ನಾರಾಯಣ ಗುರುಗಳ ತತ್ವಾದರ್ಶ ಪಾಲಿಸಿ ವಿಶ್ವಶಾಂತಿಗೆ ಮುಂದಡಿಯಿಡಬೇಕು: ಸಚಿವ ಸುನಿಲ್ ಕುಮಾರ್

ಉಡುಪಿ: ಎಲ್ಲಾ ಧರ್ಮಗಳು ಮನುಷ್ಯನ ಒಳಿತನ್ನೇ ಬಯಸುತ್ತವೆ ಎಂಬ ನಾರಾಯಣಗುರುಗಳ ಸಂದೇಶ ಅರಿಯುವ ಮೂಲಕ ವಿಶ್ವದಾದ್ಯಂತ ವಿವಿಧ ಧರ್ಮಗಳ ನಡುವೆ ನಡೆಯುತ್ತಿರುವ ವಾದವನ್ನು ಕೊನೆಗಾಣಿಸಿ, ವಿಶ್ವಶಾಂತಿ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ.ಸುನಿಲ್ ಕುಮಾರ್ ಹೇಳಿದರು.

ಅವರು ಶನಿವಾರ ಬನ್ನಂಜೆಯ ನಾರಾಯಣ ಗುರು ಸಭಾಭವನದಲ್ಲಿ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಬಿಲ್ಲವರ ಸೇವಾ ಸಂಘ ಬನ್ನಂಜೆ ಇವರ ಸಹಯೋಗದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಧರ್ಮಗಳ ಮೂಲ ಉದ್ದೇಶ ಮನುಷ್ಯನಿಗೆ ಒಳಿತನ್ನು ಮಾಡುವ ಮೂಲಕ ವಿಶ್ವಶಾಂತಿ ಮೂಡಿಸುವುದು ಮಾತ್ರವಾಗಿದ್ದು, ಧರ್ಮಗಳ ನಡುವೆ ವಾದ ಸೃಷ್ಠಿಸಲು ಅಥವಾ ವಿಜಯ ಸಾಧಿಸುವುದಲ್ಲ ಎಂಬ ನಾರಾಯಣ ಗುರುಗಳ ಸಂದೇಶವನ್ನು ಅರ್ಥಮಾಡಿಕೊಂಡು ಆ ಧರ್ಮದ ನೆಲೆಯಲ್ಲಿ ಎಲ್ಲರೂ ನಡೆಯುವುದು ಇಂದಿನ ಅವಶ್ಯಕತೆ. ಶಿಕ್ಷಣದ ಮೂಲಕ ಬಲಯುತವಾಗಿ ಎಂಬ ಅವರ ಸಂದೇಶದಂತೆ ಎಲ್ಲರೂ ಉತ್ತಮ ಶಿಕ್ಷಣ ಪಡೆಯಬೇಕು. ತನ್ನ ಆದರ್ಶಗಳ ಮೂಲಕ ಸಮಾನತೆಯಿಂದ ಕೂಡಿದ ಸಮಾಜ ನಿರ್ಮಾಣ ಮಾಡಲು ಸಮಾಜದಲ್ಲಿ ಅತ್ಯಂತ ದೊಡ್ಡ ಬದಲಾವಣೆಯನ್ನು ಮಾಡಿದ್ದರು ಎಂದರು.

ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಮಾತನಾಡಿ, ನಾರಾಯಣ ಗುರುಗಳ ಸಂದೇಶ ಮತ್ತು ಆದರ್ಶಗಳು ಇಂದಿಗೂ ಪ್ರಸ್ತುತವಾಗಿದ್ದು ಸಮಾಜದಲ್ಲಿ ಸಮಾನತೆಯ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು. ವ್ಯಕ್ತಿಯನ್ನು ಯಾವುದೇ ಜಾತಿಯಿಂದ ಅಳೆಯದೆ ಆತನ ವ್ಯಕ್ತಿತ್ವದಿಂದ ಗುರುತಿಸಿ ಗೌರವಿಸಬೇಕು. ಒಂದೇ ಜಾತಿ ಒಂದೇ ಮತ ಒಂದೇ ದೇವರು ಎಂಬ ಸಂದೇಶವನ್ನು ಎಲ್ಲರೂ ಪಾಲಿಸಬೇಕು ಎಂದರು.

ನಾರಾಯಣ ಗುರುಗಳ ಕುರಿತು ಉಪನ್ಯಾಸ ನೀಡಿದ ಹಿರಿಯಡ್ಕ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕಿ ನಳಿನಾದೇವಿ, ಮಹಾ ಮಾನವತಾವಾದಿ, ದಾರ್ಶನಿಕ, ಆಧ್ಯಾತ್ಮಿಕ ಸಾಧಕರಾಗಿದ್ದ ನಾರಾಯಣ ಗುರುಗಳು ಸಮಾಜದಲ್ಲಿ ಸಮಾನತೆ ನಿರ್ಮಾಣಕ್ಕಾಗಿ ಕೆಳವರ್ಗದ ಜನರಿಗಾಗಿ ದೇವಾಲಯಗಳನ್ನು ನಿರ್ಮಿಸಿದ್ದರು. ವಿದ್ಯೆಯಿಂದ ವ್ಯಕ್ತಿಯ ಬದುಕು ಶ್ರೀಮಂತವಾಗಲಿದೆ ಎಂದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ, ಸರಳ ವಿವಾಹ, ವಿಧವಾ ವಿವಾಹಗಳನ್ನು ಪ್ರೋತ್ಸಾಹಿಸಿದ್ದ ಅವರು ಬಾಲ್ಯ ವಿವಾಹ, ಮದ್ಯಪಾನವನ್ನು
ವಿರೋಧಿಸಿದ್ದರು. ಇವರ ತತ್ವಾದರ್ಶಗಳನ್ನು ತಿಳಿದಿದ್ದ ಮಹಾತ್ಮ ಗಾಂಧೀಜಿ ಮತ್ತು ಆಚಾರ್ಯ ವಿನೋಬಾ ಭಾವೆ ಇವರನ್ನು ಭೇಟಿ ಮಾಡಿದ್ದರು ಎಂದರು.

ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭಾ ಸದಸ್ಯೆ ಸವಿತಾ ಹರೀಶ್ ರಾಮ್, ಅಪರ ಜಿಲ್ಲಾಧಿಕಾರಿ ವೀಣಾ ಬಿ.ಎನ್. ಉಡುಪಿ ತಹಸೀಲ್ದಾರ್ ಶ್ರೀನಿವಾಸ ಮೂರ್ತಿ, ಬಿಲ್ಲವರ ಸೇವಾ ಸಂಘದ ಅಧ್ಯಕ್ಷ ಆನಂದ ಪೂಜಾರಿ ಕಿದಿಯೂರು ಉಪಸ್ಥಿತರಿದ್ದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ ಸ್ವಾಗತಿಸಿದರು. ಅಮಿತಾಂಜಲಿ ನಿರೂಪಿಸಿ ವಂದಿಸಿದರು.

ಆಕಾಶ್ ಹೆಬ್ಬಾರ್ ಮತ್ತು ತಂಡದವರಿಂದ ಸಂಗೀತ ಕಾರ್ಯಕ್ರಮ ನಡೆಯಿತು.