ಬೊಮ್ಮರಬೆಟ್ಟು ಗ್ರಾಪಂ ಕಾಂಗ್ರೆಸ್ ತೆಕ್ಕೆಗೆ: ಜಿಲ್ಲಾಧ್ಯಕ್ಷರ ಸ್ವಕ್ಷೇತ್ರದಲ್ಲೇ ಬಿಜೆಪಿಗೆ ಹಿನ್ನಡೆ

ಉಡುಪಿ: ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರ ಸ್ವಕ್ಷೇತ್ರವಾದ ಬೊಮ್ಮರಬೆಟ್ಟು ಗ್ರಾಮ ಪಂಚಾಯತ್‌ ಕಾಂಗ್ರೆಸ್ ತೆಕ್ಕೆಗೆ ಜಾರಿದ್ದು, ಬಿಜೆಪಿಗೆ ಬಹುಮತವಿದ್ದರೂ ಅಧಿಕಾರ ಹಿಡಿಯುವಲ್ಲಿ ವಿಫಲವಾಗಿದೆ.

21 ಸದಸ್ಯ ಬಲ ಹೊಂದಿರುವ ಹಿರಿಯಡಕ ಬೊಮ್ಮರಬೆಟ್ಟು ಗ್ರಾಪಂನಲ್ಲಿ ಬಿಜೆಪಿ 11 ಹಾಗೂ ಕಾಂಗ್ರೆಸ್ 10 ಸದಸ್ಯರು ಗೆಲುವು ಸಾಧಿಸಿದ್ದರು.
ಇಂದು ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಮುಂಡುಜೆ ಸುರೇಶ್ ನಾಯಕ್ ಅವರು 10 ಮತಗಳನ್ನು ಪಡೆದು ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಹರೀಶ್ ಸಾಲಿಯಾನ್ 9 ಮತಗಳನ್ನು ಪಡೆದರು. ಉಪಾಧ್ಯಕ್ಷೆ ಸ್ಥಾನ ಕೂಡ ಕಾಂಗ್ರೆಸ್‌ ಗೆ ಒಲಿದಿದ್ದು, ಲತಾ ಸುರೇಶ್ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಬಿಜೆಪಿ ಸದಸ್ಯನ ಅಡ್ಡ ಮತದಾನ:
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಮೂರು ಬಾರಿ ಗೆದ್ದಿರುವ ಉಮೇಶ್ ಶೆಟ್ಟಿ ಅವರನ್ನು ಈ ಮೊದಲು ಆಯ್ಕೆ ಮಾಡಲಾಗಿತ್ತು. ಆದರೆ ಕಡೆ ಕ್ಷಣದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಅವರು ಹರೀಶ್ ಸಾಲಿಯಾನ್‌ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧೆ ಮಾಡುವಂತೆ ಸೂಚಿಸಿದರು.

ಇದರಿಂದ ಅಸಮಾಧಾನಗೊಂಡ ಉಮೇಶ್ ಶೆಟ್ಟಿ ಅವರು ಅಧ್ಯಕ್ಷ ಸ್ಥಾನ ಚುನಾವಣೆ ಸಂದರ್ಭದಲ್ಲಿ ಗೈರಾಗಿದ್ದರು. ಅಲ್ಲದೆ, ಇನ್ನೋರ್ವ ಬಿಜೆಪಿ ಬೆಂಬಲಿತ ಸದಸ್ಯ ಅಡ್ಡಮತದಾನ ಮಾಡಿದ್ದು, ಇದರಿಂದ ಕಾಂಗ್ರೆಸ್ ಸುಲಭವಾಗಿ ಅಧ್ಯಕ್ಷ ಪಟ್ಟ ಅಲಂಕರಿಸಿತು.