ಮಂಗಳೂರು: ಇಲ್ಲಿನ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದ ಆರೋಪಿ ಉಡುಪಿಯ ಹೆಬ್ರಿ ತಾಲ್ಲೂಕು ಮುದ್ರಾಡಿಯ ವಸಂತ ಕೃಷ್ಣ ಶೇರಿಗಾರ (33) ಎಂಬಾತನನ್ನು ಬಂಧಿಸಲಾಗಿದ್ದು, ಈತ ಈ ಹಿಂದೆ ಸ್ಫೋಟಕ ಇಟ್ಟು ಭಾರಿ ಸುದ್ದಿಯಾಗಿದ್ದ ಆರೋಪಿ ಆದಿತ್ಯ ರಾವ್ ನಂತೆ ಪ್ರಸಿದ್ಧಿ ಪಡೆಯುವ ಉದ್ದೇಶದಿಂದ ಹುಸಿ ಬಾಂಬ್ ಕರೆ ಮಾಡಿದ್ದನು ಎಂಬ ಸಂಗತಿ ವಿಚಾರಣೆಯಿಂದ ತಿಳಿದುಬಂದಿದೆ.
ಇಂದು ಸುದ್ದಿಗೋಷ್ಠಿಯಲ್ಲಿ ನಗರ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಈ ಬಗ್ಗೆ ಮಾಹಿತಿ ನೀಡಿದರು.
ಬಂಧಿತ ಆರೋಪಿ ವಸಂತ್ ಈ ಹಿಂದೆ ಬೆಂಗಳೂರಿನ ಹೋಟೆಲ್ನಲ್ಲಿ ಮೂರ್ನಾಲ್ಕು ವರ್ಷ ಕೆಲಸ ಮಾಡಿದ್ದನು. ಬಳಿಕ ಅಲ್ಲಿಂದ ಊರಿಗೆ ಮರಳಿ ಉಡುಪಿಯ ಹೋಟೆಲ್ವೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ. ಲಾಕ್ಡೌನ್ ಕಾರಣದಿಂದ ಮನೆಯಲ್ಲಿದ್ದ ಈತ ಗೂಗಲ್ ಮೂಲಕ ಮಾಜಿ ನಿರ್ದೇಶಕ ಎಂ. ಆರ್. ವಾಸುದೇವ ಮೊಬೈಲ್ ನಂಬರ್ ಪಡೆದುಕೊಂಡು ಬಾಂಬ್ ಇಡುವುದಾಗಿ ಬೆದರಿಕೆ ಹಾಕಿದ್ದನು. ಅಲ್ಲದೆ, ಈ ಹಿಂದಿನ ಬಾಂಬ್ ಘಟನೆಯಿಂದ ಪ್ರೇರಿತಗೊಂಡು ಪ್ರಸಿದ್ಧಿ ಪಡೆಯುವ ಸಲುವಾಗಿ ಈ ಕೃತ್ಯ ಮಾಡಿದ್ದೇನೆ ಎಂದು ವಿಚಾರಣೆಯಲ್ಲಿ ಒಪ್ಪಿಕೊಂಡಿದ್ದಾನೆ ಅವರು ತಿಳಿಸಿದ್ದಾರೆ.