗಿದ್ದು, ಉಡುಪಿ ಜಿಲ್ಲೆ ಈ ದಿಸೆಯಲ್ಲಿ ಮಾದರಿಯ ಹೆಜ್ಜೆಯನ್ನಿಟ್ಟಿದೆ ಎಂದು ಬ್ರಹ್ಮಾವರ ತಾಲ್ಲೂಕು ಪಂಚಾಯತ್ ಅಧ್ಯಕ್ಷೆ ಜ್ಯೋತಿ ಉದಯಕುಮಾರ್ ಹೇಳಿದ್ದಾರೆ.

ಬ್ರಹ್ಮಾವರ ಸಮೀಪದ ಕಾಡೂರು ಗ್ರಾಮ ಪಂಚಾಯತ್‌ನಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿ ಘನತ್ಯಾಜ್ಯ ಸಂಪನ್ಮೂಲ ನಿರ್ವಹಣಾ ಘಟಕಗಳ ಏಕರೂಪದ ಬ್ರ್ಯಾಂಡಿಂಗ್ ಲೋಕಾರ್ಪಣೆ ಮತ್ತು ಸ್ವಚ್ಛೋತ್ಸವ – ನಿತ್ಯೋತ್ಸವ ಮಾಸಾಚರಣೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಚತೆಯ ಕುರಿತು ನಾಗರಿಕರು ಜಾಗೃತರಾಗುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.

ಬ್ರಹ್ಮಾವರ ತಾಲೂಕು ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹಂದಾಡಿ ಮಾತನಾಡಿ, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಮನ್ವಯವಿದ್ದರೆ ಸ್ವಚ್ಚತೆಯೂ ಸೇರಿದಂತೆ ಸಮಗ್ರ ಸಾಧನೆ ಮಾಡಬಹುದು ಎಂಬುದಕ್ಕೆ ಕಾಡೂರು ಗ್ರಾಮ ಪಂಚಾಯತ್ ಉತ್ತಮ ಉದಾಹರಣೆಯಾಗಿದೆ ಎಂದು ತಿಳಿಸಿದರು.

ತಾಲ್ಲೂಕು ಪಂಚಾಯತ್ ಸದಸ್ಯ ಭುಜಂಗ ಶೆಟ್ಟಿ ಕಾಡೂರು, ಬ್ರಹ್ಮಾವರ ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಎಚ್.ವಿ. ಇಬ್ರಾಹಿಂಪೂರ, ಕಾಡೂರು ಗ್ರಾ.ಪಂ ಆಡಳಿತಾಧಿಕಾರಿ ಮಂಜುನಾಥ ಅಡಿಗ, ಸ್ವಚ್ಚ ಭಾರತ್ ವಿಷನ್‌ನ ಜಿಲ್ಲಾ ಸಮಾಲೋಚಕ ಸುಧೀರ್ ಹಾಗೂ ಪ್ರದೀಪ್, ಗ್ರಾ.ಪಂ ಮಾಜಿ ಸದಸ್ಯರಾದ ಸತ್ಯನಾರಾಯಣ ಶೆಟ್ಟಿ, ನಾಗರತ್ನ, ಹೆಗ್ಗುಂಜೆ ಗ್ರಾ.ಪಂ ಪಿಡಿಓ ಅನಿಲ್ ಕುಮಾರ್, ಶ್ರೀವಾಣಿ ಪ್ರೌಢಶಾಲೆ ಮುಖ್ಯ ಗುರು ವಿಶ್ವನಾಥ ಶೆಟ್ಟಿ, ಸ್ವಚ್ಚತಾ ಕಾರ್ಯಕರ್ತರು, ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರು, ಸ್ವಸಹಾಯ ಗುಂಪುಗಳ ಸದಸ್ಯರು ಉಪಸ್ಥಿತರಿದ್ದರು.

ಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ ಕಾಡೂರು ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಮಹೇಶ್ ಕೆ. ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.