ಅತಿಯಾದ ಮೊಬೈಲ್ ಬಳಕೆಗೆ ತಾಯಿ ಬೈದಿದ್ದಕ್ಕೆ ಬಾಲಕ ಆತ್ಮಹತ್ಯೆ

ಮಂಗಳೂರು: ಅತಿಯಾದ ಮೊಬೈಲ್ ಬಳಕೆಗೆ ತಾಯಿ ಬೈದಿದ್ದಕ್ಕೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ಓದುತ್ತಿದ್ದ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜನವರಿ 30ರಂದು ನಡೆದಿದೆ.

ಮೃತ ಬಾಲಕನನ್ನು ಜ್ಞಾನೇಶ್(14) ಎಂದು ಗುರುತಿಸಲಾಗಿದೆ. ಪದವು ಬಿ ಹಳ್ಳಿಯ ಕೋಟಿಮುರದಲ್ಲಿರುವ ರೆಡ್ ಬ್ರಿಕ್ಸ್ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದ ಜ್ಞಾನೇಶ್, ಜಗದೀಶ್ ಮತ್ತು ವಿನಯಾ ದಂಪತಿಯ ಪುತ್ರ. ಈತ ನಿರಂತರವಾಗಿ ಮೊಬೈಲ್ ಬಳಸುತ್ತಿದ್ದ ಮತ್ತು ಈ ಕಾರಣಕ್ಕಾಗಿ ಈತನ ತಾಯಿ ಈತನಿಗೆ ಬೈದಿದ್ದಾರೆ.

ತಾಯಿಯ ಬೈಗುಳದ ಬಳಿಕ, ಸ್ನಾನ ಮಾಡಿ ಬರುವುದಾಗಿ ಹೇಳಿ ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾನೆ. ಬಹಳ ಹೊತ್ತಾದರೂ ಆತ ವಾಪಸ್ ಬಾರದ ಕಾರಣ ತಂದೆ ಜಗದೀಶ್ ಸ್ನಾನಗೃಹದ ಕಿಟಕಿಯಿಂದ ಇಣುಕಿ ನೋಡಿದಾಗ ಜ್ಞಾನೇಶ್ ಚಾವಣಿಗೆ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಆತನನ್ನು ಕೆಳಗಿಳಿಸಿ ನೇಣಿಗೆ ಬಳಸಿದ್ದ ಬಟ್ಟೆ ಕತ್ತರಿಸಿದರೂ ಅದಾಗಲೇ ಜ್ಞಾನೇಶ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಂಕನಾಡಿ ನಗರ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.