ಕೋಟೇಶ್ವರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಸಿಎಂ ಚಾಲನೆ

ಕುಂದಾಪುರ: ಹಿಂದೂ ಧರ್ಮದ ಧಾರ್ಮಿಕ ಪರಿಪಾಲನೆಗೆ ಸಹಕಾರ ನೀಡಿ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಬ್ರಾಹ್ಮಣ ಸಮುದಾಯದಿಂದ ಸಮಾಜಕ್ಕೆ ಸಾಕಷ್ಟು ಕೊಡುಗೆಗಳು ಸಂದಿದೆ. ಸಾಹಿತ್ಯ, ಕಲೆ, ಶಿಕ್ಷಣ ಸೇರಿದಂತೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಉಲ್ಲೇಖನೀಯ ಕೊಡುಗೆಗಳಿವೆ. ಸನಾತನ ಪರಂಪರೆ, ವೇದ, ಉಪನಿಷತ್, ದೇವಾಲಯಗಳ ರಕ್ಷಣೆಯ ಜೊತೆಯಲ್ಲಿ ಹಿಂದೂ ಸಮಾಜದ ಜಾಗೃತಿಗಾಗಿ ಬ್ರಾಹ್ಮಣ ಸಮುದಾಯದ ಕೊಡುಗೆ ಅಪಾರವಾದುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅವರು ಇಲ್ಲಿನ ಕೋಟೇಶ್ವರದ ವರದರಾಜ ಎಂ.ಶೆಟ್ಟಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿನ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಶುಕ್ರವಾರ ನಡೆದ ೧೦ನೇ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಮ್ಮೇಳನಕ್ಕೆ ಚಾಲನೆ ನೀಡಿ, ‘ಭಾರ್ಗವ ಜ್ಯೋತಿ’ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿ ಮಾತನಾಡಿದರು.

ಬ್ರಾಹ್ಮಣ ಸಮುದಾಯದವರಿಗೆ ಜಾತಿ ಪ್ರಮಾಣ ಪತ್ರ ನೀಡಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ತಕ್ಷಣ ಸೂಚನೆ ನೀಡಲಾಗುವುದು. ಬೆಂಗಳೂರಿನಲ್ಲಿ ಬ್ರಾಹ್ಮಣ ಮಹಾಸಭಾ ವತಿಯಿಂದ ನಿರ್ಮಾಣವಾಗಲಿರುವ ಸಭಾಭವನಕ್ಕೆ ಮೊದಲ ಕಂತಿನಲ್ಲಿ ೫ ಕೋಟಿ ರೂ. ಬಿಡುಗಡೆ ಮಾಡಲಾಗುವುದು. ಇಂದಿನ ಮಹಾ ಸಮ್ಮೇಳನದಲ್ಲಿ ಪ್ರಾಸ್ತಾಪಿಸಿರುವ ಬೇಡಿಕೆಗಳ ಕುರಿತು ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಶೇ.೧೦ ಮೀಸಲಾತಿಯನ್ನು ದೇಶದ ಹಲವು ರಾಜ್ಯಗಳಲ್ಲಿ ಜಾರಿಗೊಳಿಸಲಾಗಿದ್ದು, ಅಲ್ಲಿನ ಸರ್ಕಾರಿ ಆದೇಶವನ್ನು ತರಿಸಿಕೊಂಡು ಅಧ್ಯಯನ ನಡೆಸಿ ರಾಜ್ಯದಲ್ಲಿಯೂ ಮೀಸಲಾತಿ ನೀಡುವ ಬಗ್ಗೆ ತೀರ್ಮಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇದೇ ಸಂದರ್ಭದಲ್ಲಿ ಭರವಸೆ ವ್ಯಕ್ತಪಡಿಸಿದರು.

ವಿಧಾನಸಭಾ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ, ಕೋಟೇಶ್ವರದಲ್ಲಿ ನಡೆಯುತ್ತಿರುವ ಸಮ್ಮೇಳನ ನ: ಭೋತೋ: ಎನ್ನುವ ರೀತಿಯಲ್ಲಿ ನಡೆಯುತ್ತಿದೆ. ಇಂತಹ ಸಮ್ಮೇಳನಗಳು ಕಾಲ ಕಾಲಕ್ಕೆ ನಡೆಯುವುದರಿಂದ ಶಿಕ್ಷಣ, ಸಾಹಿತ್ಯ, ಆರೋಗ್ಯ, ಉದ್ಯೋಗ ಕ್ಷೇತ್ರಗಳಲ್ಲಿನ ಸ್ವಾವಲಂಭನೆಗೆ ಅವಕಾಶವಾಗುತ್ತದೆ. ಭಗವದ್ಗೀತೆ ಹಾಗೂ ಗೋವುಗಳ ವಿಚಾರದಲ್ಲಿ ಸಲ್ಲದ ಮಾತುಗಳು ಪ್ರತಿಧ್ವನಿಸುತ್ತಿದೆ. ಸ್ವಾರ್ಥ ಹಾಗೂ ಅಗ್ಗದ ಪ್ರಚಾರಕ್ಕಾಗಿ ಭಾರತೀಯರ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನಗಳು ನಡೆಯುತ್ತಿದೆ. ಇದನ್ನೆಲ್ಲ ನೋಡಿ ಸುಮ್ಮನೆ ಕುಳಿತುಕೊಳ್ಳಲು ನಾವು ತಯಾರಿಲ್ಲ ಎನ್ನುವ ಕಾಲ ಘಟ್ಟದಲ್ಲಿ ದೇಶ ಇದೆ ಎಂದು ಹೇಳಿದ ಅವರು ಬ್ರಾಹ್ಮಣ ಮಹಾ ಮಂಡಳಿಗೆ ಅನುದಾನ ನೀಡುವ ಮೂಲಕ ಶಕ್ತಿ ತುಂಬುವಂತೆ ಮುಖ್ಯಮಂತ್ರಿಗಳನ್ನು ವಿನಂತಿಸಿದರು.

