ಬ್ರಹ್ಮಾವರ: ಅಪ್ಪ ಅಮ್ಮ ಅನಾಥಾಲಯದಲ್ಲಿ ದೀಪಾವಳಿ ಶುಭಾಶಯ ವಿನಿಯಮ

ಬ್ರಹ್ಮಾವರ: ಕೆಥೊಲಿಕ್ ಸಭಾ ಕಲ್ಯಾಣಪುರ ವಲಯದಿಂದ ‘ಅಪ್ಪ ಅಮ್ಮ ಅನಾಥಾಲಯ’ದಲ್ಲಿ ದೀಪಾವಳಿ ಶುಭಾಶಯ ವಿನಿಯಮ ಕಾರ್ಯಕ್ರಮ ಇಂದು ನಡೆಯಿತು.

ಕೆಥೊಲಿಕ್ ಸಭಾ ಉಡುಪಿ ಪ್ರದೇಶ್ ಇದರ ಕಲ್ಯಾಣಪುರ ವಲಯ ಸಮಿತಿಯು ದೀಪಾವಳಿ ಹಬ್ಬದ ಪ್ರಯುಕ್ತ ಬ್ರಹ್ಮಾವರದ  ‘ ಅಪ್ಪ ಅಮ್ಮ ಅನಾಥಾಲ’ಯಕ್ಕೆ ಭೇಟಿ ನೀಡಿ ಅಲ್ಲಿನ ವಾಸಿಗಳೊಂದಿಗೆ ಶುಭಾಶಯ ವಿನಿಯಮ ಮಾಡಿಕೊಂಡರು.

ಅಪ್ಪ ಅಮ್ಮ ಅನಾಥಾಲಯದ ಮುಖ್ಯಸ್ಥ ಪ್ರಶಾಂತ್ ಕೂರಾಡಿ ಅವರು ಅನಾಥಾಲಯದಲ್ಲಿ 40ಕ್ಕೂ ಅಧಿಕ ಅನಾಥ ಹಿರಿಯ ನಾಗರಿಕರು ಈ ವರೆಗೆ ಸೇರ್ಪಡೆಯಾಗಿದ್ದು, ಈಗಾಗಲೇ ಅವರನ್ನು ಗುಣಮುಖರನ್ನಾಗಿಸಿ ಕೆಲವರನ್ನು ಅವರ ಸ್ವಂತ ಮನೆಗೆ ತಲುಪಿಸುವ ಕಾರ್ಯ ಮಾಡಲಾಗಿದೆ. ಪ್ರಸ್ತುತ 24 ಮಂದಿ ಹಿರಿಯ ನಾಗರಿಕರು ವಿವಿಧ ಜಾತಿ ಧರ್ಮಗಳಿಗೆ ಸೇರಿದವರಿದ್ದು ಎಲ್ಲರಿಗೂ ಉತ್ತಮ ವ್ಯವಸ್ಥೆಯನ್ನು ದಾನಿಗಳ ನೆರವಿನೊಂದಿಗೆ ಉಚಿತವಾಗಿ ಮಾಡಲಾಗುತ್ತಿದೆ. ತಾನು ಮಾಡುವ ಕೆಲಸದಲ್ಲಿ ತನಗೆ ತೃಪ್ತಿಯಿದ್ದು ಆಶ್ರಮವಾಸಿಗಳನ್ನು ತನ್ನ ಮನೆಯವರಂತೆಯೇ ಪ್ರೀತಿಯಿಂದ ನೋಡಿ ಕೊಳ್ಳಲಾಗುತ್ತಿದೆ ಎಂದರು.

ಕೆಥೊಲಿಕ್ ಸಭಾ ಕಲ್ಯಾಣಪುರ ಅಧ್ಯಕ್ಷೆ ರೋಜಿ ಬಾರೆಟ್ಟೊ ಮಾತನಾಡಿ, ವಲಯದ ವತಿಯಿಂದ ದೀಪಾವಳಿಯನ್ನು ಅಶಕ್ತರು ಮತ್ತು ಅನಾಥರೊಂದಿಗೆ ಆಚರಣೆ ಮಾಡಬೇಕು ಎನ್ನುವ ಉದ್ದೇಶದಿಂದ ಅಪ್ಪ ಅಮ್ಮ ಅನಾಥಾಲಯವನ್ನು ಆಯ್ಕೆ ಮಾಡಿಕೊಂಡಿದ್ದು ದೀಪಾವಳಿಯ ಸಂದರ್ಭದಲ್ಲಿ ಅನಾಥ ಹಿರಿಯ ಜೀವಗಳ ಮುಖದಲ್ಲಿ ಬೆಳಕು ಮೂಡಲಿ ಎಂದು ಶುಭ ಹಾರೈಸಿದರು.

ವಲಯದ ವತಿಯಿಂದ ಅನಾಥಲಾಯಕ್ಕೆ ಅಕ್ಕಿ ಸಹಿತ ವಿವಿಧ ದಿನಬಳಕೆಯ ವಸ್ತುಗಳನ್ನು ದಾನವಾಗಿ ನೀಡಲಾಯಿತು ಅಲ್ಲದೆ ದೀಪಾವಳಿಯ ಸಿಹಿಯನ್ನು ಕೂಡ ವಿತರಿಸಲಾಯಿತು.

ಈ ವೇಳೆ ಕೆಥೊಲಿಕ್ ಸಭಾ ಕಲ್ಯಾಣಪುರವ ವಲಯದ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಕರ್ನೆಲಿಯೊ, ಕಾರ್ಯದರ್ಶಿ ಸೆಲಿನ್ ಕುಲಾಸೊ, ಕೋಶಾಧಿಕಾರಿ ಉರ್ಬಾನ್ ಲೂವಿಸ್, ಪದಾಧಿಕಾರಿಗಳಾದ ಎಡ್ವರ್ಡ್ ಲಾರ್ಸನ್ ಡಿಸೋಜಾ, ಸುಜಾ ಡಿಸೋಜಾ, ಫೆಲಿಕ್ಸ್ ಪಿಂಟೊ, ಅರುಣ್ ಕೆಮ್ಮಣ್ಣು, ಸ್ಟೀವನ್ ಪ್ರಕಾಶ್ ಲೂವಿಸ್ ಉಪಸ್ಥಿತರಿದ್ದರು.