ಕುಂದಾಪುರ: ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಪ್ರಯುಕ್ತ ಸೇವಾ ಪಾಕ್ಷಿಕದ ಅಂಗವಾಗಿ ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ, ಮತ್ತು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇವರ ಸಹಯೋಗದಲ್ಲಿ ಸೆ.27 ಮಂಗಳವಾರದಂದು ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಕುಂದಾಪುರ ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾದ ಅಧ್ಯಕ್ಷೆ ಶ್ರೀಮತಿ ವೀಣಾ ಎಸ್ ಶೆಟ್ಟಿ ಉದ್ಘಾಟಿಸಿ ಮಾತನಾಡಿ, ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಆಶಯದಂತೆ ಸೇವಾ ಪಾಕ್ಷಿಕದ ಅಂಗವಾಗಿ ಅಭಯಹಸ್ತ ಟ್ರಸ್ಟ್ ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳ ಸಹಕಾರದಲ್ಲಿ ಸರಣಿ ರಕ್ತದಾನ ಶಿಬಿರವನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಓಬಿಸಿ ಮೋರ್ಚಾ ಜಿಲ್ಲಾಧ್ಯಕ್ಷರಾದ ಸುರೇಂದ್ರ ಪಣಿಯೂರು ಮಾತನಾಡಿ ಉಡುಪಿ ಜಿಲ್ಲೆಯಾದ್ಯಂತ ಅಭಯಹಸ್ತ ಟ್ರಸ್ಟ್ ಆಯೋಜಿಸುವ ಎಲ್ಲ ರಕ್ತದಾನ ಶಿಬಿರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಭಾಪತಿ ಜಯಕರ್ ಶೆಟ್ಟಿ ಮಾತನಾಡಿ, ಯಾವುದೇ ಫಲಾಪೇಕ್ಷೆ ಇಲ್ಲದೆ ಉಡುಪಿ ಜಿಲ್ಲೆಯಾದ್ಯಂತ ರಕ್ತದಾನದ ಪೂರೈಕೆಗೆ ಶ್ರಮಿಸುತ್ತಿರುವ ಅಭಯಹಸ್ತ ಟ್ರಸ್ಟ್ ಒಂದು ಮಾದರಿ ಸಂಘಟನೆ ಎಂದರು.
ಈ ಸಂದರ್ಭದಲ್ಲಿ ಡಾ.ಸೋನಿ, ರಕ್ತದ ಆಪತ್ಭಾಂದವ ಸತೀಶ್ ಸಾಲ್ಯಾನ್ ಮಣಿಪಾಲ್, ಅಭಯಹಸ್ತ ಟ್ರಸ್ಟ್ ನ ಶರತ್ ಕಾಂಚನ್ ಆನಗಳ್ಳಿ, ಅಭಯಹಸ್ತ ಪ್ರಶಾಂತ್ ತಲ್ಲೂರು ಹಾಗೂ ಇತರರು ಉಪಸ್ಥಿತರಿದ್ದರು.
ಮಹೇಂದ್ರ ಉಪ್ಪಿನಕುದ್ರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು, ಅರವಿಂದ ಉಪ್ಪಿನಕುದ್ರು ವಂದಿಸಿದರು.












