ಬ್ರಹ್ಮಾವರ: ಚಾಲಕನ ನಿಯಂತ್ರಣ ತಪ್ಪಿ ಹುಂಡೈ ಗ್ರ್ಯಾಂಡ್ ಐ10 ಕಾರು ಟೆಲಿಫೋನ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿ ಬಿದ್ದ ಪರಿಣಾಮ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತಿದ್ದ ವ್ಯಕ್ತಿ ಮೃತಪಟ್ಟಿದ್ದು, ಅವರ ಪತ್ನಿ ಗಾಯಗೊಂಡ ಘಟನೆ ಬ್ರಹ್ಮಾವರ ಹೇರಾಡಿ ಗ್ರಾಮದ ಕೂಡ್ಲಿ ದುರ್ಗಾ ಪರಮೇಶ್ವರಿ ಗದ್ದುಗೆ ಮಾರಿಯಮ್ಮ ದೇವಸ್ಥಾನದ ಕ್ರಾಸ್ ಸಮೀಪ ಇಂದು ನಡೆದಿದೆ. ಕಾರು ಚಾಲಕ ಹಾಗೂ ಇನ್ನೋರ್ವ ಪ್ರಯಾಣಿಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯು.ಬಿ ಪ್ರಭಾಕರ್ ರಾವ್ ( 80) ಮೃತಪಟ್ಟ ವ್ಯಕ್ತಿ. ಅವರ ಪತ್ನಿ ಉಷಾ ಪಿ ರಾವ್ ಗಾಯಗೊಂಡಿದ್ದು, ಅವರನ್ನು ಉಡುಪಿಯ ಆದರ್ಶ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ವಿಶ್ವ ಪ್ರಸಾದ್ ರಾವ್ ಹಾಗೂ ಅವರ ಪಕ್ಕದ ಸೀಟಿನಲ್ಲಿ ಕುಳಿತಿದ್ದ ಶಿವ ಪ್ರಸಾದ್ ರಾವ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಚಾಲಕನ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ತಿಳಿದುಬಂದಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.