ಸಂಸದೆ ಶೋಭಾ ಕರಂದ್ಲಾಜೆ, ಸಮ್ಮೇಳನ ಸಮಿತಿ ಗೌರವಾಧ್ಯಕ್ಷ ಶಾಸಕ ರಘುಪತಿ ಭಟ್, ಅಧ್ಯಕ್ಷ ನೇರಂಬಳ್ಳಿ ರಾಘವೇಂದ್ರ ರಾವ್, ಸ್ಮರಣ ಸಂಚಿಕೆ ಸಮಿತಿ ಅಧ್ಯಕ್ಷ ಪ್ರೊ.ಕೆ.ಇ.ರಾಧಾಕೃಷ್ಣ ಮಾತನಾಡಿದರು.

ಸಂಸದ ತೇಜಸ್ವಿ ಸೂರ್ಯ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ಎ.ರವಿಸುಬ್ರಮಣ್ಯ, ಬ್ರಾಹ್ಮಣ ಮಹಾಮಂಡಳಿಯ ಅಧ್ಯಕ್ಷ ಸಚ್ಚಿದಾನಂದಮೂರ್ತಿ, ಮಾಜಿ ಶಾಸಕ ಎ.ಜಿ.ಕೊಡ್ಗಿ, ಆರ್‌ಎಸ್‌ಎಸ್ ಕುಟುಂಬ ಪ್ರಭೋದಿನಿ ಪ್ರಮುಖ್ ಸು.ರಾಮಣ್ಣ, ಸಮ್ಮೇಳನದ ಉಪಾಧ್ಯಕ್ಷರಾದ ಯು.ಮಹೇಶ್ ಕಾರಂತ್, ರಘುನಾಥ ಸೋಮಯಾಜಿ, ಸಮ್ಮೇಳನ ಸಮಿತಿಯ ಎಸ್.ಕೃಷ್ಣಾನಂದ ಚಾತ್ರ, ಆರ್.ಲಕ್ಷ್ಮೀಕಾಂತ್, ಪವಿತ್ರಾ ಅಡಿಗ, ಪ್ರಕಾಶ್ ಐಯ್ಯಂಗಾರ್, ಕೆ.ರಾಮಪ್ರಸಾದ, ಕೆ.ರಾಮಕೃಷ್ಣ, ಸಿ.ಕೆ.ರಾಮಮೂರ್ತಿ, ಟಿ.ಕೆ.ಮಹಾಬಲೇಶ್ವರ ಭಟ್, ಗಣೇಶ್‌ರಾವ್ ಇದ್ದರು.

ಸುಧಾ ರಾಜಗೋಪಾಲ ಪ್ರಾರ್ಥಿಸಿದರು, ಭಾನುಪ್ರಕಾಶ ವೇದ ಘೋಶ ಮಾಡಿದರು, ಸ್ವಾಗತ ಸಮಿತಿ ಅಧ್ಯಕ್ಷ ಚಂದ್ರಶೇಖರ ಹೆಬ್ಬಾರ್ ಸ್ವಾಗತಿಸಿದರು, ಬ್ರಾಹ್ಮಣ ಮಹಾಸಭಾಧ್ಯಕ್ಷ ಕೆ.ಎನ್.ವೆಂಕಟನಾರಾಯಣ ಪ್ರಾಸ್ತಾವಿಕ ಮಾತನಾಡಿದರು, ನಟಿ ಅಪರ್ಣಾ ಎನ್ ನಿರೂಪಿಸಿದರು.

ಮೇಲುಕೋಟಿ ಸಂಸ್ಕೃತ ವಿಶ್ವ ವಿದ್ಯಾಲಯದಲ್ಲಿನ ಅಮೂಲ್ಯ ತಾಳೆಗರಿಗಳನ್ನು ರಾಜಕೀಯ ಕಾರಣಗಳಿಂದಾಗಿ ಮೈಸೂರು ವಿ.ವಿ ಯಲ್ಲಿ ಇಡಲಾಗಿದ್ದು, ಈ ತಾಳೆಗರಿಗಳನ್ನು ಸಂರಕ್ಷಣೆ ಮಾಡುವ ಅನೀವಾರ್ಯತೆ ಇರುವುದರಿಂದ. ಸಂರಕ್ಷಣೆಗಾಗಿ ಬೇಡಿಕೆ ಇಟ್ಟಿರುವ ಮಠ-ಮಂದಿರಗಳಿಗೆ ಅದನ್ನು ಹಸ್ತಾಂತರಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಳ್ಳಬೇಕು.
ಶೋಭಾ ಕರಂದ್ಲಾಜೆ. ಸಂಸದೆ, ಉಡುಪಿ-ಚಿಕ್ಕಮಗಳೂರು.