ಕುಂದಾಪುರ: ನಾವು ಮಾಡುವ ಒಳ್ಳೆಯ ಕೆಲಸಗಳನ್ನು ಭಗವಂತ ಪ್ರತಿ ಕ್ಷಣವೂ ನೋಡುತ್ತಿರುತ್ತಾನೆ. ಬೇರೆಯವರ ಬಗ್ಗೆ ಕಾಳಜಿ ತೋರುವವರು ಯಾವಾಗಲೂ ಆರೋಗ್ಯವಂತರಾಗಿರುತ್ತಾರೆ. ಮನಸ್ಸಿನಲ್ಲಿ ಪ್ರೀತಿ ತುಂಬಿಕೊಂಡಿದ್ದರೆ ಆರೋಗ್ಯದ ಸ್ಥಿತಿ ಸ್ಥಿರವಾಗಿರುತ್ತದೆ. ಹೀಗಾಗಿ ಅಪ್ಪಣ್ಣ ಹೆಗ್ಡೆಯವರು ಈ ವಯಸ್ಸಿನಲ್ಲಿಯೂ ಆರೋಗ್ಯವಂತರಾಗಿದ್ದಾರೆ ಎಂದು ಪದ್ಮಭೂಷಣ ಡಾ.ಬಿ.ಎಂ.ಹೆಗ್ಡೆ ಅಭಿಪ್ರಾಯ ವ್ಯಕ್ತಪಡಿಸಿದರು.
ಬಸ್ರೂರು ಶ್ರೀ ಶಾರದಾ ಕಾಲೇಜಿನಲ್ಲಿ ಸೋಮವಾರ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ಬಸ್ರೂರು ಅಪ್ಪಣ್ಣ ಹೆಗ್ಡೆಯವರ ೮೪ ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ನಡೆದ ದತ್ತಿನಿಧಿ ವಿತರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿ.ಪಿ, ಸಕ್ಕರೆ ಕಾಯಿಲೆ ಆರೋಗ್ಯವನ್ನು ನಿರೀಕ್ಷೆ ಮಾಡಿದಷ್ಟು ಹಾಳು ಮಾಡುವುದಿಲ್ಲ. ಆದರೆ ಮಧ್ಯ ಹಾಗೂ ಸಿಗರೇಟ್ ಸೇವನೆ ಆರೋಗ್ಯವನ್ನು ಕೊಲ್ಲುತ್ತದೆ. ನಗು ಆರೋಗ್ಯ ವರ್ಧನೆಗೆ ಟಾನಿಕ್ ಇದ್ದಂತೆ. ಆದರೆ ನಗು ಆಂತರಾಳದಿಂದ ಹೊರ ಬರಬೇಕು ಎಂದರು. ಉಡುಪಿ ಅಂಬಲಪಾಡಿ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಡಾ.ವಿಜಯ್ಬಲ್ಲಾಳ್ ಅವರು ಶಿಕ್ಷಣ, ಸಾಹಿತ್ಯ ಹಾಗೂ ರಂಗಭೂಮಿ ಪುರಸ್ಕೃತ ಸಾಹಿತಿ ಕೋ.ಶಿವಾನಂದ ಕಾರಂತ್ ಅವರಿಗೆ ೨೦೧೮ ನೇ ಸಾಲಿನ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ನೀಡುವ ಪ್ರಶಸ್ತಿ ಪ್ರದಾನ ಮಾಡಿದರು.
ವೈದ್ಯಕೀಯ ಹಾಗೂ ಶಿಕ್ಷಣ ಕ್ಷೇತ್ರದ ಹಲವು ಫಲಾನುಭವಿಗಳಿಗೆ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನದ ವತಿಯಿಂದ ದತ್ತಿನಿಧಿ ವಿತರಣೆ ನಡೆಯಿತು. ಬಸ್ರೂರು ಶ್ರೀ ಶಾರದಾ ಕಾಲೇಜು ಪ್ರಾಂಶುಪಾಲ ಪ್ರೊ.ರಾಧಾಕೃಷ್ಣ ಶೆಟ್ಟಿ ಸ್ವಾಗತಿಸಿದರು, ತಾಲ್ಲೂಕು ಪಂಚಾಯಿತಿ ಸದಸ್ಯ ಕಿಶನ್ಹೆಗ್ಡೆ ಬಸ್ರೂರು ಪ್ರಾಸ್ತಾವಿಕ ಮಾತನಾಡಿದರು, ಪ್ರತಿಷ್ಠಾನದ ಟ್ರಸ್ಟಿ ಅನುಪಮಾ ಎಸ್ಶೆಟ್ಟಿ ಅಭಿನಂದನಾ ಪತ್ರ ವಾಚಿಸಿದರು, ದಿನಕರ ಆರ್ಶೆಟ್ಟಿ ಹಾಗೂ ಅಕ್ಷಯ್ ಹೆಗ್ಡೆ ಮೊಳಹಳ್ಳಿ ನಿರೂಪಿಸಿದರು.