ಉಡುಪಿ: ಬ್ರಾಹ್ಮಣರು ಜ್ಞಾನ ಸಂಪಾದನೆಯ ಜತೆಗೆ ದೈಹಿಕ ಚೈತನ್ಯವನ್ನು ಪಡೆಯಬೇಕು. ಕ್ಷತ್ರೀಯ, ವೈಶ್ಯ,ಶೂದ್ರರನ್ನೂ ಪ್ರೀತಿ, ವಿಶ್ವಾಸದಿಂದ ಜತೆಯಾಗಿ ಕೊಂಡೊಯ್ಯುವ ಸಾಮರ್ಥ್ಯವನ್ನು ರೂಢಿಸಿಕೊಳ್ಳಬೇಕು. ಸಮಾಜ ತಿದ್ದುವ ಕೆಲಸ ಬ್ರಾಹ್ಮಣರು ಮಾಡಬೇಕು ಎಂದು ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಸ್. ಯಡಪಡಿತ್ತಾಯ ಹೇಳಿದರು.
ತುಳು ಶಿವಳ್ಳಿ ಬ್ರಾಹ್ಮಣರ ಪ್ರಥಮ ವಿಶ್ವ ಸಮ್ಮೇಳನದ ಅಂಗವಾಗಿ ರಾಜಾಂಗಣದಲ್ಲಿ ಶನಿವಾರ ನಡೆದ ಶೈಕ್ಷಣಿಕ ಸಮಾವೇಶದಲ್ಲಿ ಅವರು ಮಾತನಾಡಿದರು.
ಬ್ರಾಹ್ಮಣರು ಸಮಾಜದ ಎಲ್ಲರನ್ನು ಅರ್ಥೈಸಿಕೊಳ್ಳುವ ಮೂಲಕ ಗೌರವ ಸಂಪಾದನೆ ಮಾಡಬೇಕು. ರಾಜಕೀಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ಛಾಪು ಮೂಡಿಸಲು ಬ್ರಾಹ್ಮಣರು ಪ್ರಯತ್ನಿಸಬೇಕು. ಮಂತ್ರಶಕ್ತಿಯ ಮೂಲಕ ಸಂಸ್ಕಾರ, ನಂಬಿಕೆಗಳನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಸಾಧ್ಯ ಎಂದರು.
ನಿಟ್ಟೆ ವಿ.ವಿ.ಯ ಉಪಕುಲಪತಿ ಡಾ. ಎಂ.ಎಸ್. ಮೂಡಿತ್ತಾಯ ಮಾತನಾಡಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾರದಾ ವಿದ್ಯಾಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿ. ಗುರುಕುಲದಂತಹ ಶಿಕ್ಷಣ ಪದ್ಧತಿಯಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ ಸಾಧ್ಯವಿದೆ ಎಂದು ಅಭಿಪ್ರಾಯಪಟ್ಟರು.
ರಾಜಕೀಯ ಸ್ಥಾನಮಾನ ಸಿಗುತ್ತಿಲ್ಲ:
ಬ್ರಾಹ್ಮಣ ಸಮಾಜದ ಜನಸಂಖ್ಯೆ ವಿರಳವಾಗಿರುವುದರಿಂದ ಬ್ರಾಹ್ಮಣ್ಯರಿಗೆ ರಾಜಕೀಯ ಸ್ಥಾನಮಾನ ಸರಿಯಾಗಿ ಸಿಗುತ್ತಿಲ್ಲ. ಸರ್ಕಾರದ ಯಾವುದೇ ಸೌಲಭ್ಯಗಳು ಬ್ರಾಹ್ಮಣರಿಗೆ ಲಭಿಸುತ್ತಿಲ್ಲ. ಹಾಗಾಗಿ ಮಕ್ಕಳನ್ನು ಶೈಕ್ಷಣಿಕವಾಗಿ ಪ್ರಬುದ್ಧರನ್ನಾಗಿ ಮಾಡುವುದರಜತೆಗೆ ಅವರು ಆಡಳಿತಾತ್ಮಕ ಹುದ್ದೆಯಲ್ಲಿ ಮುಂದೆ ಬರುವಂತೆ ಮಾಡಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಶೇಷಶಯನ ಕಾರಿಂಜ ಹೇಳಿದರು.
ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಸ್ವಾಮೀಜಿ, ಶ್ರೀನಿವಾಸ ವಿ.ವಿ. ಕುಲಪತಿ ರಾಘವೇಂದ್ರ ರಾವ್ ಉಪಸ್ಥಿತರಿದ್ದರು. ಶ್ರೀನಿವಾಸ ಬಲ್ಲಾಳ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಲರಾಮ ಭಟ್ ವಂದಿಸಿದರು.