ಮಂಗಳೂರು: ಮುಂದಿನ ವರ್ಷದ ಜನವರಿ 1 ರಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಪಡಿತರದಲ್ಲಿ ಕುಚ್ಚಲಕ್ಕಿ ವಿತರಿಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಪಡಿತರ ಮೂಲಕ ಕುಚ್ಚಲಕ್ಕಿಯನ್ನು ನೀಡುವಂತೆ ಕರಾವಳಿಗರು ಬಹು ದಿನಗಳಿಂದ ಬೇಡಿಕೆ ಇಟ್ಟಿದ್ದು, ಇದನ್ನು ಗಮನಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಲಕ್ಕಿ ವಿತರಣೆಗೆ ಅನುಮತಿ ನೀಡಿದ್ದಾರೆ. ಮುಖ್ಯಮಂತ್ರಿ ಬೊಮ್ಮಾಯಿ ಉಡುಪಿ ಭೇಟಿ ಸಂದರ್ಭದಲ್ಲಿ ಈ ಕುರಿತು ಘೋಷಣೆ ಮಾಡಿದ್ದರು. ಹಾಗಾಗಿ ಮುಂದಿನ ವರ್ಷ ಆರಂಭದಿಂದಲೇ ಕುಚ್ಚಲಕ್ಕಿ ವಿತರಿಸಲಾಗುವುದು. ಕೇಂದ್ರ ಸರಕಾರವು ಪ್ರತೀ ಕ್ವಿಂಟಾಲ್ ಭತ್ತಕ್ಕೆ 2040 ರೂ. ಬೆಂಬಲ ಬೆಲೆ ನಿಗದಿ ಮಾಡಿದೆ. ಆದರೆ, ರೈತರು ಈ ದರದಲ್ಲಿ ಭತ್ತ ನೀಡಲು ಸಿದ್ಧರಿಲ್ಲ. ಹೀಗಾಗಿ ರಾಜ್ಯ ಸರಕಾರವು ಪ್ರತೀ ಕ್ವಿಂಟಾಲ್ ಭತ್ತಕ್ಕೆ ಹೆಚ್ಚುವರಿಯಾಗಿ 500 ರೂ. ಸೇರಿಸಿ, 2540 ರೂ.ನೀಡಿ ಭತ್ತ ಖರೀದಿ ಮಾಡಿ ಪಡಿತರ ಮೂಲಕ ಗ್ರಾಹಕರಿಗೆ ನೀಡಲಿದೆ. ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು 5 ಕೆಜಿ ಕುಚ್ಚಲಕ್ಕಿ ಸಿಗಲಿದೆ. ಸಚಿವರ ಪ್ರಕಾರ, ಮೂರು ಜಿಲ್ಲೆಗಳಿಗೆ ಸರಬರಾಜು ಮಾಡಲು ಪ್ರತಿ ತಿಂಗಳು ಕನಿಷ್ಠ 1 ಲಕ್ಷ ಟನ್ ಅಕ್ಕಿ ಅಗತ್ಯವಿದೆ. 13 ಲಕ್ಷ ಕ್ವಿಂಟಲ್ ಭತ್ತ ಖರೀದಿ ಗುರಿ ಹೊಂದಿದ್ದು, ಕನಿಷ್ಠ 8.5 ಲಕ್ಷ ಕ್ವಿಂಟಲ್ ಭತ್ತ ಸಿಗುವ ವಿಶ್ವಾಸವಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.